Advertisement

ಮದ್ದೂರುನಲ್ಲಿ ಅನುಭವಿ ಜೊತೆ ಹೊಸಬರ ಕಾದಾಟ

03:26 PM May 04, 2023 | Team Udayavani |

ಮಂಡ್ಯ: ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಿದ ನೆಲ ಮದ್ದೂರು ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿ ಅನುಭವಿ ರಾಜಕಾರಣಿ ಜೊತೆ ಹೊಸ ಮುಖಗಳು ಕಾದಾಡುವಂತಾಗಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Advertisement

ಜೆಡಿಎಸ್‌ ಅಭ್ಯರ್ಥಿ ಡಿ.ಸಿ.ತಮ್ಮಣ್ಣ, ಕಾಂಗ್ರೆಸ್‌ ಅಭ್ಯರ್ಥಿ ಕದಲೂರು ಉದಯ್‌ ಹಾಗೂ ಬಿಜೆಪಿಯಿಂದ ಎಸ್‌.ಪಿ.ಸ್ವಾಮಿ ಕಣದಲ್ಲಿದ್ದಾರೆ. ಉಳಿದಂತೆ ಇನ್ನೂ ಏಳು ಮಂದಿ ಇತರೆ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಆದರೆ ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ನಡುವೆಯೇ ತೀವ್ರ ಪೈಪೋಟಿ ನಡೆಯುತ್ತಿದೆ. ಕಳೆದ 15 ವರ್ಷದಿಂದ ಜೆಡಿಎಸ್‌ ಪ್ರಾಬಲ್ಯ ಸಾಧಿಸುತ್ತಿದೆ. ಇಲ್ಲಿ ಕಾಂಗ್ರೆಸ್‌ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ ಎಂಬ ಆರೋಪಗಳು ಆಗಾಗ್ಗೆ ಕೇಳಿ ಬರುತ್ತಿತ್ತು. ಆದರೆ, ಈ ಬಾರಿ ಅದಕ್ಕೆಲ್ಲ ತೀಲಾಂಜಲಿ ಇಟ್ಟಿರುವ ಕಾಂಗ್ರೆಸ್‌ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಮೂಲಕ ತಮ್ಮಣ್ಣಗೆ ತಿರುಗೇಟು ನೀಡಲು ಸಜ್ಜಾಗಿದೆ. ಇತ್ತ ಬಿಜೆಪಿಯು ಸಹ ಡಿ.ಸಿ.ತಮ್ಮಣ್ಣನ ಬೆಂಬಲಿಗನನ್ನೇ ಅಭ್ಯರ್ಥಿಯನ್ನಾಗಿ ಮಾಡಿ ಕಾದಾಟಕ್ಕಿಳಿದಿದೆ. ಈ ಮೂವರ ನಡುವಿನ ಜಿದ್ದಾಜಿದ್ದಿನ ಕಣ ಸಾಕಷ್ಟು ಕುತೂಹಲ ಕೆರಳಿಸಿದೆ.

 ಐದನೇ ಬಾರಿ ಶಾಸಕರಾಗಲು ತಮ್ಮಣ್ಣ ಚಿತ್ತ: ಡಿ.ಸಿ.ತಮ್ಮಣ್ಣ ಈಗಾಗಲೇ ನಾಲ್ಕು ಬಾರಿ ಶಾಸಕರಾಗಿ, ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಮೊದಲು ಮಳವಳ್ಳಿಯ ಕಿರುಗಾವಲು ಕ್ಷೇತ್ರದಿಂದ 1999ರಲ್ಲಿ ಮೊದಲು ಶಾಸಕರಾದರು. ನಂತರ ಮದ್ದೂರು ಕ್ಷೇತ್ರದಿಂದ 2004, 2013 ಹಾಗೂ 2018ರಲ್ಲಿ ಶಾಸಕರಾಗಿ, ಸಚಿವರಾಗಿದ್ದರು. ಇದೀಗ ಐದನೇ ಬಾರಿ ವಿಧಾನಸೌಧ ಪ್ರವೇಶಿಸಲು ಮುಂದಾಗಿದ್ದಾರೆ. ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಮಾಡಿದ್ದೇನೆ. ಇದು ನನ್ನ ಕೊನೇ ಚುನಾವಣೆಯಾಗಿದೆ. ಆದ್ದರಿಂದ ಈ ಬಾರಿ ಜನರು ನನ್ನ ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ.

ಉದಯಿಸಿದ ಕದಲೂರು: ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಕದಲೂರು ಉದಯ್‌, ಕ್ಷೇತ್ರಕ್ಕೆ ಚಿರಪರಿಚಿತರಾಗಿದ್ದರೂ ಮೊದಲ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಎದುರಿಸಲು ಸಜಾjಗಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಉರುಳಿಸಲು ಪ್ರಮುಖ ಪಾತ್ರ ವಹಿಸಿದ್ದ ಉದಯ್‌, ಉಡುಗೊರೆ, ಸಾಮಾಜಿಕ ಕಾರ್ಯಗಳಿಂದ ಕ್ಷೇತ್ರದಲ್ಲಿ ಗಮನ ಸೆಳೆದಿದ್ದಾರೆ. ಅಲ್ಲದೆ, ಕ್ಯಾಸಿನೋ ಉದ್ಯಮಿ ಎಂಬ ಆರೋಪದ ಹಣೆಪಟ್ಟಿಯು ಇದೆ. ಆದರೆ, ಜೆಡಿಎಸ್‌ಗೆ ಪೈಪೋಟಿ ನೀಡುವ ಪ್ರಬಲ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದಾರೆ.

ಬಿಜೆಪಿಗೆ ನೆಲೆ ಕಲ್ಪಿಸಲು ಸ್ವಾಮಿ ಹೋರಾಟ: ಮದ್ದೂರು ಕ್ಷೇತ್ರದಲ್ಲಿ ಇದುವರೆಗೂ ಬಿಜೆಪಿ ಗೆದ್ದಿಲ್ಲ. ಆದರೆ, ಈ ಬಾರಿ ಮನ್‌ಮುಲ್‌ ನಿರ್ದೇಶಕ ರಾಗಿರುವ ಎಸ್‌.ಪಿ.ಸ್ವಾಮಿ ಸ್ಪರ್ಧೆಯಿಂದ ಬಿಜೆಪಿಗೆ ಬಲ ಬಂದಂತಾಗಿದೆ. ತನ್ನ ಪತ್ನಿ ಜಿಪಂ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವ ಜಗಳದಿಂದ ಜೆಡಿಎಸ್‌ ತೊರೆದ ಸ್ವಾಮಿ, ಬಿಜೆಪಿ ಸೇರ್ಪಡೆಗೊಂಡು ಶಾಸಕ ಡಿ.ಸಿ.ತಮ್ಮಣ್ಣ ವಿರುದ್ಧ ತೊಡೆ ತಟ್ಟಿದ್ದಾರೆ. ಸಾಮಾಜಿಕ ಕಾರ್ಯಗಳಿಂದ ಗುರುತಿಸಿಕೊಂಡಿರುವ ಸ್ವಾಮಿ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.

Advertisement

ಜಾತಿವಾರು ಲೆಕ್ಕಾಚಾರ: ಕ್ಷೇತ್ರದಲ್ಲಿ ಒಟ್ಟು 2,13,706 ಮತದಾರರ ಪೈಕಿ ಪುರುಷರು 1,03,863, ಮಹಿಳೆಯರು 1,09,823 ಹಾಗೂ ಲೈಂಗಿಕ ಅಲ್ಪಸಂಖ್ಯಾತರು 20 ಮಂದಿ ಇದ್ದಾರೆ. ಈ ಬಾರಿ 7 ಸಾವಿರ ಮಂದಿ ಹೊಸ ಮತದಾರರು ಸೇರ್ಪಡೆಗೊಂಡಿದ್ದಾರೆ. ಇಲ್ಲಿ ಒಕ್ಕಲಿಗ ಮತದಾರರೇ ಹೆಚ್ಚಿದ್ದಾರೆ. ಎಸ್‌ಸಿ, ಎಸ್‌ಟಿ ಮತದಾರರು ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಅಂದಾಜಿನ ಪ್ರಕಾರ ಜಾತಿವಾರು ಒಕ್ಕಲಿಗರು 1 ಲಕ್ಷ, ಎಸ್‌ಸಿ, ಎಸ್‌ಟಿ 23 ಸಾವಿರ, ಕುರುಬ 10 ಸಾವಿರ, ಲಿಂಗಾಯತ 9 ಸಾವಿರ, ಮುಸ್ಲಿಂ 12 ಸಾವಿರ ಹಾಗೂ ಇತರೆ 59 ಸಾವಿರ ಮತದಾರರಿದ್ದಾರೆ.

ಮೂವರು ಅಭ್ಯರ್ಥಿಗಳು ಒಕ್ಕಲಿಗರೇ ಆಗಿರುವುದರಿಂದ ಮತಗಳು ಇಬ್ಭಾಗವಾಗಲಿವೆ. ಅಲ್ಲದೆ, ಜೆಡಿಎಸ್‌ ಮತಗಳನ್ನು ಬಿಜೆಪಿ ಅಭ್ಯರ್ಥಿ ಎಸ್‌.ಪಿ.ಸ್ವಾಮಿ ಸಹ ಪಡೆಯುವುದರಿಂದ ಛಿದ್ರವಾಗಲಿವೆ. ಇತ್ತ ಕಾಂಗ್ರೆಸ್‌ನ ಮತಗಳನ್ನು ಡಿ.ಸಿ.ತಮ್ಮಣ್ಣ ಪಡೆಯುವ ಸಾಧ್ಯತೆ ಇದೆ.

ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದು ಅಭಿವೃದ್ಧಿಪಡಿಸಿದ್ದೇನೆ. ನೀರಾವರಿ ಯೋಜನೆಗಳು, ಕೆರೆಕಟ್ಟೆಗಳಿಗೆ ನೀರು ತುಂಬಿಸಲಾಗಿದೆ. ನನ್ನ ಅಭಿವೃದ್ಧಿ ಕೆಲಸಗಳಿಗೆ ಮತದಾರರು ಮತ್ತೂಮ್ಮೆ ಆಯ್ಕೆ ಮಾಡುವ ವಿಶ್ವಾಸವಿದೆ. ಡಿ.ಸಿ.ತಮ್ಮಣ್ಣ, ಜೆಡಿಎಸ್‌ ಅಭ್ಯರ್ಥಿ

ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯದ ಮೂಲಕ ಜನರಿಗೆ ಹತ್ತಿರವಾಗಿದ್ದೇನೆ. ಮತದಾರರಿಂದ ಉತ್ತಮ ಸ್ಪಂದನೆಯಿದೆ. ಪಕ್ಷದ ಮೇಲೆ ಯಾವುದೇ ಬಂಡಾಯ, ಭಿನ್ನಮತ ಪರಿಣಾಮ ಬೀರಲ್ಲ. ಈ ಬಾರಿ ನಾನು ಗೆಲ್ಲುವ ವಿಶ್ವಾಸವಿದೆ. ಕದಲೂರು ಉದಯ್‌, ಕಾಂಗ್ರೆಸ್‌ ಅಭ್ಯರ್ಥಿ

ಬಿಜೆಪಿ ಸರ್ಕಾರಗಳ ಜನಪರ ಯೋಜ ನೆ ಜನರಿಗೆ ಅನುಕೂಲವಾಗಿದೆ. ಅಭಿವೃದ್ಧಿಯೇ ಬಿಜೆಪಿ ಕೈಹಿಡಿಯಲಿ ವೆ. ಕ್ಷೇತ್ರದಲ್ಲಿ ಬಿಜೆಪಿಗೆ ಉತ್ತಮ ವಾತಾವರಣ ವಿದೆ. ನನ್ನ ಸೇವೆ, ಸರಳತೆ, ಸಾಮಾಜಿಕ ಕಾರ್ಯಗಳು ಜನರ ಮನಗೆದ್ದಿದ್ದೇನೆ. ಆದ್ದರಿಂದ ಈ ಬಾರಿ ನನ್ನ ಗೆಲುವು ಖಚಿತ. ● ಎಸ್‌.ಪಿ.ಸ್ವಾಮಿ, ಬಿಜೆಪಿ ಅಭ್ಯರ್ಥಿ

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next