Advertisement

Madantyaru; ಗೇರುಕಟ್ಟೆ ಪ್ರೌಢಶಾಲೆಯ 4 ಕಟ್ಟಡ ಶಿಥಿಲ!

01:02 PM Oct 14, 2024 | Team Udayavani |

ಮಡಂತ್ಯಾರು: ಗೇರುಕಟ್ಟೆ ಸಂಯುಕ್ತ ಪದವಿ ಪೂರ್ವ ಕಾಲೇಜು- ಪ್ರೌಢ ಶಾಲೆಯ ಆವರಣದ ತುಂಬ ಶಿಥಿಲ ಕಟ್ಟಡಗಳ ಸಂತೆಯೇ ತುಂಬಿದೆ. ಹೇಳುವುದಕ್ಕೆ ಇಲ್ಲಿ ಅಕ್ಷರದಾಸೋಹ, ಕಂಪ್ಯೂಟರ್‌ ರೂಂ ಸೇರಿ ಏಳೆಂಟು ಕಟ್ಟಡಗಳಿವೆ. ಆದರೆ, ಅವುಗಳ ಪೈಕಿ ನಾಲ್ಕು ಕಟ್ಟಡಗಳು ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿವೆ. ಆದರೆ ಅವುಗಳನ್ನು ಕೆಡವಲೂ ಇಲ್ಲ, ಹೊಸ ಕಟ್ಟಡ ರಚನೆಗೂ ಮನಸು ಮಾಡಿಲ್ಲ. ಕೊನೆಗೆ, ಸರಿ ಮಾಡಬಹುದಾದ ಆರ್‌ಸಿಸಿ ಕಟ್ಟಡವನ್ನು ರಿಪೇರಿ ಕೂಡಾ ಮಾಡಿಲ್ಲ.

Advertisement

3 ದೊಡ್ಡ ಕಟ್ಟಡ ಅಪಾಯದಲ್ಲಿ
30 ವರ್ಷಗಳ ಹಿಂದೆ ನಿರ್ಮಾಣವಾದ ಮೂರು ದೊಡ್ಡ ಹಂಚಿನ ಮಾಡಿನ ಕಟ್ಟಡಗಳು ಶಿಥಿಲಾವಸ್ಥೆ ತಲುಪಿದೆ. ಮೇಲ್ಛಾವಣಿ ಕುಸಿತ, ಗೋಡೆ ಬಿರುಕಿನ ಕಾರಣಕ್ಕಾಗಿ ಈ ಕಟ್ಟಡದಲ್ಲಿ ಕ್ಲಾಸುಗಳನ್ನು ಮಾಡದೆ ಐದಾರು ವರ್ಷ ಸಂದಿದೆ. ಶಿಥಿಲವಾದ ಕಟ್ಟಡ ಕೆಡವಲು ಜಿಲ್ಲಾ ಪಂಚಾಯತ್‌ನಿಂದ ಅನುಮತಿ ದೊರಕಿತ್ತು. ಆದರೆ, ಕೆಡವಿಲ್ಲ. ಶಿಥಿಲವಾದ ಕಟ್ಟಡದ ಪಕ್ಕದಲ್ಲಿ ಮಕ್ಕಳು ಓಡಾಡದಂತೆ ಹಗ್ಗ ಕಟ್ಟಲಾಗಿದೆ.

ನೀರು ಜಿನುಗುವ ಹೊಸ ಕಟ್ಟಡ
ಇನ್ನು 15 ವರ್ಷಗಳ ಹಿಂದೆ ನಿರ್ಮಾಣವಾದ ಹೊಸ ಆರ್‌ಸಿಸಿ ಕಟ್ಟಡ ಕಳೆದ ಕೆಲವು ವರ್ಷಗಳಿಂದ ಸೋರಲು ಶುರುವಾಗಿದೆ. ಕಟ್ಟಡದ ಎರಡು ಕೋಣೆಗಳಲ್ಲಿ ಮಳೆಗಾಲದಲ್ಲಿ ನೀರು ಜಿನುಗುತ್ತಿರುತ್ತದೆ. ಒಳಗೆ ಮತ್ತು ಜಗಲಿಯಲ್ಲಿ ನೀರೋ ನೀರು. ಕಟ್ಟಡ ಶಿಥಿಲವಾದ ಹಿನ್ನೆಲೆಯಲ್ಲಿ ಈಗ ಮಕ್ಕಳ ವಿದ್ಯಾಭ್ಯಾಸಕ್ಕೆ ಬಳಸುತ್ತಿಲ್ಲ. ಮೂರು ವರ್ಷದ ಹಿಂದೆ ಇದಕ್ಕೆ ಬೀಗ ಬಿದ್ದಿದೆ.

ಹಳೆಯ ಕಟ್ಟಡ ಕೆಡವಿ, ಸಾಧ್ಯವಾಗುವುದಾದರೆ ಆರ್‌ಸಿಸಿ ಕಟ್ಟಡ ದುರಸ್ತಿ ಮಾಡಿ, ಹೊಸ ಕಟ್ಟಡ ನಿರ್ಮಿಸಿ ಕೊಡಿ. ಹೇಗಾದರೂ ಮಕ್ಕಳ ಅಗತ್ಯಕ್ಕೆ ಸ್ಪಂದಿಸಿ ಎನ್ನುವುದು ಊರಿನ ನಾಗರಿಕರು, ಮಕ್ಕಳು ಮತ್ತು ಪೋಷಕರ ಆಗ್ರಹ.

ಶಿಥಿಲಗೊಂಡಿರವ ಹಂಚಿನ ಮಾಡಿನ ಕಟ್ಟಡ.

Advertisement

ಈಗ ಕೊಠಡಿಗಳಿಲ್ಲದೆ ಸಮಸ್ಯೆ

  • ಎಲ್ಲ ಕಟ್ಟಡಗಳು ಶಿಥಿಲವಾಗಿರುವುದರಿಂದ ಮಕ್ಕಳಿಗೆ ಪಾಠ ಕೇಳಲು ಜಾಗವೇ ಇಲ್ಲದಂತಾಗಿದೆ.
  • ಕಂಪ್ಯೂಟರ್‌ ಕೊಠಡಿ ಎಂದು ಆರಂಭಿಸಲಾದ ಕಟ್ಟಡದಲ್ಲಿ 8ನೇ ತರಗತಿ ನಡೆಯುತ್ತಿದೆ.
  • 2015ರಲ್ಲಿ ನಿರ್ಮಾಣದ ಮಕ್ಕಳ ಅನ್ನಪೂರ್ಣ ಕೊಠಡಿಯಲ್ಲಿ 9ನೇ ತರಗತಿಯ ಸುಮಾರು 85 ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.
  • ಮುಖ್ಯ ಶಿಕ್ಷಕರ ಕೊಠಡಿಯಲ್ಲಿಯೇ ಅನ್ನ ದಾಸೋಹದ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದೆ.
  • ಮುಖ್ಯ ಶಿಕ್ಷಕರಿಗೆ, ಸಹ ಶಿಕ್ಷಕರಿಗೆ ಕುಳಿತುಕೊಳ್ಳಲು ಕೊಠಡಿ ಹಾಗೂ ಸಿಬಂದಿಗೆ ಶೌಚಾಲಯ ಬೇಕಾಗಿದೆ.
  • ಮಕ್ಕಳ ಪೋಷಕರ ಸಭೆ ಮತ್ತು ಶಾಲೆಯಲ್ಲಿ ನಡೆಯುವ ಇನ್ನಿತರ ಕಾರ್ಯಕ್ರಮಗಳಿಗಂತೂ ಜಾಗವೇ ಇಲ್ಲ.

ಉತ್ತಮ ಫ‌ಲಿತಾಂಶದ ಶಾಲೆ
ಈ ಪಿಯು – ಹೈಸ್ಕೂಲಿನಲ್ಲಿ ಈ ವರ್ಷ 196 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಈ ಸಂಖ್ಯೆ ಹೆಚ್ಚಾಗಿದೆ. ಅಂದರೆ ಗ್ರಾಮೀಣ ಭಾಗದ ಶಾಲೆಯ ಜನಪ್ರಿಯತೆ ಹೆಚ್ಚಾಗಿದೆ. 2023-24 ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇಕಡಾ 98.28 ಫಲಿತಾಂಶ ಬಂದಿದೆ. ಗ್ರಾಮೀಣ ಪ್ರದೇಶದಲ್ಲಿದ್ದರೂ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿದೆ. ಇಂಥ ಶಾಲೆಗೆ ತರಗತಿ ಕಟ್ಟಡಗಳ ಕೊರತೆ ಇದೆ. ಅದರ ಜತೆಗೆ ಶಿಕ್ಷಕರ ಕೊರತೆಯೂ ಕಾಡುತ್ತಿದೆ.

ಶಿಥಿಲ ಕಟ್ಟಡಗಳಿಂದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗದಂತೆ ತತ್‌ಕ್ಷಣ ತೆರವು ಮಾಡಲು ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತೇವೆ. ಕಟ್ಟಡ ದುರಸ್ತಿಗೆ ಗ್ರಾಮ ಪಂಚಾಯತ್‌ ಸಹಕಾರ ನೀಡುತ್ತಿದೆ.
-ಸಂತೋಷ್‌ ಪಾಟೀಲ ಎಸ್‌.,ಪಿಡಿಒ, ಕಳಿಯ ಗ್ರಾಪಂ

ಹಳೆ ವಿದ್ಯಾರ್ಥಿಗಳೇ ನೀವೂ ನೆರವು ಕೊಡಿ
ಶಾಲೆಯ ಸಣ್ಣಪುಟ್ಟ ಸಮಸ್ಯೆಗಳಿಗೆ ಪೋಷಕರು, ಕಳಿಯ ಗ್ರಾಪಂ, ವಿದ್ಯಾಭಿಮಾನಿಗಳು ಸಹಕಾರ ನೀಡುತ್ತಾರೆ. ಈ ವರ್ಷ ಇನ್ನೂ ಶಾಲಾ ಮೇಲುಸ್ತುವಾರಿ ಸಮಿತಿಯೇ ರಚನೆ ಆಗಿಲ್ಲ. ಉದ್ಯೋಗದಲ್ಲಿರುವ, ಹೊರದೇಶಗಳಲ್ಲಿರುವ ಹಳೆಯ ವಿದ್ಯಾರ್ಥಿಗಳು, ಸಂಘ -ಸಂಸ್ಥೆ, ಶಿಕ್ಷಣ ಪ್ರೇಮಿಗಳು ಜನಪ್ರತಿನಿಧಿಗಳ ಸಹಕಾರದಿಂದ ಶಾಲೆಯ ಸಮಸ್ಯೆಗಳನ್ನು ನಿವಾರಿಸಲು ಸಾಧ್ಯ ಎನ್ನುತ್ತಾರೆ ಉಪಪ್ರಾಂಶುಪಾಲೆ ಈಶ್ವರಿ ಕೆ.

ರಿಪೇರಿ ಮಾಡಿದರೆ ಜಾಗ ಸಿಕ್ಕೀತು
ಆರ್‌ಸಿಸಿ ಕಟ್ಟಡವನ್ನು ರಿಪೇರಿ ಮಾಡಿಸಿದರೆ ಮಳೆಗಾಲ ಹೊರತಾದ ಸಮಯದಲ್ಲಾದರೂ ಬಳಸಬಹುದು. ಮೂರು ವರ್ಷದ ಹಿಂದೆ ಮುಚ್ಚಿದ ಕೊಠಡಿ ದುರಸ್ತಿ ಮಾಡಿದರೆ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ರೂಪಿಸಿರುವ ವೃತ್ತಿಶಿಕ್ಷಣಕ್ಕೆ ಬದಲಾದ ವಿಶೇಷ ಹಿಂದಿ ತರಗತಿ ಮಾಡಬಹುದು. ಐ.ಟಿ.ಐ. ಆಟೋಮೊಬೈಲ್‌ಗೆ ಸಂಬಂಧಿಸಿದ ಉಪಕರಣಗಳನ್ನು ಸಂಗ್ರಹಿಸಲು ಅನುಕೂಲವಾಗುತ್ತದೆ ಎಂದು ಮೇಲುಸ್ತುವಾರಿ ಸಮಿತಿ, ಪೋಷಕರ ಮತ್ತು ಶಿಕ್ಷಕರ ಅಭಿಪ್ರಾಯ.

-ಕೆ.ಎನ್‌. ಗೌಡ, ಗೇರುಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next