ಬೆಳ್ತಂಗಡಿ: ಮಂಗಳೂರಿನ ಬಿಷಪ್ ರೈ| ರೆ| ನಿಕೋಲಸ್ ಪಗಾನಿ ಅವರ ಅನುಮತಿ ಮೇರೆಗೆ 1889ರಲ್ಲಿ ಮಡಂತ್ಯಾರು ಸ್ವತಂತ್ರ ಧರ್ಮಕ್ಷೇತ್ರವಾಗಿ ಅಗ್ರಹಾರ ಧರ್ಮಕ್ಷೇತ್ರದಿಂದ ಬಿಡುಗಡೆಗೊಂಡು ಮಡಂತ್ಯಾರು ಸೇಕ್ರೆಡ್‌ಹಾರ್ಟ್ ಇಗರ್ಜಿ ಅಸ್ತಿತ್ವಕ್ಕೆ ಬಂದಿದ್ದು ಶತಮಾನೋತ್ತರ ಬೆಳ್ಳಿಹಬ್ಬದ ಸಂಭ್ರಮದಲ್ಲಿದೆ. ಮೇ 2ರಂದು ಸಂಭ್ರಮಾಚರಣೆ ನಡೆಯಲಿದೆ.
ಮಡಂತ್ಯಾರು ಇಗರ್ಜಿಯ ಪ್ರಧಾನ ಧರ್ಮಗುರು ವಂ| ಬೇಸಿಲ್ ವಾಸ್ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ನೀಡಿದರು. ಮೇ 1ರ ಸಂಜೆ 4 ಗಂಟೆಗೆ ಮಡಂತ್ಯಾರು ಪೇಟೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಬಳಿಕ ವಿಶೇಷ ಬಲಿಪೂಜೆಯನ್ನು ಮಂಗಳೂರು ಧರ್ಮ ಪ್ರಾಂತದ ಕಾನೂನು ಮತ್ತು ನ್ಯಾಯ ವಿಭಾಗದ ಮುಖ್ಯಸ್ಥ ವಂ| ವಾಲ್ಟರ್ ಡಿ’ಮೆಲ್ಲೊ ನೆರವೇರಿಸುವರು.
ಮೇ 2ರ ಬೆಳಗ್ಗೆ 9 ಬಲಿಪೂಜೆಯೊಂದಿಗೆ ಸಂಭ್ರಮಾಚರಣೆ ಆರಂಭಗೊಳ್ಳಲಿದೆ. ಐವರು ಬಿಷಪರು, 50ಕ್ಕೂ ಹೆಚ್ಚು ಧರ್ಮಗುರುಗಳು ಮತ್ತು 3,000ಕ್ಕೂ ಹೆಚ್ಚು ಭಕ್ತರ ಸಮ್ಮುಖದಲ್ಲಿ ಪೂಜೆ ನಡೆಯಲಿದೆ. ಪೂಜಾ ವಿಧಿ ವಿಧಾನಗಳನ್ನು ಮಂಗಳೂರು ಬಿಷಪ್ ರೈ| ರೆ| ಡಾ| ಅಲೋಶಿಯಸ್ ಡಿ’ಸೋಜಾ ನಿರ್ವಹಿಸುವರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಷಪ್ ರೈ| ರೆ| ಡಾ| ಅಲೋಶಿಯಸ್ ಡಿ’ಸೋಜಾ ವಹಿಸುವರು. ಮುಖ್ಯ ಅತಿಥಿಗಳಾಗಿ ಪಾಟ್ನ ಧರ್ಮಪ್ರಾಂತದ ರೈ| ರೆ| ಡಾ| ವಿಲಿಯಂ ಡಿ’ಸೋಜಾ ಎಸ್.ಜೆ., ಬೆಳ್ತಂಗಡಿ ಬಿಷಪ್ ರೈ| ರೆ| ಡಾ| ಲಾರೆನ್ಸ್ ಮುಕ್ಕುಯಿ, ಬಳ್ಳಾರಿ ಬಿಷಪ್ ರೈ| ರೆ| ಡಾ| ಹೆನ್ರಿ ಡಿ’ಸೋಜಾ, ಪುತ್ತೂರು ಬಿಷಪ್ ರೈ| ರೆ| ಡಾ| ಗೀವರ್ಗೀಸ್ ಮಾರ್ ಮಾರRರಿಯೋಸ್, ಅರ್ಸುಲೈನ್ ಫ್ರಾನ್ಸಿಸ್ಕನ್ ಸಿಸರ್ನ ಮದರ್ ಜನರಲ್ ವಂ| ಸಿ| ಸುಶೀಲಾ ಸಿಕ್ವೇರಾ ಯು.ಎಫ್. ಎಸ್., ಬೆಳ್ತಂಗಡಿ ವಲಯದ ವಿಗಾರ್ ಜನರಲ್ ವಂ| ಬೊನವೆಂಚರ್ ನಜ್ರೆತ್, ಸಚಿವ ಬಿ. ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಕೆ. ವಸಂತ ಬಂಗೇರ, ಮಡಂತ್ಯಾರು ಗ್ರಾ.ಪಂ. ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಮೆಲೈಟ್ಸ್ ಪ್ರಾಂತೀಯ ಮುಖ್ಯಸ್ಥರಾದ ವಂ| ಚಾರ್ಲ್ಸ್ ಸೆರಾವೊ ಓ.ಸಿ.ಡಿ.., ಸಲೆಶಿಯನ್ ಸಿಸ್ಟರ್ ಪ್ರಾಂತೀಯ ಮುಖ್ಯಸ್ಥೆ ಸಿ| ರೀಟಾ ಡೋರಾ ಥೋಮಸ್, ಅರ್ಸುಲೈನ್ ಪ್ರಾಂತೀಯ ಮುಖ್ಯಸ್ಥರಾದ ವಂ| ಸಿ| ಅಪೋಲಿನ್ ಕೊರ್ಡೆರೊ ಯು.ಎಫ್.ಎಸ್. ಉಪಸ್ಥಿತರಿರಲಿದ್ದಾರೆ ಎಂದರು. ವಂ| ಆಲ್ವಿನ್ ಡಿ’ಸೋಜಾ, ಪ್ರಾಂಶುಪಾಲರಾದ ವಂ| ಜೆರೊಮ್ ಡಿ’ಸೋಜಾ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೊನಾಲ್ಡ್ ಸಿಕ್ವೇರಾ, ಕಾರ್ಯದರ್ಶಿ ಲಿಯೋ ರೊಡ್ರಿಗಸ್, ವಿವೇಕ್ ವಿ. ಪಾçಸ್ ಅರ್ತಿಲ ಮೊದಲಾದವರಿದ್ದರು.
ಧ್ಯಾನ ಗುಹೆ ಅನಾವರಣ
ಚರ್ಚ್ ಆವರಣದಲ್ಲಿ ಸುಮಾರು 300 ಮೀಟರ್ ಉದ್ದದ ಧ್ಯಾನ ಗುಹೆ ಕೊರೆಯಲಾಗಿದೆ. ಇಗರ್ಜಿಯ ಮುಂಭಾಗ ಇರುವ ಯೇಸುಕ್ರಿಸ್ತನ ಪವಾಡ ಪ್ರತಿಮೆ ತೆಗೆದು ಧ್ಯಾನ ಗುಹೆಯುಳ್ಳ ಪೂಜಾ ಗೋಪುರದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಈ ಪವಾಡ ಶಿಲ್ಪವನ್ನು ಇಗರ್ಜಿಯ ಶತಮಾನೋತ್ತರ ಬೆಳ್ಳಿ ವರ್ಷದ ಸಂಭ್ರಮದಲ್ಲಿ ವಿಶೇಷ ಗೌರವದಿಂದ ಅನಾವರಣಗೊಳಿಸಲಿದ್ದೇವೆ ಎಂದು ಪ್ರಧಾನ ಧರ್ಮಗುರು ಫಾ| ಬೇಸಿಲ್ ವಾಸ್ ಹೇಳಿದರು.