ಬಿಸಿಸಿಐ ಉನ್ನತ ಕ್ರಿಕೆಟ್ ಸಮಿತಿಯಲ್ಲಿ ಮಾಜಿ ಕ್ರಿಕೆಟಿಗರಾದ ಮದನ್ ಲಾಲ್ ಮತ್ತು ಗೌತಮ್ ಗಂಭೀರ್ ಸ್ಥಾನ ಪಡೆಯುವುದು ಶೇ.100 ಖಚಿತವಾಗಿದೆ. ಈ ಬಗ್ಗೆ ಬಿಸಿಸಿಐ ಅಧಿಕೃತ ಮೂಲಗಳೇ ಖಚಿತಪಡಿಸಿವೆ. ಈ ಸಮಿತಿಯ ಮೂರನೇ ಸದಸ್ಯರಾಗಿ ಮಾಜಿ ಅಂತಾರಾಷ್ಟ್ರೀಯ ಮಹಿಳಾ ಆಟಗಾರ್ತಿ, ಮುಂಬೈನ ಸುಲಕ್ಷಣಾ ನಾಯಕ್ ಸ್ಥಾನ ಪಡೆಯಲಿದ್ದಾರೆ.
ಈ ಬಗ್ಗೆ ಸದ್ಯದಲ್ಲಿ ಬಿಸಿಸಿಐ ಅಧಿಕೃತವಾಗಿ ಪ್ರಕಟಿಸಲಿದೆ. ಆದರೆ ಈ ಸಮಿತಿಯ ಕಾಲಾವಧಿ ಎಷ್ಟು ಎನ್ನುವುದು ಇನ್ನಷ್ಟೇ ಖಚಿತವಾಗಬೇಕಿದೆ.
ಹಿಂದೆ ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷ್ಮಣ್, ಕಪಿಲ್ ದೇವ್, ಅಂಶುಮಾನ್ ಗಾಯಕ್ವಾಡ್, ಶಾಂತಾ ರಂಗಸ್ವಾಮಿ ಸ್ವಹಿತಾಸಕ್ತಿ ಸಂಘರ್ಷದ ಕಾರಣ ತ್ಯಜಿಸಿದ್ದ ಸ್ಥಾನವನ್ನು ಇವರು ಹೊಂದಲಿದ್ದಾರೆ.
ಉನ್ನತ ಕ್ರಿಕೆಟ್ ಸಮಿತಿಗೆ ಆಯ್ಕೆ ಸಮಿತಿಯ ಸದಸ್ಯರನ್ನು ನೇಮಿಸುವುದು, ತರಬೇತುದಾರರನ್ನು ಆಯ್ಕೆ ಮಾಡುವುದು ಇಷ್ಟು ಮಾತ್ರ ಕೆಲಸವಾಗಿರುತ್ತದೆ. ಈ ಸದಸ್ಯರಿಗೆ ಸ್ವಹಿತಾಸಕ್ತಿ ಸಂಘರ್ಷದಂತಹ ಸಮಸ್ಯೆಗಳು ಎದುರಾಗುವುದರಿಂದ, ಈ ಜವಾಬ್ದಾರಿ ಹೊತ್ತುಕೊಳ್ಳಲು ಯಾರೂ
ಮುಂದೆ ಬರುತ್ತಿಲ್ಲ.
ಪರಿಣಾಮ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೂಚಿಸಿದಂತೆ, ನಿರ್ದಿಷ್ಟ ಹೊಣೆ ಮುಗಿದ ತಕ್ಷಣ ಸಮಿತಿಯನ್ನು ವಿಸರ್ಜಿಸಿ, ಅಗತ್ಯ ಬಿದ್ದಾಗ ಮತ್ತೆ ನೇಮಕ ಮಾಡಿಕೊಳ್ಳುವ ತಂತ್ರ ಅನುಸರಿಸಲಿದೆಯಾ ಎಂದು ಕಾದು ನೋಡಬೇಕು.