Advertisement

ಬೆಳೆ ಬೆಳೆದಂತೆ ಮರಗಳನ್ನು ಹೆಚ್ಚೆಚ್ಚು ಬೆಳೆಸಿ

05:00 PM Jan 30, 2020 | Naveen |

ಮದ್ದೂರು: ಜಮೀನುಗಳಲ್ಲಿ ಭತ್ತ, ರಾಗಿ, ಕಬ್ಬು ಬೆಳೆ ಬೆಳೆದಂತೆ ಮರಗಳನ್ನು ಹೆಚ್ಚೆಚ್ಚು ಬೆಳೆಸಿ ಕಾಡನ್ನಾಗಿ ಪರಿವರ್ತಿಸಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕೆಂದು ಪದ್ಮಶ್ರೀ ನಾಡೋಜ ಪ್ರಶಸ್ತಿ ಪುರಸ್ಕೃತೆ ಡಾ. ಸಾಲುಮರದ ತಿಮ್ಮಕ್ಕ ತಿಳಿಸಿದರು.

Advertisement

ಪಟ್ಟಣದ ಹಳೇ ಬಸ್‌ನಿಲ್ದಾಣದ ಬಳಿ ಆಯೋಜಿಸಿದ್ದ ನೂತನ ಸುಮುಖ ಸೇವಾ ಟ್ರಸ್ಟ್‌ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅರಣ್ಯ ಸಂಪತ್ತು ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದ್ದು ಯುವ ಸಮುದಾಯ ಅರಣ್ಯ ಸಂರಕ್ಷಣೆಗೆ ಗಮನಹರಿಸಿ ಅಳಿವಿನ ಹಂಚಿನಲ್ಲಿರುವ ಕಾಡನ್ನು ರಕ್ಷಿಸಬೇಕಾಗಿರುವುದು ತಮ್ಮೆಲ್ಲರ ಕರ್ತವ್ಯವೆಂದರು. ನಾ ಬರುವ ಮಾರ್ಗದಲ್ಲಿ ಅರಣ್ಯ ಸಂಪತ್ತು ಕಡಿಮೆಯಾಗಿರುವುದು ವಿಷಾದನೀಯ. ತಮ್ಮ ಜಮೀನುಗಳಲ್ಲಿ ಬೆಳೆ ಬೆಳೆದಂತೆ ಸಸಿ ನೆಟ್ಟು ಪೋಷಿಸಿ ನೀರೆರೆಯುವ ಕೆಲಸವಾಗಬೇಕು. ಕಾಡು ಇದ್ದಲ್ಲಿ ಸುಖ ಸಂಪತ್ತು, ಸಮೃದ್ಧಿ ತುಂಬಿರುತ್ತದೆ ಎಂದರು.

ತಮಗೆ ಪದ್ಮಶ್ರೀ ಹಾಗೂ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ನಿಮ್ಮಗಳ ಆಶೀರ್ವಾದಿಂದ ನನ್ನಂತೆಯೇ ತಾವಾಗಬೇಕಾದಲ್ಲಿ ಪರಿಸರ ರಕ್ಷಣೆಗೆ ಹಾಗೂ ಸಾಮಾಜಿಕ ಕಾರ್ಯಗಳಿಗೆ ಹೆಚ್ಚಿನ ಗಮನಹರಿಸಿ ಬರಡು ಭೂಮಿಯಾಗಿರುವ ತಮ್ಮ ಗ್ರಾಮಗಳಲ್ಲಿ ಕಾಡನ್ನು ಬೆಳೆಸುವ ಸಂಕಲ್ಪ ತೊಡಬೇಕೆಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಶುರಾಮ್‌, ವಿದ್ಯಾರ್ಥಿಯಾಗಿದ್ದ ವೇಳೆ ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ ಶಿಕ್ಷಕರು, ಸಮಾಜ ಹಾಗೂ ಮೂಲ ಬೇರುಗಳನ್ನು ಮರೆಯುತ್ತಿರುವುದು ವಿಷಾದನೀಯ ಸಂಗತಿ. ಸದಾ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ನಾವು, ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದರು.

ಕಾರ್ಯಕ್ರಮಕ್ಕೂ ಮುನ್ನ ತಾಲೂಕಿನ ತೈಲೂರು ಗ್ರಾಮಕ್ಕೆ ಆಗಮಿಸಿದ ಸಾಲುಮರದ ತಿಮ್ಮಕ್ಕ ಗ್ರಾಮ ದೇವತೆ ತೈಲೂರಮ್ಮ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸಮುದಾಯ ಭವನದ ಆವರಣದಲ್ಲಿ ತೆಂಗಿನ ಸಸಿನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Advertisement

ಪ್ರತಿಭಾ ಪುರಸ್ಕಾರ: ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕ ಪಡೆದ ದಯಾನಂದ, ಕೆ.ಆರ್‌. ಕಾವ್ಯಾ, ಎಂ.ಟಿ.ಯೋಗೇಶ್‌, ಜಿ.ಪರಿಮಳ ಅವರಿಗೆ ಟ್ರಸ್ಟ್‌ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸುವ ಜತೆಗೆ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಿ ತಾಲೂಕಿಗೆ ಕೀರ್ತಿ ತಂದಿರುವ ಸೃಷ್ಟಿ ಹಾಗೂ ಎಂ.ಎಸ್‌. ನಾಗವೇಣಿ ಅವರನ್ನು ಅಭಿನಂದಿಸಲಾಯಿತು.

ಉಚಿತ್ರ ನೇತ್ರ ಚಿಕಿತ್ಸೆ:ಪೀಪಲ್‌ ಟ್ರೀ ಆಸ್ಪತ್ರೆ ವತಿಯಿಂದ ಉಚಿತ ನೇತ್ರಾ ತಪಾಸಣಾ ಶಿಬಿರ ಆಯೋಜಿಸಿದ್ದ ವೇಳೆ ಸುಮಾರು 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡು ತಪಾಸಣೆಗೊಳಗಾದರಲ್ಲದೇ 50 ಮಂದಿಗೆ ಸ್ಥಳದಲ್ಲೇ ಉಚಿತ ಕನ್ನಡಕ ವಿತರಿಸಲಾಯಿತು. ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು, ಮಹಿಳೆಯರು, ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಉಚಿತ ಸಸಿ ವಿತರಿಸಲಾಯಿತು. ಅಲ್ಲದೇ, ಸೇವಾ ಟ್ರಸ್ಟ್‌ ಅಧ್ಯಕ್ಷ ಟಿ.ಸಿ.ರಘು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಸುಮುಖ ಸೇವಾ ಟ್ರಸ್ಟ್‌ ವತಿಯಿಂದ ಸಾಲುಮರದ ತಿಮ್ಮಕ್ಕ ಅವರನ್ನು ಅಭಿನಂದಿಸಿದರು. ಇದೇ ವೇಳೆ ಶಿವಾರ ಉಮೇಶ್‌ ತಂಡ ಜಾನಪದ ಗೀತೆ ಗಾಯನ ನಡೆಸಿಕೊಟ್ಟಿತು. ತಾಪಂ ಸದಸ್ಯ ಚೆಲುವರಾಜು, ಪುರಸಭೆ ಸದಸ್ಯರಾದ ಆದಿಲ್‌ ಅಲಿಖಾನ್‌, ವನಿತಾ,  ತಾ, ಕೋಕಿಲಾ, ಸಾಹಿತಿ ತೈಲೂರು ವೆಂಕಟಕೃಷ್ಣ, ಬಿಇಒ ಮಹದೇವು, ನಿವೃತ್ತ ಸೈನಿಕ ಕೆ.ಆರ್‌.ಮಲ್ಲರಾಜು, ಸಿಪಿಐ ಪ್ರಸಾದ್‌, ಕಿರುತೆರೆ ನಟ ದರ್ಶನ್‌ ಸೂರ್ಯ, ಬ್ರಹ್ಮಕುಮಾರಿ ಸಮಾಜದ ಬಿ.ಕೆ.ಈಶ್ವರಿ, ರಾಘವೇಂದ್ರ, ಟ್ರಸ್ಟ್‌ ಗೌರವಾಧ್ಯಕ್ಷ ಡಾ.ಮಹೇಶ್‌, ಉಪಾಧ್ಯಕ್ಷ ಕೆ.ಆರ್‌.ಕುಮಾರ್‌, ಪದಾಧಿಕಾರಿಗಳಾದ ಮಹೇಶ್‌, ಟಿ.ಪಿ. ಶ್ರೀನಿವಾಸ್‌, ಸಿ.ಕೆ.ಸತೀಶ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next