Advertisement

ಘಟಕವಿದ್ದರೂ ಶುದ್ಧ ನೀರಿಗೆ ಪರದಾಟ

07:47 PM Dec 26, 2019 | Naveen |

ಮದ್ದೂರು: ಕಲುಷಿತ ಹಾಗೂ ಫ್ಲೋರೈಡ್‌ಯುಕ್ತ ನೀರನ್ನು ಸೇವಿಸುತ್ತಿರುವ ಜನರಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾರಂಭಿಸಿದ ಕುಡಿಯುವ ನೀರಿನ ಘಟಕಗಳು ಅಧಿಕಾರಿಗಳ ಹಾಗೂ ಸಹಕಾರ ಸಂಘಗಳ ಬೇಜವಾಬ್ದಾರಿತನದಿಂದ ಹಲವು ಸಮಸ್ಯೆಗಳಿಂದ ಬಳಲುತ್ತಿವೆ.

Advertisement

ಪ್ರತಿಯೊಬ್ಬರು ಶುದ್ಧ ಕುಡಿಯುವ ನೀರನ್ನು ಸೇವಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲೆಂದು ಸರ್ಕಾರ ಜಾರಿಗೆ ತಂದ ನೀರಿನ ಘಟಕಗಳ ಕಾಮಗಾರಿಗಳು ಕುಂಟುತಾ, ತೆವಳುತ್ತಾ ಸಾಗುವ ಜತೆಗೆ ಪೂರ್ಣಗೊಂಡಿರುವ ಕಾಮಗಾರಿಗಳು ಹಲವು ಸಮಸ್ಯೆಗಳಿಂದ ಬಳಲುವ ಜತೆಗೆ ಕೆಲ ಘಟಕಗಳು ಉದ್ಘಾಟನೆ ಭಾಗ್ಯವನ್ನೇ ಕಂಡಿಲ್ಲ.

ಸ್ಥಳೀಯರಿಗೆ ಸಿಗದ ನೀರು: ತಾಲೂಕಿನ ವಿವಿಧ ಗ್ರಾಮದಲ್ಲಿ ಜಿಪಂ ಎಂಜಿನಿಯರ್‌ ಉಪ ವಿಭಾಗ, ಕೆಆರ್‌ಡಿಎಲ್‌ ಹಾಗೂ ಪರ್ಯಾವರ್ಣ ಹಾಗೂ ದೋಷಿಯನ್‌ ಕಂಪನಿಗಳ ಸಹಯೋಗದಲ್ಲಿ 150ಕ್ಕೂ ಹೆಚ್ಚು ಘಟಕಗಳನ್ನು ತಾಲೂಕಾದ್ಯಂತ ಸ್ಥಾಪಿಸಲಾಗಿದ್ದು, ಈ ಪೈಕಿ ಕೆಆರ್‌ಡಿಎಲ್‌ 40, ಜಿಪಂ ಎಂಜಿನಿಯರ್‌ ಉಪವಿಭಾಗ 54 ಹಾಗೂ ಸ್ಥಳೀಯ ಸಹಕಾರ
ಸಂಘಗಳು ಹಾಗೂ ಗ್ರಾಪಂ ವತಿಯಿಂದ 11 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಿದ್ದರೂ ಸ್ಥಳೀಯ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಸಿಗದೆ ಪರಿತಪಿಸುವಂತಾಗಿದೆ.

11 ಘಟಕ ಸ್ಥಳೀಯ ಸಹಕಾರ ಸಂಘಗಳಿಗೆ ಹಸ್ತಾಂತರ: ಜಿಪಂ ಎಂಜಿನಿಯರ್‌ ಉಪ ವಿಭಾಗ ನಿರ್ಮಿಸಿದ್ದ 11 ಘಟಕಗಳನ್ನು ಈಗಾಗಲೇ ಸ್ಥಳೀಯ ಸಹಕಾರ ಸಂಘಗಳಿಗೆ ಹಸ್ತಾಂ ತರಿಸಿದ್ದು ನಿರ್ವಹಣೆ ಮಾಡುವ ಜತೆಗೆ ವಿದ್ಯುತ್‌ ಬಿಲ್‌, ರಿಪೇರಿ ಹಾಗೂ ಖರ್ಚು ವೆಚ್ಚಗಳನ್ನು ಸರಿದೂಗಿಸಲು ಗ್ರಾಪಂ ಆಡಳಿತ ಮಂಡಳಿ ಮುಂದಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಕೆಲ ಗ್ರಾಮಗಳಲ್ಲಿ ಹಲವು ಕಾರಣಗಳಿಂದ ಘಟಕಗಳು ಶೋಚನೀಯ ಸ್ಥಿತಿ ತಲುಪಿದ್ದು ವಿದ್ಯುತ್‌ ಸಂಪರ್ಕ, ಯಂ ತ್ರೋಪಕರಣ ಅಳವಡಿಕೆ, ನಿವೇಶನ ಸಮಸ್ಯೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಘಟಕಗಳು ಕಾರ್ಯನಿರ್ವಹಿಸದೆ, ಹಲವಾರು ವರ್ಷಗಳು ಕಳೆದಿದ್ದರೂ ಉದ್ಘಾಟನೆ ಭಾಗ್ಯ ಕಾಣದೆ ಅನಾಥವಾಗಿವೆ. ಸಂಬಂಧಿಸಿದ ಅಧಿಕಾರಿಗಳು ಇತ್ತ ತಲೆಹಾಕದೆ ನಿರ್ಲಕ್ಷ್ಯ ವಹಿಸಿರುವ ಜತೆಗೆ ಕಳೆದ ಎರಡು ವರ್ಷಗಳಿಂದ ನಿರ್ಮಿಸಿರುವ ಘಟಕಗಳು ಹಾಳುಕೊಂಪೆಯಾಗಿ ಮಾರ್ಪಟ್ಟಿವೆ.

Advertisement

ಕಳಪೆ ಫಿಲ್ಟರ್‌ ಬಳಕೆ: ಕೆಲ ಘಟಕಗಳನ್ನು ಸ್ಥಾಪಿಸಿ ಹೊಣೆ ಹೊತ್ತಿರುವ ಪರ್ಯಾವಣ್‌, ದೋಷಿಯನ್‌ ಕಂಪನಿ ಗಳು ಹಾಗೂ ಗುತ್ತಿಗೆದಾರರು ನಿರ್ಮಿಸುತ್ತಿರುವ ಘಟಕಗಳನ್ನು ಏಳು ವರ್ಷಗಳ ಕಾಲ ನಿರ್ವಹಣೆ ಮಾಡಬೇಕೆಂಬ ಆದೇಶವಿದ್ದರೂ ಇದಕ್ಕೆ ಸೊಪ್ಪು ಹಾಕದ ಗುತ್ತಿಗೆದಾರ ಹಾಗೂ ಕಂಪನಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುವ ಜತೆಗೆಫಿಲ್ಟರ್‌ಗಳನ್ನು ಬದಲಾಯಿಸದೆ ವಿಳಂಬಧೋರಣೆ ಅನುಸರಿಸುತ್ತಿರು ವುದಾಗಿ ಸಾರ್ವಜನಿಕರು ಆರೋಪಿಸಿದ್ದಾರೆ.

ಗ್ರಾಪಂ ಅಧಿಕಾರಿಗಳೇ ರಿಪೇರಿಗೆ ಹಣ ಭರಿಸುವ ಅನಿವಾರ್ಯತೆ: ತಾಲೂಕಿನ ಗೂಳೂರು, ಸಾದೊಳಲು, ಯಲದಹಳ್ಳಿ, ಸಬ್ಬನಹಳ್ಳಿ, ನಂಬಿನಾಯಕನಹಳ್ಳಿ, ಮುಟ್ಟನಹಳ್ಳಿ, ಹೆಬ್ಬೆರಳು, ಬೆಕ್ಕಳಲೆ, ಎಸ್‌.ಐ. ಹೊನ್ನಲಗೆರೆ, ಮಾದನಾಯಕನಹಳ್ಳಿ, ಅಡಗನಹಳ್ಳಿ ಹಾಗೂ ಚನ್ನಸಂದ್ರ ಗ್ರಾಮಗಳಲ್ಲಿ ನಿರ್ಮಿಸಿರುವ ಘಟಕಗಳನ್ನು ಈಗಾಗಲೇ ಪ್ರಾಥಮಿಕ ಸಹಕಾರ ಸಂಘ ಹಾಗೂ ಹಾಲು ಉತ್ಪಾದಕರ ಸಂಘಗಳಿಗೆ ಹಸ್ತಾಂತರಿಸಿದ್ದು ಏನೇ ಸಮಸ್ಯೆಗಳು ಕಂಡು ಬಂದಲ್ಲಿ ಸ್ಥಳೀಯ ಗ್ರಾಪಂ ಅಧಿಕಾರಿಗಳೇ ರಿಪೇರಿಗೆ ಹಣ ಭರಿಸುವ ಅನಿವಾರ್ಯತೆ ಉಂಟಾಗಿದೆ.

ದುರಸ್ತಿಗೆ ಮುಂದಾಗದ ಅಧಿಕಾರಿಗಳು: ತಾಲೂಕಿನ ಕೂಳಗೆರೆ ಕೆ.ಹೊನ್ನಲಗೆರೆ, ಕೊತ್ತಿಪುರ, ಕೆಸ್ತೂರು, ಕದಲೂರು, ಕುದರಗುಂಡಿ, ಗೊರವನಹಳ್ಳಿ, ವರಳಗೆರೆದೊಡ್ಡಿ ಸೇರಿದಂತೆ ಇನ್ನಿತರೆ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಟ್ಟುನಿಂತು
ಹಲವು ದಿನಗಳೇ ಕಳೆದಿದ್ದರು ದುರಸ್ತಿಗೆ ಮುಂದಾಗದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಸರ್ಕಾರದ ಕನಸು ನನಸಾಗುತ್ತಾ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣಕ್ಕೆ ತಲಾ 6 ಲಕ್ಷ ರೂ.ಗಳನ್ನು ವಿತರಿಸುತ್ತಿದ್ದು ಕೆಲ ಗುತ್ತಿಗೆದಾರರು ಸಮರ್ಪಕವಾಗಿ ನಿರ್ಮಾಣ ಮಾಡದೆ ಹಲವಾರು ಅದ್ವಾನಗಳಿಗೆ ಕಾರಣವಾಗಿದೆ. ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುವ ಸರ್ಕಾರದ ಕನಸು ನನಸಾಗೇ ಉಳಿದಿದೆ.

ಉದ್ಘಾಟನೆ ಭಾಗ್ಯವನ್ನೇಕಾಣದ ನೀರಿನ ಘಟಕಗಳು! ತಾಲೂಕಿನ ರಾಜೇಗೌಡನದೊಡ್ಡಿ, ಆಲೂರುದೊಡ್ಡಿ ಕೊಕ್ಕರೆಬೆಳ್ಳೂರು ಗ್ರಾಮಗಳಲ್ಲಿ ಕಾಮಗಾರಿ ಮುಗಿದು ವರ್ಷ ಕಳೆದಿದ್ದರೂ ಉದ್ಘಾಟನೆ ಭಾಗ್ಯ ಕಾಣದೆ ಅನಾಥವಾಗಿದ್ದು ಘಟಕಗಳ ಸುತ್ತಲು ಅಶುಚಿತ್ವ ತಾಂಡವವಾಡುವ ಜತೆಗೆ ಆಳೆತ್ತರದ ಗಿಡಗಂಟಿಗಳು ಬೆಳೆದುನಿಂತು ಸಾರ್ವಜನಿಕ ಉಪಯೋಗದಿಂದ ದೂರವೇ ಉಳಿದಿರುವುದು ಸಾಕ್ಷಿ ಎಂಬಂತಿದೆ. ಪಟ್ಟಣದಲ್ಲಿ ಟಯೋಟಾ ಕಂಪನಿ ಪುರಸಭೆ ಇಲಾಖೆ ಸಹಯೋಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಆರಂಭಿಸಿದ್ದು ಅಧಿಕ ಜನಸಂಖ್ಯೆ ಹೊಂದಿದ್ದರೂ ಕೇವಲ ನೆಪಮಾತ್ರಕ್ಕೆ ಒಂದು ಘಟಕವನ್ನು ಸ್ಥಾಪಿಸಿ ಕೈತೊಳೆದು ಕೊಂಡಿರುವ ಸ್ಥಳೀಯ ಪುರಸಭೆ ಕೂಡಲೇ ಮತ್ತೂಂದು ಘಟಕವನ್ನು ಸ್ಥಾಪಿಸುವ ಮೂಲಕ ಸ್ಥಳೀಯ ನಿವಾಸಿಗಳ ಕುಡಿಯುವ ನೀರಿನ ಭವಣೆಯನ್ನು ನೀಗಿಸಬೇಕಾಗಿದೆ.

ಇಲಾಖೆ ವತಿಯಿಂದ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ತಾಲೂಕಿನೆಲ್ಲೆಡೆ ಕಾರ್ಯ ನಿರ್ವಹಿಸುತ್ತಿದ್ದು ಅಪೂರ್ಣಗೊಂಡಿರುವ ಹಾಗೂ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಶೀಘ್ರವೇ ಮುಗಿಸಿ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯ ಕ್ರಮವಸಲಾಗಿದೆ. ಒಂದು ಸಾವಿರ ಜನಸಂಖ್ಯೆ ಹೊಂದಿರುವ ಗ್ರಾಮಗಳಿಗೆ ಘಟಕಗಳನ್ನು ಸ್ಥಾಪಿಸಲು ಇಲಾಖೆ ಮುಂದಾಗಿದೆ.
ಬಸವರಾಜು, ಎಂಜಿನಿಯರ್‌,
ಕುಡಿವ ನೀರು ನೈರ್ಮಲ್ಯ ಉಪವಿಭಾಗ

ತಾಲೂಕಿನ ವಿವಿಧೆಡೆ ನನೆಗುದಿಗೆ ಬಿದ್ದಿರುವ ಜತೆಗೆ ದುರಸ್ತಿಯಲ್ಲಿರುವ ಘಟಕಗಳನ್ನು ಬೇಸಿಗೆ ಆರಂಭವಾಗುವ ಮುನ್ನಾ ಕೂಡಲೇ ಪುನಾರಂಭಿಸಿ ಸ್ಥಳೀಯ ನಿವಾಸಿಗಳ ಬಹುದಿನದ ಬೇಡಿಕೆಯನ್ನು ಅಧಿಕಾರಿಗಳು ಈಡೇರಿಸಬೇಕಾಗಿದ್ದು ಪೂರ್ಣಗೊಂಡಿರುವ ಕೆಲ ಘಟಕಗಳು ಉದ್ಘಾಟನೆ ಭಾಗ್ಯ ಕಾಣದೆ
ಅನಾಥವಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನಹರಿಸಬೇಕು.
ಅಪ್ಪಾಜಿ,
ರಾಜೇಗೌಡನದೊಡ್ಡಿ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next