Advertisement

ಮಡೆ ಮಡಸ್ನಾನ: ಸುಪ್ರೀಂನಲ್ಲಿ ದಾವೆ

01:15 PM Feb 28, 2018 | Harsha Rao |

ಪುತ್ತೂರು: ಐತಿಹಾಸಿಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಾದಕ್ಕೆ ಗುರಿಯಾಗಿದ್ದ ಮಡೆ ಮಡಸ್ನಾನ ವಿಚಾರಣೆಯ ದಾವೆಯನ್ನು ಸುಪ್ರೀಂ ಕೋರ್ಟ್‌ ದಾಖಲಿಸಿಕೊಂಡಿದೆ. ಸದ್ಯದಲ್ಲೇ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಬಂಟ್ವಾಳ ಮಾಣಿಯ ಪಾರ್ಪಜೆ ವೆಂಕಟ್ರಮಣ ಭಟ್ಟ ಮಕರಂದ ಅವರು ದಾವೆ ದಾಖಲಿಸಿದ್ದಾರೆ. ಭಕ್ತರ ನೆಲೆಯಲ್ಲಿ ದಾವೆ ಸಲ್ಲಿಸಿರುವ ಇವರು, ತಮ್ಮ ಹಕ್ಕನ್ನು ಉಳಿಸಿಕೊಡುವಂತೆ ಕೇಳಿ ಕೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರಿರುವ ಪೂರ್ಣಪೀಠ ದಾವೆಯ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.

Advertisement

2012ರಿಂದ ಮಡೆ ಮಡಸ್ನಾನದ ವಿವಾದ ಚಾಲ್ತಿಯಲ್ಲಿದೆ. ಧಾರ್ಮಿಕ ದತ್ತಿ ಇಲಾಖೆಯ ಕಾರ್ಯದರ್ಶಿ ನಿಷೇಧದ ಆದೇಶ ಹೊರಡಿಸುತ್ತಿದ್ದಂತೆ ವಿವಾದ ತಲೆ ಎತ್ತಿತ್ತು. ಆದೇಶವನ್ನು ಪ್ರಶ್ನಿಸಿ, ಆದಿವಾಸಿ ಬುಡ ಕಟ್ಟು ಹಿತ ರಕ್ಷಣ ವೇದಿಕೆಯವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಮಡೆ ಸ್ನಾನದ ಬದಲು ದನದ ಎಂಜಲೆಲೆ ಮೇಲೆ ಎಡೆಸ್ನಾನ ಮಾಡುವಂತೆ ಹೈಕೋರ್ಟ್‌ ಆದೇಶ ಹೊರಡಿಸಿತು. ಇದರಿಂದ ತೃಪ್ತರಾಗದ ಆದಿವಾಸಿ ಬುಡಕಟ್ಟು ಹಿತರಕ್ಷಣ ವೇದಿಕೆಯವರು ಸುಪ್ರೀಂ ಮೆಟ್ಟಿಲೇರಿದರು. ಸುಪ್ರೀಂ ಕೋರ್ಟ್‌ ಮನವಿಯನ್ನು ಪುರಸ್ಕರಿಸಿ, ಮಡೆ ಮಡಸ್ನಾನಕ್ಕೆ ಅವಕಾಶ ಕಲ್ಪಿಸಿತು. 2014ರಲ್ಲಿ ಶ್ರೀ ವೀರಭದ್ರ ಚೆನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮಿ, ಎಚ್‌.ಎಸ್‌.ದೊರೆಸ್ವಾಮಿ ಅವರು ಸುಪ್ರೀಂ ಕೋರ್ಟ್‌ನ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು. ಈಗ ಮತ್ತೆ ಸುಪ್ರೀಂ ಕೋರ್ಟ್‌ ವಿಚಾರಣೆ ಕೈಗೆತ್ತಿಕೊಂಡಿದೆ.

ಯಾಕಾಗಿ?
ಚಂಪಕಾಷಷ್ಠಿ ವೇಳೆ ಮಡೆ ಮಡಸ್ನಾನಕ್ಕೆ ಅವಕಾಶ ಕೋರಿ ವೆಂಕಟ್ರಮಣ ಭಟ್ಟ ಅವರು ಮನವಿ ಮಾಡಿ ಕೊಂಡಿದ್ದರು. ಇದಕ್ಕೆ ದೇಗುಲ ಆಡಳಿತ ಮಂಡಳಿ ನಿರಾಕರಿಸಿತ್ತು.

ಮಡೆಸ್ನಾನ ತನ್ನ ಧಾರ್ಮಿಕ ನಂಬಿಕೆ. ಇದರಿಂದ ಯಾರಿಗೂ ತೊಂದರೆ ಆಗಿಲ್ಲ. ಸಮಸ್ಯೆ ಆಗಿದೆ ಎಂದು ವೈದ್ಯರು ಪ್ರಮಾಣ ಪತ್ರ ನೀಡಿರುವ ಉದಾಹರಣೆಯೂ ಇಲ್ಲ. ಇದು ಅಮಾನುಷ ಆಚರಣೆಯಲ್ಲ. ಭಕ್ತರ ಸ್ವಯಂ ನೆಲೆಯಲ್ಲಿ ಮಡೆಸ್ನಾನ ಆಚರಿಸುತ್ತಾರೆ. ಆದ್ದರಿಂದ ಮಡೆಸ್ನಾನಕ್ಕೆ ಅವಕಾಶ ನೀಡುವಂತೆ ಕೇಳಿಕೊಳ್ಳಲಾಗಿದೆ ಎಂದು ವೆಂಕಟ್ರಮಣ ಭಟ್ಟ ತಿಳಿಸಿದ್ದಾರೆ.

ಮಡೆಸ್ನಾನಕ್ಕೆ ಆಕ್ಷೇಪ ಸಲ್ಲಿಸಿದವರನ್ನು ವಿಚಾರಣೆಗೆ ಕರೆಯಬಹುದು. ಈ ಬಗ್ಗೆ ನೋಟಿಸ್‌ ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

Advertisement

2017ರ ಅ. 3ರಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜರಗಿದ ಚಂಪಕಾಷಷ್ಠಿಯಲ್ಲಿ ಮಡೆಸ್ನಾನಕ್ಕೆ ಅವಕಾಶ ಕೇಳಿದ್ದೆ. ಆದರೆ ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಸಾಧ್ಯವಿಲ್ಲ  ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿತ್ತು. ಇದರಿಂದ ನನ್ನ ಮೂಲಭೂತ ಹಕ್ಕಿಗೆ ಧಕ್ಕೆಯಾಯಿತು. ಆದ್ದರಿಂದ ಸುಪ್ರೀಂ ಕೋರ್ಟ್‌ನಲ್ಲಿ  ದಾವೆ ಸಲ್ಲಿಸಿದ್ದೇನೆ.

– ವೆಂಕಟ್ರಮಣ ಭಟ್ಟ ಪಾರ್ಪಜೆ ಮಕರಂದ, ದಾವೆದಾರರು

Advertisement

Udayavani is now on Telegram. Click here to join our channel and stay updated with the latest news.

Next