Advertisement

ಆಪತ್ಬಂಧು ಕಲಾವಿದ ಮದಂಗಲ್ಲು ಶ್ರೀನಿವಾಸ ರಾವ್‌

01:34 PM Mar 10, 2017 | |

ಒಂದು ಸಾದಾ ಅಂಗಿ, ಒಂದು ಲುಂಗಿ, ಒಂದು ಮುಗ್ಧ ನಗು. ಸಾಮಾನ್ಯ ಎತ್ತರದ ದಷ್ಟಪುಷ್ಟ ಕಾಯ. ಎದುರಾದವನಲ್ಲಿ ಮೆದು ಸ್ವರದ ಹಾಸ್ಯ ಮಿಶ್ರಿತ ಮಾತು. ಇದು ಮದಂಗಲ್ಲು ಶ್ರೀನಿವಾಸ ರಾವ್‌ ಎಂಬ ಬಹುಮುಖೀ ಆಪತ್‌ಬಂಧು ಕಲಾವಿದನನ್ನು ಆತ್ಮೀಯ ವರ್ಗ ಕಂಡುಕೊಳ್ಳುವ ಬಗೆ. ಪ್ರೀತಿಯಿಂದ “ಒಪ್ಪಣ್ಣ’ನೆಂದೇ ಕರೆಸಿಕೊಂಡವರು. ಸುಮಾರು 47 ವರ್ಷಗಳಿಂದ ಶ್ರೀನಿವಾಸ ರಾವ್‌ ಹವ್ಯಾಸಿ ಯಕ್ಷಗಾನ ಹಾಗೂ ನಾಟಕ ರಂಗದಲ್ಲಿ ಸದ್ದಿಲ್ಲದೆ ದುಡಿಯುತ್ತಿದ್ದಾರೆ. ಅವರ ಕಲಾ ಸೇವೆಯನ್ನು ಮನಗಂಡು 12-3-2017ರಂದು ಬೆಳುವಾಯಿಯ ಶ್ರೀ ಯಕ್ಷದೇವ ಮಿತ್ರ ಕಲಾ ಮಂಡಳಿ ಸಂಸ್ಥೆಯು ತನ್ನ ವಿಂಶತಿ ಕಲೋತ್ಸವದ ಪ್ರಯುಕ್ತ‌ ನಡೆಸಿಕೊಂಡು ಬರುತ್ತಿರುವ ಸರಣಿಯ 7ನೇ ಕಾರ್ಯಕ್ರಮದಂಗವಾಗಿ ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ಗಣ್ಯರ ಸಮಕ್ಷಮ ಸಮ್ಮಾನಿಸಲಿದೆ. 

Advertisement

ಶ್ರೀನಿವಾಸ ರಾಯರು ಓರ್ವ ಪ್ರಸಾದನ ಕಲಾವಿದನಾಗಿ, ನೇಪಥ್ಯ ಕಲಾವಿದನಾಗಿ ರಾತ್ರಿಯಿಂದ ಬೆಳಗಿನವರೆಗೆ ಹವ್ಯಾಸಿ ಯಕ್ಷಗಾನ ಕಲಾವಿದರ ಮುಖವರ್ಣಿಕೆ ಬರೆಯುತ್ತಾ, ನಾಟಕ ಹಾಗೂ ಶಾಲಾ ವಾರ್ಷಿಕೋತ್ಸವಗಳಲ್ಲಿ ಪುಟಾಣಿಗಳಿಗೆ ಪ್ರಸಾದನ ಕೈಂಕರ್ಯ ನಡೆಸುತ್ತಾ, ನೇಪಥ್ಯದಲ್ಲಿ ಹವ್ಯಾಸಿ ಕಲಾವಿದರಿಗೆ ವೇಷಭೂಷಣ ಕಟ್ಟುತ್ತಾ ದಣಿವರಿಯದೆ ದುಡಿದವರು. ಎಲ್ಲದಕ್ಕೂ ಮುಖ್ಯವಾಗಿ ಹವ್ಯಾಸಿ ಯಕ್ಷಗಾನ ಬಯಲಾಟಗಳಿಗೆ ಆಪತ್‌ ಕಲಾವಿದನಾಗಿ ಒದಗುವವರು. ದಿನದ ಆಟಕ್ಕೆ ಯಾವುದೇ ಕಲಾವಿದರು ಗೈರಾದಾಗಲೂ ಮುಖ್ಯವಾಗಿ ಪುರುಷ ವೇಷಗಳಿಗೆ “ಒಪ್ಪಣ್ಣ’ನೇ ಗತಿ. ಸಂಘಟಕ ತಮ್ಮ ಅಸಹಾಯಕತೆಯನ್ನು ಕಿವಿಯಲ್ಲಿ ತೋಡಿಕೊಂಡಾಗ ಧೈರ್ಯ ಹೇಳಿ ತನ್ನ ನೇಪಥ್ಯ ಕೈಂಕರ್ಯಕ್ಕೆ ಅಡ್ಡಿ ಬಾರದಂತೆ ರಂಗದಲ್ಲೂ ದುಡಿಯುವುದು ಇವರ ವಿಶೇಷತೆ. ಮಾತ್ರವಲ್ಲ, ಒಟ್ಟು ಪ್ರಯೋಗಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪ್ರೇಕ್ಷಕರಿಂದಲೂ ಸೈ ಎನಿಸಿಕೊಂಡವರು.

ಬಹುಮುಖ ಪ್ರತಿಭೆಯ ಶ್ರೀನಿವಾಸ ರಾವ್‌ ಯಕ್ಷಗಾನ ರಂಗ ಹಾಗೂ ರಂಗಭೂಮಿಗೆ ಪಾದಾರ್ಪಣೆಗೈದದ್ದೇ ಆಪತ್‌ ಕಲಾವಿದನಾಗಿ ಎಂಬುದೇ ವಿಶೇಷ. ಅವರಿಗಾಗ 10 ವರ್ಷ ವಯಸ್ಸು. ಶಾಲಾ ನಾಟಕವೊಂದರಲ್ಲಿ ಅವರ ಸಹಪಾಠಿ ಪ್ರದರ್ಶನದ ದಿನ ಅನಾರೋಗ್ಯನಿಮಿತ್ತ ಬಾರದಿದ್ದಾಗ ಶಾಲಾ ಮೆನೇಜರ್‌ ಹಾಗೂ ಗುರುಗಳು “ನೀನು ಮಾಡುತ್ತೀಯಾ’ ಎಂದಾಗ ಅದನ್ನೊಪ್ಪಿ ರಂಗ ಪ್ರವೇಶಿಸಿ ಗುರುಗಳಿಂದ ಮೆಚ್ಚುಗೆಗೆ ಪಾತ್ರರಾದವರು. ಆ ಮೂಲಕ ಆಪತ್‌ ಕಲಾವಿದನಾಗಿ ಕಾರ್ಯಕ್ರಮದ ಯಶಸ್ವಿಗೆ ಕಾರಣರಾದವರು. ಮುಂದೆ 7ನೇ ತರಗತಿಯಲ್ಲಿರುವಾಗ ಶಾಲಾ ಹಳೆವಿದ್ಯಾರ್ಥಿಗಳಿಂದ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿತ್ತು. ಆಗಲೂ ಓರ್ವ ದೇವೇಂದ್ರ ಬಲ ತಪ್ಪಿಸಿಕೊಂಡಾಗ ಶ್ರೀನಿವಾಸ ರಾಯರೇ ಅದಕ್ಕೊಪ್ಪಿ ಹಿರಿಯರಾದ ಹೊಸಹಿತ್ಲು ನಾರಾಯಣ ಭಟ್ಟರಿಂದ ಗೆಜ್ಜೆಕಟ್ಟಿಸಿಕೊಂಡು ರಂಗ ಪ್ರವೇಶಿಸಿದವರು. ಹೀಗೆ ಆರಂಭವಾದ ಯಕ್ಷಗಾನ ಹಾಗೂ ರಂಗಭೂಮಿಯ ನಂಟನ್ನು ಇಂದಿಗೂ ಉಳಿಸಿ ಬೆಳೆಸಿಕೊಂಡಿದ್ದಾರೆ. ಮಾತ್ರವಲ್ಲ, ಇಂದಿಗೂ ಪೂರ್ವ ನಿರ್ಧರಿತವಾಗದ ಪಾತ್ರಗಳೇ “ಒಪ್ಪಣ್ಣ’ನಿಗೆ.

ಯಕ್ಷಗಾನ ರಂಗದ ಸುಮಾರು 47 ವರ್ಷಗಳ ಅನುಭವದಲ್ಲಿ ಪುಂಡುವೇಷ, ಕಿರೀಟವೇಷ, ಬಣ್ಣದವೇಷ, ಹೆಣ್ಣುಬಣ್ಣ; ಹಾಸ್ಯ, ಕನ್ನಡ, ತುಳು, ಪೌರಾಣಿಕ, ಕಾಲ್ಪನಿಕ ಹೀಗೆ ಎಲ್ಲ ಪ್ರಕಾರದ ವೇಷಗಳಿಗೂ ಸೈ. ಭಸ್ಮಾಸುರ ಮೋಹಿನಿಯ ಶಿವ, ದೇವಿಮಹಾತ್ಮೆಯ ಬ್ರಹ್ಮ, ಶೂರ್ಪನಖೀ, ತಾಟಕಿ, ಪೂತನಿ, ರಾವಣ, ದೇವೇಂದ್ರ, ಮಹಿಷಾಸುರ, ವಾವರ, ಅಬ್ಬುಸೇಕು, ಕೇಳುಪಂಡಿತ, ಕೇತಕಿ ವರ್ಮ, ಬುದ್ಧಿವಂತ, ಕೇಮರ ಬಲ್ಲಾಳ ಹೀಗೆ ಪೌರಾಣಿಕ, ಸಾಮಾಜಿಕ, ವೇಷಗಳನ್ನು ನಿರ್ವಹಿಸಿದ್ದಾರೆ. ನಾಟಕ ರಂಗದಲ್ಲಿ ಬಯ್ಯಮಲ್ಲಿಗೆಯ ಚಿಕ್ಕಮ್ಮ, ಬೊಳ್ಳಿಮೂಡುಂಡು ನಾಟಕದ ಗಂಗಾ, ಕೃಷ್ಣ ದೇವರಾಯದ ಅಪ್ಪಾಜಿ ಇವರ ಪ್ರಸಿದ್ಧ ಪಾತ್ರಗಳು.

 ಮೀಯಪದವು ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೂರು ದಶಕಗಳ ಕಾಲ ಅಧ್ಯಾಪನ ವೃತ್ತಿ ನಡೆಸುತ್ತಾ ಜತೆ ಜತೆಯಲ್ಲಿ ಯಕ್ಷಗಾನದ ಹಿರಿಯ ಕಲಾವಿದ ದೇವಕಾನ ಕೃಷ್ಣ ಭಟ್ಟರಿಂದ ನೇಪಥ್ಯ, ಪ್ರಸಾದನದ ಕಲೆ ಕಲಿತು ಅವರದೇ ಗಣೇಶ ಕಲಾವೃಂದ ಸಂಸ್ಥೆಯಲ್ಲಿ ದುಡಿಯುತ್ತಾ ಬಂದವರು. ಪಣಂಬೂರು ಶ್ರೀಧರ ಐತಾಳರು “ಒಪ್ಪಣ್ಣ’ರಿಗೆ ಯಕ್ಷಗಾನದ ಮೊದಲ ಪಾಠ ಹೇಳಿಕೊಟ್ಟವರು. ಮಾವ ಕುರಿಯ ವಿಠಲ ಶಾಸ್ತ್ರಿಗಳ ಅನುಭವದ ಮಾರ್ಗದರ್ಶನ, ಅಣ್ಣ, ತಮ್ಮಂದಿರೊಂದಿಗೆ ಯಕ್ಷಗಾನದ ಒಡನಾಟ ಯಕ್ಷಗಾನದ ಒಲವು  ಬೆಳೆಯಿಸಿತು ಎನ್ನುತ್ತಾರೆ ರಾವ್‌.

Advertisement

ತಂದೆ ಹವ್ಯಾಸಿ ಅರ್ಥದಾರಿ ಕೃಷ್ಣ ಭಟ್‌, ತಾಯಿ ಕುರಿಯ ವಿಠಲ ಶಾಸ್ತ್ರಿಗಳ ಸಹೋದರಿ ಸಾವಿತ್ರಿ. ಅಣ್ಣತಮ್ಮಂದಿರು, ಮಕ್ಕಳು, ಮೊಮ್ಮಕ್ಕಳು, ಅಳಿಯ ಹೀಗೆ ಇವರ ಮನೆಯಲ್ಲಿ ಎಲ್ಲರೂ ಹವ್ಯಾಸಿ ಕಲಾವಿದರು, ಇವರ ಮನೆಯೇ ಒಂದು ಯಕ್ಷ ದೇಗುಲ. ಹೆಂಡತಿ ಕೃಷ್ಣ ಕುಮಾರಿಯೊಂದಿಗೆ ಸಂತೃಪ್ತ ಜೀವನ.

ಶ್ರೀನಿವಾಸ ರಾಯರನ್ನು ಹತ್ತು ಹಲವು ಸಂಸ್ಥೆಗಳು ಗೌರವಿಸಿವೆ. ಯಾವುದನ್ನೂ ಅತಿಯಾಗಿ ಹಚ್ಚಿಕೊಳ್ಳದ ಸ್ಥಿತಪ್ರಜ್ಞ, ಕೋಪವರಿಯದ ಅಜಾತಶತ್ರು ಮದಂಗಲ್ಲು ಶ್ರೀನಿವಾಸ ರಾಯರಿಗೆ ಸಲ್ಲಲಿರುವ ಗೌರವ ಕಲಾಮಾತೆಗೆ ಸಲ್ಲುವ ಗೌರವವೂ ಹೌದು, ಮದಂಗಲ್ಲು ಕಲಾಗೃಹಕ್ಕೆ ಸಲ್ಲುವ ಗೌರವವೂ ಹೌದು.

ಯೋಗೀಶ ರಾವ್‌ ಚಿಗುರುಪಾದೆ

Advertisement

Udayavani is now on Telegram. Click here to join our channel and stay updated with the latest news.

Next