ಮಾದನ ಹಿಪ್ಪರಗಿ: ಇಲ್ಲಿನ ಪಿಕೆಪಿಎಸ್ ಕೇಂದ್ರದಲ್ಲಿ ನ್ಯಾಪಾಡ್ ಸಂಸ್ಥೆ ಆರಂಭಿಸಿದ ಖರೀದಿ ಕೇಂದ್ರದಲ್ಲಿನ ತೊಗರಿ ಸಾಗಾಟಕ್ಕೆ ಲಾರಿಯವರು ಭತ್ಯೆ ರೂಪದಲ್ಲಿ ಹಣದ ಬೇಡಿಕೆ ಇಟ್ಟಿದ್ದರಿಂದ ತೊಗರಿಯೆಲ್ಲ ಆವರಣ, ಗೋದಾಮು ತುಂಬಿಕೊಂಡಿದ್ದು, ಹಂದಿಗಳು ಚೀಲ ಹರಿದು ತಿಂದು ಹೋಗುತ್ತಿವೆ.
ಈ ಖರೀದಿ ಕೇಂದ್ರದಲ್ಲಿ ಒಟ್ಟು 1250 ರೈತರು ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ 980 ರೈತರ ಸ್ಕ್ಯಾನಿಂಗ್ ಆಗಿದೆ. 270 ರೈತರ ಅರ್ಜಿಗಳು ತಾಂತ್ರಿಕ ದೋಷ ಅಥವಾ ದೃಢೀಕರಣ ಇಲ್ಲದ ಕಾರಣ ತಿರಸ್ಕೃತವಾಗಿವೆ. ಈಗಾಗಲೇ 220 ರೈತರ ತೊಗರಿ ಖರೀದಿಯಾಗಿದೆ.
500 ಕ್ವಿಂಟಾಲ್ ತೊಗರಿ ತೆಗೆದುಕೊಂಡು ಹೋಗಲು ಲಾರಿಯವರಿಗೆ 500ರೂ. ಭತ್ಯೆ ಈಗಾಗಲೇ ನೀಡಲಾಗಿದೆ. ಇನ್ನುಳಿದ 1500 ಕ್ವಿಂಟಾಲ್ ತೊಗರಿ ಒಯ್ಯಲು ಲಾರಿಯ ಚಾಲಕರು 1000ರೂ.ಗಳಿಂದ 1500ರೂ. ವರೆಗೆ ಡಿ.ಎ ಕೊಡಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ. ಪ್ರತಿ ಲಾರಿಗೆ ಇಷ್ಟೊಂದು ಹಣ ಎಲ್ಲಿಂದ ಕೊಡಬೇಕು ಎಂದು ರೈತ ಮುಖಂಡ, ಆಳಂದ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಚಂದ್ರಕಾಂತ ಕಡಗಂಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ತೊಗರಿ ಹೊರಗೆ ಬಿದ್ದಿದೆ.
ರಾತ್ರಿಹೊತ್ತು ಹಂದಿಗಳು ಚೀಲ ಹರಿದು ತಿಂದು ಹೋಗುತ್ತಿವೆ. ಹೀಗಾಗಿ ರಾತ್ರಿ ಕಾವಲುಗಾರರನ್ನು ನೇಮಿಸಲಾಗಿದೆ. ಸರಕಾರ ಭತ್ಯೆ ನೀಡಿದರೂ ತೊಗರಿ ಕೇಂದ್ರದವರಿಂದ ಹಣ ಕೀಳಲು ಲಾರಿಯವರು ಹಗಲು ದರೋಡೆಗೆ ಇಳಿದಿದ್ದಾರೆ. ಜಿಲ್ಲಾಧಿಕಾರಿಗಳು
ತೊಗರಿ ಕೇಂದ್ರಗಳತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಪಿಕೆಪಿಎಸ್ ಆವರಣ, ಕಚೇರಿ ಗೋದಾಮು ತೊಗರಿ ಚೀಲಗಳಿಂದ ತುಂಬಿದೆ. ಮಂಗಳವಾರ ರಾತ್ರಿ ವರೆಗೆ ಲಾರಿಗಳು ಬಂದು ತೊಗರಿ ಒಯ್ದರೇ ಬುಧವಾರ ಖರೀದಿ ಆರಂಭ ಇರುತ್ತದೆ. ಇಲ್ಲದಿದ್ದರೇ ತೊಗರಿ ತೂಕ ಮಾಡಲು ಮತ್ತು ಇಡಲು ಸ್ಥಳದ ಅಭಾವ ಇರುವುದರಿಂದ ಅನಿವಾರ್ಯವಾಗಿ ತೊಗರಿ ಕೇಂದ್ರ ಬಂದ್ ಮಾಡಬೇಕಾಗುತ್ತದೆ.
ಶಿವಾನಂದ ಪಾಟೀಲ,
ಕಾರ್ಯನಿರ್ವಹಣಾ ಅಧಿಕಾರಿ,
ಪಿಕೆಪಿಎಸ್