“ಮದರಂಗಿ’ ಚಿತ್ರದ ಮೂಲಕ ನಾಯಕರಾಗಿ ಎಂಟ್ರಿಕೊಟ್ಟ ಕೃಷ್ಣ , ಇದೇ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ಹೌದು, ಹಾಗೆ ನೋಡಿದರೆ, ಕೃಷ್ಣ ಅವರು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡುವ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟವರು. ಇದುವರೆಗೆ ಸುಮಾರು ಒಂಭತ್ತು ಚಿತ್ರಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಅವರಿಗೆ ನಿರ್ದೇಶನ ಮಾಡುವ ಆಸೆ ಮೊದಲಿನಿಂದ ಇತ್ತಾದರೂ, ಅವರು ಮೊದಲು ನಾಯಕರಾಗಿ ಕಾಣಿಸಿಕೊಂಡರು.
ಅವರ ಕೃಷ್ಣ ಟಾಕೀಸ್ ಬ್ಯಾನರ್‌ನಲ್ಲೇ ಈ ಚಿತ್ರ ಕೂಡ ತಯಾರಾಗುತ್ತಿರುವುದು ವಿಶೇಷ. ಈ ಹಿಂದೆ “ಮದರಂಗಿ’ ಚಿತ್ರ ನಿರ್ಮಿಸಿದ್ದ ಕೃಷ್ಣ, ಈಗ ಅವರ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಅವರದೇ. ಸಿನಿಮಾ ಜರ್ನಿ ಶುರುಮಾಡುವ ಮುನ್ನ ಅವರಿಗೊಂದು ದಾರಿ ಬೇಕಿತ್ತು. ಆ ಹುಡುಕಾಟದಲ್ಲಿದ್ದ ಕೃಷ್ಣ ಅವರಿಗೆ ಸೂರಿ ನಿರ್ದೇಶನದ “ಜಾಕಿ’ ಸಿಕ್ಕಿತು.
ಆ ಚಿತ್ರದ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಕೃಷ್ಣ, ಆ ಬಳಿಕ “ಹುಡುಗರು’ ಚಿತ್ರದಲ್ಲೂ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದರು. ಆಮೇಲೆ ನಾಯಕರಾಗಿ ನಟಿಸುತ್ತ ಬಂದರು. ಈಗ ಅವರ ನಿರ್ದೇಶನದ ಆಸೆ ಈಡೇರಿದೆ. ಇತ್ತೀಚೆಗೆ ಅವರು ಚಿತ್ರಕ್ಕೆ ಮುಹೂರ್ತವನ್ನೂ ನಡೆಸಿದ್ದಾರೆ. ಇದೊಂದು ಎಮೋಷನಲ್ ಲವ್‌ಸ್ಟೋರಿ ಎನ್ನುವ ಕೃಷ್ಣ, ಮೂರು ಭರ್ಜರಿ ಆ್ಯಕ್ಷನ್ ಕೂಡ ಇಲ್ಲಿರಲಿದೆ.
ನಾಯಕನ ಬದುಕಿನಲ್ಲಿ ಮೂರು ಹಂತಗಳು ಬರಲಿದ್ದು, ಒಂದೊಂದು ಹಂತದಲ್ಲಿ ಒಂದೊಂದು ಕಥೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆ ಕಥೆ ಮೂಲಕ ನಾಯಕನ ಲೈಫ್ ಕೂಡ ಬದಲಾಗುತ್ತಾ ಹೋಗುತ್ತದೆ’ ಎಂಬುದು ಕಥೆ ಎನ್ನುತ್ತಾರೆ ಕೃಷ್ಣ. ಸುಮಾರು 35 ದಿನಗಳ ಕಾಲ, ಮೈಸೂರು, ಬೆಂಗಳೂರು ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇನ್ನು, ಈ ಚಿತ್ರದಲ್ಲಿ ಮೂವರು ನಾಯಕಿಯರು ನಟಿಸುತ್ತಿದ್ದಾರೆ.
ಆ ಮೂವರು ನಾಯಕಿಯರ ಪೈಕಿ ಮಿಲನ ನಾಗರಾಜ್ ಮಾತ್ರ ಪಕ್ಕಾ ಆಗಿದ್ದಾರೆ. ಇನ್ನು ಇಬ್ಬರು ನಾಯಕಿಯರಿಗೆ ಹುಡುಕಾಟ ನಡೆಯುತ್ತಿದೆ. ಈ ಚಿತ್ರಕ್ಕೆ ಕ್ರೇಜಿಮೈಂಡ್ಸ್‌ನ ಶ್ರೀ ಛಾಯಾಗ್ರಾಹಕರು. ಇವರಿಗೂ ಇದು ಛಾಯಾಗ್ರಾಹಕರಾಗಿ ಮೊದಲ ಚಿತ್ರ. ಸಂಗೀತ ನಿರ್ದೇಶಕರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಈಗಾಗಲೇ ಒಂದು ದಿನದ ಚಿತ್ರೀಕರಣ ನಡೆದಿದೆ. ನವೆಂಬರ್ 14 ರಿಂದ ಚಿತ್ರೀಕರಣ ನಡೆಯಲಿದೆ.
ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸದಿರುವ ಕೃಷ್ಣ ತೀರ್ಮಾನಿಸಿದ್ದಾರೆ. ಕಾರಣ, ಅವರೇ ನಾಯಕರಾಗಿ, ನಿರ್ದೇಶಕರಾಗಿರುವುದರಿಂದ ಎರಡನ್ನೂ ಬ್ಯಾಲೆನ್ಸ್ ಮಾಡಬೇಕಿರುವ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಚಿತ್ರೀಕರಣ ಮಾಡಿ, ನಂತರ ಸಮಯ ಪಡೆದು, ಚಿತ್ರೀಕರಿಸುವ ಯೋಚನೆ ಮಾಡಿದ್ದಾರಂತೆ. ಅಂದಹಾಗೆ, ಚಿತ್ರಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಇಷ್ಟರಲ್ಲೇ ಅದೂ ಪಕ್ಕಾ ಆಗಲಿದೆ ಎಂದಷ್ಟೇ ಹೇಳುತ್ತಾರೆ ಕೃಷ್ಣ. ಅವರ ಅಭಿನಯದ “ಲೋಕಲ್ ಟ್ರೈನ್’ ಸದ್ಯ ಡಬ್ಬಿಂಗ್ ಹಂತದಲ್ಲಿದೆ.