ಐಟಿ ಹಬ್ ಎಂದೇ ಹೆಸರಾಗಿರುವ ಬೆಂಗಳೂರು ಸ್ಟಾರ್ಟ್‌ಅಪ್‌ಗ್ಳಿಗೊಂದು ದೊಡ್ಡ ವೇದಿಕೆ. ಸ್ವಂತ ಉದ್ಯಮ ಆರಂಭಿಸಬೇಕೆನ್ನುವ ಯುವಕರ ಕನಸುಗಳಿಗೆ ಬೆಂಗಳೂರು ಸದಾ ಬೆಂಬಲವಾಗಿ ನಿಂತಿದೆ. ಇಂಥದ್ದೇ ಸ್ಟಾರ್ಟ್ ಅಪ್ ಕನಸು ಹೊತ್ತ ಮೂವರು ಹುಡುಗರ ಬದುಕಿನ ಬಂಡಿ ಕಥೆ ಈ ವಾರ ತೆರೆಕಂಡ “ಮೇಡ್ ಇನ್ ಬೆಂಗಳೂರು’ ಚಿತ್ರ.
ಐಟಿ ಉದ್ಯೋಗಿಯಾಗಿರುವ ಸುಹಾಸ್ ಸ್ಟಾರ್ಟ್‌ಅಪ್ ಆರಂಭಿಸುವ ಆಲೋಚನೆಯಿಂದ, ಇರುವ ಕೆಲಸವನ್ನು ಬಿಟ್ಟು, ಹೊಸದಾರಿಯಲ್ಲಿ ಸಾಗಲು ಮುಂದಾಗುತ್ತಾನೆ. ಈ ಹಾದಿಯಲ್ಲಿ ಆತನ ಇನ್ನಿಬ್ಬರು ಸ್ನೇಹಿತರು ಕೈ ಜೋಡಿಸಿ, ಸ್ಟಾರ್ಟ್ ಅಪ್‌ಗೆ ಬಂಡವಾಳ ಹುಡುಕಲು ಆರಂಭಿಸುತ್ತಾರೆ. ಈ ಹುಡುಕಾಟದಲ್ಲಿ ಕೊನೆಗೆ ಸಿಕ್ಕ ಇನ್ ವೆಸ್ಟರ್ ಅವರ ಪಾಲಿಗೆ ಉರುಳಾಗುತ್ತಾನೆ. ಈ ಯುವಕರ ಸ್ಟಾರ್ಟ್ ಅಪ್ ಕನಸು ನೇರವೇರುತ್ತಾ? ಅನ್ನುವುದನ್ನು ಚಿತ್ರ ನೋಡಿ ತಿಳಿಯಬೇಕು
ನಿರ್ದೇಶಕ ಪ್ರದೀಪ್ ಶಾಸ್ತ್ರೀ, ಚಿತ್ರದಲ್ಲಿ ಸ್ಟಾರ್ಟ್‌ಅಪ್ ಹುಡುಗರ ಕನಸು ಹಾಗೂ ಆ ಕನಸನ್ನು ನನಸಾಗಿಸುವಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನು ಅಚ್ಚುಕಟ್ಟಾಗಿ ತೆರೆ ಮೇಲೆ ತೋರಿಸಿದ್ದಾರೆ. ಚಿತ್ರದ ಮೊದಲರ್ಧ ಸ್ಟಾರ್ಟ್ ಅಪ್‌ನ ಆರಂಭದ ಮೊದಲ ಹೆಜ್ಜೆಗಳು, ಅಲ್ಲಿಲ್ಲ ನಗು, ಜೊತೆಯಲ್ಲಿ ಒಂದು ಚಿಗುರೊಡೆಯುವ ಪ್ರೀತಿಯಲ್ಲಿ ಸಾಗಿದರೆ. ದ್ವಿತೀಯಾರ್ಧ ಗೊಂದಲ, ದ್ವೇಷ, ನಿರಾಸೆ, ಆತಂಕದಲ್ಲಿ ಸಾಗುತ್ತದೆ.
ನಿರ್ದೇಶಕರ ಸ್ಟಾರ್ಟ್ ಪ್ರಯತ್ನ ಮೆಚ್ಚುವಂತಿದ್ದರೂ, ಚಿತ್ರಕಥೆಯಲ್ಲಿ ಕೊಂಚ ವೇಗ ಬೇಕೆನಿಸುತ್ತದೆ. ತಾಂತ್ರಿಕವಾಗಿ ಅಚ್ಚುಕಟ್ಟಾಗಿ ಮೂಡಿಬಂದಿರುವ ಚಿತ್ರದಲ್ಲಿ, ಕೆಲವೊಂದು ದೃಶ್ಯಗಳು ಅನವಶಕ್ಯ ಅನಿಸುವಂತಿದೆ. ಆದರೂ ಕಲಾವಿದರು ನಿರ್ವಹಿಸಿರುವ ಪಾತ್ರಗಳು ಚಿತ್ರವನ್ನು ಬೇರೆಯೆಡೆಗೆ ಕರೆದುಕೊಂಡು ಹೋಗುತ್ತದೆ. ಬೆಂಗಳೂರಿನ ಟ್ರಾಫಿಕ್ ಬದುಕಿನ ಜೊತೆಯಲ್ಲಿ, ಇದರಾಚೆಯೂ ಒಂದು ಜಗತ್ತಿದೆ ಎಂಬುದನ್ನು ನಿರ್ದೇಶಕರು ಚಿತ್ರದಲ್ಲಿ ತೋರಿಸಿದ್ದಾರೆ.
ದೊಡ್ಡ ಕಲಾವಿದರ ದಂಡೇ ಚಿತ್ರದಲ್ಲಿದ್ದು, ಅನಂತ ನಾಗ್ ಭಿನ್ನ ಮ್ಯಾನರಿಸಂನಿಂದ ಹತ್ತಿರವಾಗುತ್ತಾರೆ. ಸಾಯಿಕುಮಾರ್ ಎಂದಿನಂತೆ ನಟನೆಯಲ್ಲಿ ಅಬ್ಬರಿಸಿದ್ದಾರೆ. ಮಂಜುನಾಥ್ ಹೆಗಡೆ ಸುಧಾ ಬೆಳವಾಡಿ ತಂದೆ -ತಾಯಿ ಪಾತ್ರದಲ್ಲಿ ಇಷ್ಟವಾಗುತ್ತಾರೆ. ಪ್ರಕಾಶ್ ಬೆಳವಾಡಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಮಧುಸೂಧನ್, ಪುನೀತ್, ವಂಶಿಧರ್, ವಿನೀತ್ ತಮ್ಮ ಪಾತ್ರಗಳಿಗೆ ಜೀವತುಂಬುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಬರ ಪ್ರಯತ್ನ ಬೆಂಬಲಿಸ ಬೇಕೆನ್ನುವವರು ಸ್ಟಾರ್ಟ್‌ಅಪ್ ಹುಡುಗರ ಕಥೆ-ವ್ಯಥೆ ನೋಡಿಬರಬಹುದು.
ವಾಣಿ ಭಟ್ಟ