Advertisement

ಮದರಂಗಿ ಮೆಡಿಸಿನ್‌

12:30 AM Jan 09, 2019 | |

ಮದರಂಗಿಯ ರಂಗು ಯಾವ ಹೆಣ್ಣಿಗೆ ಇಷ್ಟವಾಗದು! ವಿಧವಿಧದ ಕೋನ್‌ಗಳಲ್ಲಿ ಈಗ ಲಭ್ಯವಿರುವ ಮೆಹಂದಿ/ ಮದರಂಗಿಗೆ ಶತಮಾನಗಳ ಇತಿಹಾಸವಿದೆ. ಗೋರಂಟಿ ಗಿಡದ ಎಲೆಗಳನ್ನು ಅರೆದು, ಅದರ ನೈಸರ್ಗಿಕ ಬಣ್ಣವನ್ನು ಕೈ-ಕಾಲು, ಕೂದಲಿನ ಬಣ್ಣ ಹೆಚ್ಚಿಸಲು ಬಳಸುವುದು ಹಿಂದಿನಿಂದ ಬಂದ ಪದ್ಧತಿ. ಮದರಂಗಿಯ ಕೆಂಪಿನಲ್ಲಿ ಆಯುರ್ವೇದದ ಗುಣಗಳಿವೆ. ಇದು ಆರೋಗ್ಯವನ್ನೂ ಕಾಪಾಡುತ್ತದೆ. ಬಹೂಪಯೋಗಿ ಮದರಂಗಿಯ ಉಪಯೋಗಗಳ ಪಟ್ಟಿ ಇಲ್ಲಿದೆ.

Advertisement

1. ಮದರಂಗಿ ಎಲೆಯ ಕಷಾಯ ಗಂಟಲು ನೋವಿಗೆ ಮದ್ದು.
2. ಗೋರಂಟಿಯನ್ನು ಅರೆದು, ಬೆವರುಸಾಲೆ, ಹುಣ್ಣು, ತರಚು, ಸುಟ್ಟ ಗಾಯಗಳಿಗೆ ಔಷಧವಾಗಿ ಲೇಪಿಸಬಹುದು. 
3. ಮದರಂಗಿ ಎಲೆಯಿಂದ ತೆಗೆದ ಎಣ್ಣೆಯನ್ನು ಸುಗಂಧ ದ್ರವ್ಯ ತಯಾರಿಕೆಯಲ್ಲಿ ಬಳಸುತ್ತಾರೆ. ಎಳೆಯ ಕಡ್ಡಿಗಳನ್ನು ಹಲ್ಲುಜ್ಜಲು ಬಳಸುತ್ತಾರೆ. 
4. ಸೊಪ್ಪನ್ನು ಅರೆದು, ಅದಕ್ಕೆ ಲಿಂಬೆರಸ ಸೇರಿಸಿ, ಅಂಗೈ- ಅಂಗಾಲುಗಳಿಗೆ ಹಚ್ಚಿದರೆ ಉರಿ ಕಡಿಮೆಯಾಗುತ್ತದೆ. 
5. ಮದರಂಗಿ ಅರೆದು, ಅದಕ್ಕೆ ಕರ್ಪೂರ ಸೇರಿಸಿ, ತಲೆಗೆ ಹಚ್ಚಿದರೆ ಹೇನು, ಸೀರು ನಾಶವಾಗುತ್ತವೆ.
6. ಬಾಲನೆರೆ ಹೋಗಲಾಡಿಸಲು ಮದರಂಗಿಯನ್ನು ಬಳಸಬಹುದು.
7. ಗೋರಂಟಿ ಗಿಡದ ಕಾಯಿಗಳನ್ನು ಚೆನ್ನಾಗಿ ಅರೆದು, ನೀರು ಬೆರೆಸಿ ಕಷಾಯ ಮಾಡಿ. ಅದಕ್ಕೆ 25 ಗ್ರಾಂ ನೀಲಿ ದ್ರಾಕ್ಷಿಯನ್ನು ನುಣ್ಣಗೆ ರುಬ್ಬಿ ಬೆರೆಸಿ ತಲೆಗೆ ಹಚ್ಚಿ ಸ್ನಾನ ಮಾಡಿದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. 
8. ಎರಡು ಹಿಡಿ ಗೋರಂಟಿ ಸೊಪ್ಪನ್ನು ಚೆನ್ನಾಗಿ ಜಜ್ಜಿ, ರಾತ್ರಿ ನೀರಿನಲ್ಲಿ ನೆನೆ ಹಾಕಿ, ಆ ನೀರನ್ನು ಶುಭ್ರ ಬಟ್ಟೆಯಲ್ಲಿ ಶೋಧಿಸಿ ದಿನಕ್ಕೆ ಒಂದು ಬಾರಿಯಂತೆ ಏಳು ದಿನ ಕುಡಿದರೆ ಕಾಮಾಲೆ ರೋಗ ಹತೋಟಿಗೆ ಬರುತ್ತದೆ. 
9. ಗೋರಂಟಿ ಬೀಜದ ಪುಡಿಗೆ, ಶುದ್ಧ ಜೇನು ಬೆರೆಸಿ ಸೇವಿಸಿದರೆ ತಲೆಸುತ್ತು ಕಡಿಮೆಯಾಗುವುದು. 
10. ಹಸಿ ಗೋರಂಟಿ ಸೊಪ್ಪನ್ನು ಜಜ್ಜಿ, ಉಂಡೆ ಮಾಡಿ, ಹಲ್ಲುನೋವಿರುವ ಜಾಗಕ್ಕೆ ಇಟ್ಟರೆ, ನೋವು ಉಪಶಮನವಾಗುತ್ತದೆ. 

ಮದರಂಗಿಯ ರಂಗು ಹೆಚ್ಚಿಸಲು
1. ಮದರಂಗಿ ಹಚ್ಚಿದ ನಂತರ, ಸ್ವಲ್ಪ ಏಲಕ್ಕಿಯನ್ನು ಹುರಿದು ಶಾಖ ಕೊಡಬೇಕು.
2. ಲಿಂಬೆ ಹಣ್ಣಿನ ರಸ ಹಚ್ಚಬಹುದು. 
3. ಮದರಂಗಿ ಹಚ್ಚಿದ ಕೈಗಳನ್ನು ಸಕ್ಕರೆ ನೀರಿನಲ್ಲಿ ಅದ್ದಿ ತೆಗೆದರೆ ಕೆಂಪು ಹೆಚ್ಚುತ್ತದೆ. 

ಗಿರಿಜಾ ಎಸ್‌. ದೇಶಪಾಂಡೆ

Advertisement

Udayavani is now on Telegram. Click here to join our channel and stay updated with the latest news.

Next