ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ತಾಲೂಕಿನ ಮಡಹಳ್ಳಿ ಬಿಳಿ ಕಲ್ಲು ಕ್ವಾರಿಯಲ್ಲಿ ಸಂಭವಿಸಿರುವ ಗುಡ್ಡ ಕುಸಿತದಲ್ಲಿ ಉತ್ತರ ಪ್ರದೇಶ ಮೂಲದ ಹಿಟಾಚಿ ಚಾಲಕರಾದ ಫರಾಜ್, ಅಜ್ಮುಲ್ಲಾ, ಮಿರಾಜ್ ಎಂಬ ಮೂವರು ಕಲ್ಲಿನಡಿ ಸಿಲುಕಿರುವ ಗುರುತು ಪತ್ತೆಯಾಗಿದೆ. ಶವಗಳನ್ನು ಹೊರತೆಗೆಯಲು ಎನ್ ಡಿಆರ್ ಎಫ್, ಎಸ್ ಡಿಆರ್ ಎಸ್ ಹಾಗೂ ಅಗ್ನಿ ಶಾಮಕದಳದ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕಾರ್ಯಾಚರಣೆಯಲ್ಲಿ 25 ಮಂದಿ ಎನ್‌ಡಿಆರ್‌ಎಫ್, 25 ಮಂದಿ ಎಸ್‌ಟಿಆರ್‌ಎಫ್, 50 ಮಂದಿ ಅಗ್ನಿಶಾಮಕ ದಳದ ಸಿಬ್ಬಂದಿ ಭಾಗವಹಿಸಿದ್ದು, ಕ್ವಾರಿಯ ಕಲ್ಲಿನಡಿ ಸಿಲುಕಿರುವವರನ್ನು ಶವಗಳನ್ನು ಹೊರ ತೆಗೆಯಲು ಹರ ಸಾಹಸ ಪಡುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಶಾಸಕ ಸಿ.ಎಸ್.ನಿರಂಜನಕುಮಾರ್, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ತಹಸೀಲ್ದಾರ್ ರವಿಶಂಕರ್ ಸೇರಿದಂತೆ ಹಲವು ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗಣಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಅಧಿಕಾರಿ, ಆರೋಗ್ಯ ಇಲಾಖೆ, ಅಗ್ನಿ ಶಾಮಕ ದಳದ ಅಧಿಕಾರಿಗಳ ತಂಡ ಸ್ಥಳದಲ್ಲೆ ಬೀಡು ಬಿಟ್ಟಿದ್ದಾರೆ.
ಇದನ್ನೂ ಓದಿ:ಸಚಿವಾಕಾಂಕ್ಷಿಗಳು ಮತ್ತೆ ಸದ್ದು ಮಾಡುವುದು ನಿಶ್ಚಿತ: ಸಂಪುಟಕ್ಕೆ ಸರ್ಜರಿ ಪಕ್ಕಾ?
ಶಾಸಕ ಸಿ.ಎಸ್.ನಿರಂಜನ ಕುಮಾರ್ ಮಾತನಾಡಿ, ನಿಗದಿಗಿಂತ ಅಧಿಕವಾಗಿ ಕಲ್ಲು ತೆಗೆದಿರುವ ಹಿನ್ನೆಲೆ ಘಟನೆ ಸಂಭವಿಸಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ವಹಿಸುವುದಾಗಿ ತಿಳಿಸಿದರು.