ಹೊಸದಿಲ್ಲಿ: ವಿದೇಶಗಳಲ್ಲಿ ತಯಾರಾದ ಕೊರೊನಾ ಎಂಆರ್‌ಎನ್‌ಎ ಲಸಿಕೆಗಳಾದ ಫೈಜರ್ ಮತ್ತು ಮಾಡೆರ್ನಾಗಳಿಗಿಂತ ಭಾರತ ದಲ್ಲಿ ತಯಾರಾದ ಲಸಿಕೆಗಳೇ ಕೊರೊನಾ ವಿರುದ್ಧ ಉತ್ತಮವಾಗಿ ಹೋರಾಡಿವೆ. ಹೀಗೆಂದು ಸೀರಂ ಇನ್‌ಸ್ಟಿಟ್ಯೂಟ್‌ನ ಮುಖ್ಯಸ್ಥ ಅದಾರ್ ಪೂನವಾಲಾ ಹೇಳಿದ್ದಾರೆ.
“ಫೈಜರ್‌ನಂತಹ ಲಸಿಕೆಯನ್ನು ಭಾರತದಲ್ಲಿ ಪರಿಚಯಿಸದೇ ಇದ್ದದ್ದೇ ಒಳ್ಳೆಯದಾಯಿತು. ಅಮೆರಿಕದಲ್ಲಿ 3, 4 ಬೂಸ್ಟರ್ ಡೋಸ್ ತೆಗೆದುಕೊಂಡರೂ ಜನರು ಕೊರೊನಾದಿಂದಾಗಿ ನರಳುತ್ತಿದ್ದಾರೆ. ನಮ್ಮಲ್ಲಿ ಅಂತಹ ಸಮಸ್ಯೆಯಿಲ್ಲ’ ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಸಾವಿರ ಪ್ರಕರಣ: ಭಾರತದಲ್ಲಿ ಇದೇ ವೇಳೆ ಭಾರತದಲ್ಲಿ ಮಂಗಳವಾರ ಬೆಳಗ್ಗೆಯಿಂದ ಬುಧವಾರ ಬೆಳಗ್ಗೆಯವರೆಗಿನ 24 ಗಂಟೆಗಳಲ್ಲಿ 1,088 ಕೊರೊನಾ ಪ್ರಕರಣ ಪತ್ತೆಯಾಗಿದೆ. 23 ಸೋಂಕಿತರು ಸಾವನ್ನಪ್ಪಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 10,870ಕ್ಕೆ ಇಳಿದಿದೆ.
ರಾಜತಾಂತ್ರಿಕ ಕಚೇರಿ ಸೇವೆ ವ್ಯತ್ಯಯ: ಚೀನದ ಶಾಂಘೈಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಅಲ್ಲಿನ ಭಾರತೀಯ ರಾಜತಾಂತ್ರಿಕ ಕಚೇರಿಯು ವ್ಯಕ್ತಿಗತ ಸಂಪರ್ಕ ವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆ ಭಾಗದ ಭಾರತೀಯರು ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೇ ಸಂಪರ್ಕ ಮಾಡಬೇಕು ಎಂದು ಕಚೇರಿ ಸೂಚನೆ ನೀಡಿದೆ.