ಅಂಟಾನಾನರಿವೊ: ಆಫ್ರಿಕದ ಪುಟ್ಟ ರಾಷ್ಟ್ರ ಮಡಗಾಸ್ಕರ್ ಮಹಾಮಾರಿ ಕೋವಿಡ್ ಅನ್ನು ಮಣಿಸಲು ಗಿಡಮೂಲಿಕಾ ಔಷಧವೊಂದರ ಬಳಕೆಯನ್ನು ಉತ್ತೇಜಿಸುತ್ತಿದೆ. ಈ ರಾಷ್ಟ್ರದ ಹೆಚ್ಚಿನ ಜನರು ತಮ್ಮ ಕಾಯಿಲೆಗಳಿಗೆ
ಗಿಡಮೂಲಿಕಾ ಔಷಧಗಳನ್ನೇ ಬಳಸುತ್ತಾರೆ.
ಕೋವಿಡ್ ವಿರುದ್ಧ ಚಿಕಿತ್ಸೆಗೆ ಬಳಸಬಹುದಾದ ಸಾಂಪ್ರದಾಯಿಕ ಔಷಧದ ಉತ್ಪಾದನೆಗೆ ಸಂಬಂಧಿಸಿ ಕೆಲಸ ಮಾಡಲು ಮಡಗಾಸ್ಕರ್ ಆಫ್ರಿಕ ಒಕ್ಕೂಟ ಹಾಗೂ ರೋಗ ನಿಯಂತ್ರಣ ಕುರಿತ ಆಫ್ರಿಕ ಕೇಂದ್ರದ ಜತೆ ಒಪ್ಪಂದಕ್ಕೆ ಬಂದಿದೆ.
ಪರೀಕ್ಷೆಗೊಳಪಡದ ಔಷಧವೊಂದರ ಸಂಭಾವ್ಯ ಅಪಾಯ ಹಾಗೂ ಅಪಪ್ರಚಾರ ಕುರಿತು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಎಚ್ಚರಿಕೆ ನೀಡಿದ್ದರೂ ಮಡಗಾಸ್ಕರ್ ಅಧ್ಯಕ್ಷ ಆ್ಯಂಡಿ ರಜೊಲಿನ ಅವರು ಎ. 20ರಂದು ಈ ಕುರಿತ ಸಮ್ಮೇಳನವೊಂದರಲ್ಲಿ ಭಾಗವಹಿದ್ದರು.
ಈ ಔಷಧವನ್ನು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪರೀಕ್ಷಿಸಲಾಗಿಲ್ಲ. ಮಲೇರಿಯಕ್ಕೆ ಪರಿಣಾಮಕಾರಿಯೆಂದು ಸಾಬೀತಾಗಿರುವ ಔಷಧವೊಂದರ ಅಂಶಕ್ಕೆ ಪ್ರತಿರೋಧವನ್ನು ಅದು ಹೆಚ್ಚಿಸಬಹುದು. ಇದು ಮಾರಣಾಂತಿಕ ಸೋಂಕಿಗೆ ಸಂಬಂಧಿಸಿದ ಅಪಾಯವನ್ನು ಇನ್ನಷ್ಟು ಅಧಿಕಗೊಳಿಸಬಹುದು ಎಂದು ಪ್ರಾಯೋಗಿಕ ಔಷಧಗಳ ತಜ್ಞ ಡಾ| ಆರ್ಥರ್ ಗ್ರೋಲ್‌ವುನ್ ಹೇಳುತ್ತಾರೆ. ಯಾವುದೇ ಔಷಧವನ್ನು ಮಾನವರ ಮೇಲೆ ಪ್ರಯೋಗಿಸುವುದಕ್ಕೆ ಮುಂಚೆ ಕಠಿನ ಪ್ರಯೋಗಾಲಯ ಪರೀಕ್ಷೆಗಳ ಮೂಲಕ ಅದರ ಪರಿಣಾಮಕಾರತ್ವ ಹಾಗೂ ಸುರಕ್ಷತೆಯನ್ನು ಸಾಬೀತುಪಡಿಸಬೇಕಾಗುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ಹೇಳಿದೆ. ಟಾನಿಕ್ ಅನ್ನು ತಯಾರಿಸಲಾಗುವ ಆರ್ಟೆಮೀಸಿಯ ಅನುವಾ ಮುಂತಾದ ಔಷಧೀಯ ಸಸ್ಯಗಳನ್ನು ಸಂಭಾವ್ಯ ಪರಿಹಾರವೆಂದು ಪರಿಗಣಿಸಲಾಗುತ್ತಿದೆ. ಆದರೆ ಅವುಗಳ ಪರಿಣಾಮಕಾರಿತ್ವ ಮತ್ತು ಅಡ್ಡಪರಿಣಾಮಗಳ ಕುರಿತು ಅಧ್ಯಯನ ನಡೆಯಬೇಕು ಎಂದು ಅದು ಹೇಳಿದೆ.
ಅಲ್ಲದೆ ಕೆಲವೊಂದು ಔಷಧಗಳ ಪರಿಣಾಮಕಾರಿತ್ವ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯುವ ಅಪಪ್ರಚಾರ ಕುರಿತು ಎಚ್ಚರ ವಹಿಸಬೇಕು. ಅನೇಕ ಸಸ್ಯಗಳು ಹಾಗೂ ಉತ್ಪನ್ನಗಳನ್ನು ಕೋವಿಡ್‌ಗೆ ಔಷಧವೆಂದು ಕನಿಷ್ಠ ಅಗತ್ಯಗಳನ್ನು ಪೂರೈಸದೆ ಮತ್ತು ಅವುಗಳ ಗುಣಮಟ್ಟ, ಸುರಕ್ಷತೆ ಹಾಗೂ ಪರಿಣಾಮಕಾರಿತ್ವದ ಕುರಿತು ಪುರಾವೆಯಿಲ್ಲದೆ ಹೇಳಲಾಗುತ್ತಿದೆ. ಇವುಗಳ ಕುರಿತು ಸರಿಯಾದ ಅಧ್ಯಯನ ನಡೆಯದೆ ಕೋವಿಡ್-19 ರೋಗಿಗಳಿಗೆ ಬಳಸಿದಲ್ಲಿ ಆದು ಅವರ ಪಾಲಿಗೆ ಮಾರಣಾಂತಿಕವಾಗಬಲ್ಲುದು.
ಅಲ್ಲದೆ ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವಲ್ಲಿ ಅನುಸರಿಸಬೇಕಾದ ಕೈ ತೊಳೆಯುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ಜನರು ಅಸಡ್ಡೆ ತೋರಿಸುವ ಅಪಾಯವಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಮಡಗಾಸ್ಕರ್ ಅಧ್ಯಕ್ಷರು ಕಳೆದ ತಿಂಗಳು ಬಾಟಲಿಯೊಂದರಿಂದ ಬಣ್ಣದ ದ್ರವನ್ನು ಹೀರುತ್ತ ಕೋವಿಡ್-19 ಚಿಕಿತ್ಸೆಗೆ ದೇಶದ ಸಂಶೋಧನಾ ಸಂಸ್ಥೆ ಕೋವಿಡ್ ಆರ್ಗಾನಿಕ್ಸ್ ಅಥವಾ ಸಿವಿಒ ಎನ್ನುವ ಔಷಧವನ್ನು ಅಭಿವೃದ್ಧಿಪಡಿಸಿರುವುದಾಗಿ ಹೇಳಿದ್ದರು.