ಉಳ್ಳಾಲ: ಉಳ್ಳಾಲದಲ್ಲಿ ಪ್ರವಾಸೋದ್ಯಮದೊಂದಿಗೆ ವ್ಯಾವಹಾರಿಕ ಅಭಿವೃದ್ಧಿಗೆ ಬೀಚ್ ಉತ್ಸವ ಪೂರಕವಾಗಿದ್ದು, ಮುಂದಿನ ವರ್ಷದಿಂದ ಸರಕಾರ ಇಂತಹ ಕಾರ್ಯಕ್ಕೆ ಮುಂದಾಗಬೇಕು ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.
ಅವರು ಮೊಗವೀರ ಹಿರಿಯ ಪ್ರಾಥಮಿಕ ಶಾಲಾ ಹಳೇ ವಿದ್ಯಾರ್ಥಿ ಸಂಘ, ಬ್ರದರ್ಸ್ ನ್ಪೋರ್ಟ್ಸ್ ಕ್ಲಬ್ ಹಾಗೂ ಬ್ರದರ್ಸ್ ಯುವಕ ಮಂಡಲ ಇದರ ವಜ್ರಮಹೋತ್ಸವದ ಆಂಗವಾಗಿ ನಡೆದ ಬೀಚ್ ಉತ್ಸವಕ್ಕೆ ಚಾಲನೆ ಮತ್ತು ಮಾಧವ ಮಂಗಳ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಉಳ್ಳಾಲ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಸುಭಾಷ್ ಪೂಜಾರಿ ಮತ್ತು ಗುಳಿಗ ಪಾತ್ರಿ ಹರಿಶ್ಚಂದ್ರ ಪೂಜಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬ್ಲೂಲೈನ್ಸ್ ಫುಡ್ಸ್ ಪ್ರೈ.ಲಿ.ನ ಆಡಳಿತ ನಿರ್ದೇಶಕ ಶೌಕತ್ ಶೌರಿ ಬೀಚ್ ಉತ್ಸವಕ್ಕೆ ಚಾಲನೆ ನೀಡಿದರು.
ಮಂಗಳೂರಿನ ಕಾಂಚನ್ ಮೋಟಾರ್ನ ಮಾಲಕ ಪ್ರಸಾದ್‌ರಾಜ್ ಕಾಂಚನ್, ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೊಳಿಯಾರ್, ಶಿವಾಜಿ ಜೀವರಕ್ಷಕ ಈಜುಗಾರರ ಸಂಘದ ಅಧ್ಯಕ್ಷ ಕಿರಣ್ ಪುತ್ರನ್, ಜೀವರಕ್ಷಕ ಈಜುಗಾರ ಸಂಘದ ಅಧ್ಯಕ್ಷ ಮೋಹನ್ ಪುತ್ರನ್, ಪ್ರವೀಣ್ ಕೋಟ್ಯಾನ್, ಮೊಗವೀರ ಹಿ. ಪ್ರಾ. ಶಾಲೆಯ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಧುರಾಜ್ ಅಮೀನ್, ವಜ್ರ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ದೇವದಾಸ್ ಪುತ್ರನ್, ಅಧ್ಯಕ್ಷ ಮನೋಜ್ ಸಾಲ್ಯಾನ್, ಕೋಶಾಧಿಕಾರಿ ಸುನಿಲ್ ಪುತ್ರನ್ ಉಪಸ್ಥಿತರಿದ್ದರು.
ಸಮ್ಮಾನ
ಈ ಸಂದರ್ಭದಲ್ಲಿ ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾಜಿ ಈಜುಗಾರರ ಸಂಘ ಉಳ್ಳಾಲ ಅವರನ್ನು ಮಾಧವ ಮಂಗಳಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೀವರಕ್ಷಕ ಈಜುಗಾರರ ಸಂಘವನ್ನು ಸಮ್ಮಾನಿಸಲಾಯಿತು.
ವಜ್ರಮಹೋತ್ಸವ ಸಮಿತಿಯ ಪ್ರಧಾನ ಸಂಚಾಲಕ ವಿಶ್ವನಾಥ ಬಂಗೇರ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪುತ್ರನ್ ವರದಿ ವಾಚಿಸಿದರು. ನಿವೃತ್ತ ಶಿಕ್ಷಕ ಎಂ. ವಾಸುದೇವ ರಾವ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಾಧ್ಯಕ್ಷ ರಾಜೇಶ್ ಪುತ್ರನ್ ವಂದಿಸಿದರು.