ಕಲಾವಿದನಾಗಿ ಮೇಳದ ವ್ಯವಸ್ಥಾಪಕರಾಗಿ ಯಕ್ಷಗಾನರಂಗದಲ್ಲಿ ಕೆ.ಹೆಚ್.ದಾಸಪ್ಪ ರೈಗಳದ್ದು ದೊಡ್ಡ ಹೆಸರು. ಕರ್ನಾಟಕ, ಕದ್ರಿ, ಕುಂಬ್ಳೆ, ಮಂಗಳಾದೇವಿ ಮೊದಲಾದ ಮೇಳಗಳಲ್ಲಿ ತಿರುಗಾಟ ಮಾಡಿದ ರೈಗಳದ್ದು ಸುಮಾರು ಐದಾರು ದಶಕಗಳ ಕಲಾಸೇವೆ. ತುಳು-ಕನ್ನಡ ಪ್ರಸಂಗಗಳ ಕಥಾನಾಯಕ ಮತ್ತು ಖಳನಾಯಕನಾಗಿ ಮೆರೆದ ರೈಗಳಿಗೆ ಕೋಟಿ-ಚೆನ್ನಯ ಪ್ರಸಂಗದ ಕೋಟಿಯ ಪಾತ್ರ ಅಪಾರ ಕೀರ್ತಿಯನ್ನು ತಂದು ಕೊಟ್ಟಿದೆ. ಮೂಡಬಿದ್ರೆ ಮಾಧವ ಶೆಟ್ಟರ ನಿಡುಗಾಲದ ಒಡನಾಡಿಯಾಗಿರುವ ಕೆ.ಹೆಚ್.ದಾಸಪ್ಪ ರೈ, ಮಾಧವ ಶೆಟ್ಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಮಾಧವ ಶೆಟ್ಟಿ
1930ರಲ್ಲಿ ತನ್ನ ಮೊದಲ ತಿರುಗಾಟ ಪ್ರಾರಂಭಿಸಿದ ಮಾಧವ ಶೆಟ್ಟರು ನಿತ್ಯವೇಷ, ಸ್ತ್ರೀವೇಷ, ಪುಂಡುವೇಷ, ಪೀಠಿಕೆ ವೇಷ ಹೀಗೆ ಹಂತಹಂತವಾಗಿ ಮೇಲೇರುತ್ತಾ ಹೋಗಿ ಬಣ್ಣದ ವೇಷ ನಿರ್ವಹಿಸುವುದಕ್ಕೂ ಸಮರ್ಥರಾದರು. ಕುಂಬ್ಳೆಯಿಂದ ಮೂಡಬಿದ್ರೆಗೆ ವಲಸೆ ಬಂದು ನೆಲೆಸಿದ ಶೆಟ್ಟರು ಮೂಡಬಿದ್ರೆ ಮಾಧವ ಶೆಟ್ಟಿ ಎಂದು ಕಲಾಲೋಕದಲ್ಲಿ ವಿಖ್ಯಾತರಾದರು.
ಕೂಡ್ಲು, ಕಟೀಲು, ಮುಲ್ಕಿ, ಧರ್ಮಸ್ಥಳ, ಕರ್ನಾಟಕ, ಕದ್ರಿ ಮೊದಲಾದ ಮೇಳಗಳಲ್ಲಿ ತಿರುಗಾಟ ಮಾಡಿದ ಮಾಧವ ಶೆಟ್ಟರ ಬಹುಕಾಲದ ತಿರುಗಾಟ ನಡೆದದ್ದು ಕಲ್ಲಾಡಿ ಮನೆತನದ ಕುಂಡಾವು ಮತ್ತು ಕರ್ನಾಟಕ ಮೇಳಗಳಲ್ಲಿ. ರಂಗಸ್ಥಳದಲ್ಲಿ ಅಸಾಧಾರಣ ವೇಷಧಾರಿಯಾಗಿ ಮೆರೆದ ಮಾಧವ ಶೆಟ್ಟರು ತಾಳಮದ್ದಳೆಯ ಅರ್ಥಧಾರಿಯಾಗಿಯೂ ಸೈ ಎನಿಸಿದ್ದಾರೆ. ಪಾತ್ರಗೌರವವರಿತು ಹಿತಮಿತವಾಗಿ ಚೊಕ್ಕವಾಗಿ ಮಾಧವ ಶೆಟ್ಟರ ಮಾತು ಪ್ರೇಕ್ಷಕ ಸಮುದಾಯವನ್ನು ಮೋಡಿಮಾಡುವಂತಿತ್ತು.
ದೇವೇಂದ್ರ, ಇಂದ್ರಜಿತು, ಹಿರಣ್ಯಾಕ್ಷ, ಹಿರಣ್ಯಕಶ್ಯಪ, ಕರ್ಣ, ಕಂಸ, ಕೌರವ, ರಾವಣ, ಮೈರಾವಣ, ಭೀಮ, ವಾಲಿ, ನರಕಾಸುರ, ಶೂರ್ಪನಖೀ, ಅಜಮುಖೀ…ಹೀಗೆ ರಾಜಬಣ್ಣ, ಹೆಣ್ಣುಬಣ್ಣ, ಎದುರುವೇಷ, ಪೀಠಿಕೆ ವೇಷ, ನಾಟಕೀಯ ವೇಷ ಮುಂತಾದ ಎಲ್ಲಾರೀತಿಯ ಪಾತ್ರಗಳನ್ನು ನಿರ್ವಹಿಸಿದವರು ಮಾಧವ ಶೆಟ್ಟರು. ತೆರೆಕಲಾಸು, ಸಭಾಕಲಾಸು, ತೆರೆಪೊರಪ್ಪಾಟುಗಳು, ಒಡ್ಡೋಲಗದ ಕ್ರಮಗಳು…ಹೀಗೆ ಸಮಗ್ರ ಸಂಗತಿಗಳ ಜ್ಞಾನವಿದ್ದ ಮೂಡಬಿದ್ರೆ ಮಾಧವ ಶೆಟ್ಟರು ರಂಗಸ್ಥಳದ ಸಮಗ್ರತೆಯ ಸಂಕೇತವಾಗಿದ್ದರು.
ರಾಜವೇಷಗಳಲ್ಲಿ ಅಪಾರಸಿದ್ಧಿ ಪಡೆದಿದ್ದ ಶೆಟ್ಟರು ರಾಮ, ನಳ, ಹರಿಶ್ಚಂದ್ರ ಮುಂತಾದ ಪಾತ್ರಗಳಲ್ಲಿ ಸೈ ಅನಿಸಿದ್ದರು. ಕೋಟಿ-ಚೆನ್ನಯ, ದೇವುಪೂಂಜ ಪ್ರಸಂಗದ ಕಾಂತಣ್ಣ, ದಳವಾಯಿ ದುಗ್ಗಣ್ಣ ಪ್ರಸಂಗದ ಯುವರಾಜ, ಸಿರಿಮಹಾತ್ಮೆಯ ಬಿರ್ಮಣ್ಣ ಪಾತ್ರಗಳು ಇವರಿಗೇ ಮೀಸಲು. ವೃದ್ಧನ ಪಾತ್ರವನ್ನು ಇವರಂತೆ ನಿರ್ವಹಿಸುತ್ತಿದ್ದ ಕಲಾವಿದ ಇವರೋರ್ವರೇ. ಪಾತ್ರಗಳಲ್ಲಿ ಎದ್ದು ತೋರುತ್ತಿದ್ದುದು ಭಾವಸಹಿತ ಅಭಿನಯ.
– ತಾರಾನಾಥ ವರ್ಕಾಡಿ