ಮಾದನ ಹಿಪ್ಪರಗಿ: ನೆರೆಯ ಮಹಾರಾಷ್ಟ್ರದಿಂದ ಬಂದ ಕೂಲಿ ಕಾರ್ಮಿಕರನ್ನು ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಸೇರಿ ಹೋಮ್ ಕ್ವಾರಂಟೈನ್
ನಲ್ಲಿಡಲು ಯಶಸ್ವಿಯಾಗಿದ್ದಾರೆ.
ಪುಣೆ, ಮುಂಬೈ ಕಡೆಯಿಂದ ಬಂದ ಕೂಲಿ ಕಾರ್ಮಿಕರು ಗ್ರಾಮದಲ್ಲಿ ರಾಜಾರೋಷವಾಗಿ ತಿರುಗಾಡುವರನ್ನು ಕಂಡು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿತ್ತು. ಮಾಜಿ ಶಾಸಕ ಬಿ.ಆರ್. ಪಾಟೀಲ ಅವರು ಮಹಾರಾಷ್ಟ್ರದಿಂದ ಕರೆತಂದ 77 ಜನ ಕನ್ನಡಿಗರನ್ನು ಸ್ಥಳೀಯ ಬಾಲಕರ ವಸತಿ ನಿಲಯದಲ್ಲಿ ಕ್ವಾರಂಟೈನಲ್ಲಿಟ್ಟಿದ್ದರು.
ಮಹಾರಾಷ್ಟ್ರದ ವಿವಿಧ ಜಿಲ್ಲೆಗಳಿಂದ ಬಂದ ನೂರಾರು ಕಟ್ಟಡ ಕೂಲಿ ಕಾರ್ಮಿಕರು, ಇಟ್ಟಿಗೆ ಬಟ್ಟಿಯಲ್ಲಿ ದುಡಿಯುವ ಜನ ಗುಂಪು-ಗುಂಪಾಗಿ ಗ್ರಾಮದೊಳಗೆ ಸೇರಿಕೊಂಡಿದ್ದರು. ಗ್ರಾಮದ ಹೊಸ ಬಡಾವಣೆ (ಮಡ್ಡಿ)ಯಲ್ಲಿಯೇ ಪುಣೆಯಿಂದ ಸುಮಾರು 30 ಜನ ಕಾರ್ಮಿಕರು ಬಂದಿದ್ದರು. ಅವರನ್ನು ಕ್ವಾರಂಟೈನ್‌ನಲ್ಲಿ ಇಡಲು ಕೋವಿಡ್ ವಾರಿಯರ್ಸ್ ಮುಂದಾದಾಗ ಸೂಕ್ತವಾಗಿ ಸ್ಪಂದಿಸಲಿಲ್ಲ. ಆಗ ಹಾಸ್ಟೆಲ್‌ನಲ್ಲಿ ಕ್ವಾರಂಟೈನಲ್ಲಿದ್ದವರು ನಮಗೂ ಮನೆಗೆ ಕಳಿಸಿಕೊಡಿ. ಅವರನ್ನು ಊರೊಳಗೆ ತಿರುಗಾಡಲು ಬಿಟ್ಟು ನಮಗೆ ಇಲ್ಲಿ ಬಂಧಿಯಾಗಿ ಇಟ್ಟಿದ್ದೀರಿ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಪಿಡಿಒ ರಮೇಶ ಪ್ಯಾಟಿ ಹಾಗೂ ಆರೋಗ್ಯ ಕಿರಿಯ ಸಹಾಯಕಿ ಜ್ಯೋತಿ ಅವರು ಹೊಸ ಬಡಾವಣೆಗೆ ತೆರಳಿ ಕೆಲವರ ಮನ ಪರಿವರ್ತಿಸಿದರು. ಹೋಮ್ ಕ್ವಾರಂಟೈನ್‌ನಲ್ಲಿ ಇರಲು ಒಪ್ಪಿಸಿದರು. ಅದರಂತೆ ವಸತಿ ನಿಲಯಕ್ಕೆ ಕರೆತಂದು ಹೋಮ್ ಕ್ವಾರಂಟೈನ್ ಮಾಡಲಾಯಿತು.