Advertisement
“ಮೇಳದಲ್ಲಿ ಕಳೆದ 3 ದಿನಗಳಲ್ಲಿ ಸುಮಾರು 733ಕ್ಕೂ ಅಧಿಕ ಜನ ರಕ್ತದೊತ್ತಡ, ಮಧುಮೇಹ ಸೇರಿದಂತೆ ಆರೋಗ್ಯ ತಪಾಸಣೆಗೊಳಪಟ್ಟಿದ್ದಾರೆ. ಅವರಲ್ಲಿ ಅಂದಾಜು ಶೇ.20ರಷ್ಟು ಜನರಲ್ಲಿ ಹೊಸದಾಗಿ ಮಧುಮೇಹ ಇರುವುದು ಕಂಡುಬಂದಿದೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರೇ ಆಗಿದ್ದಾರೆ. “ನಮಗೆ ಮಧುಮೇಹ ಇರಲಿಲ್ಲ. ಇವತ್ತೇ ಗೊತ್ತಾಗಿದೆ’ ಎಂದು ಅವರೆಲ್ಲಾ ಅಚ್ಚರಿ ವ್ಯಕ್ತಪಡಿಸಿದರು. ಈ ಬೆಳವಣಿಗೆ ಸ್ವತಃ ನಮಗೂ ಅಚ್ಚರಿ ಮೂಡಿಸಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮುಖ್ಯ ವೈದ್ಯಾಧಿಕಾರಿ ಡಾ.ಅಶ್ವತ್ಥಮ್ಮ “ಉದಯವಾಣಿ’ಗೆ ತಿಳಿಸಿದರು.
Related Articles
Advertisement
ಆದರೆ, ಕೃಷಿಯಲ್ಲಿ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ವೆಚ್ಚ ಮತ್ತಿತರ ಕಾರಣಗಳಿಂದ ಯಂತ್ರಗಳ ಅವಲಂಬನೆ ಅನಿವಾರ್ಯ ಆಗುತ್ತಿದೆ. ಅಷ್ಟಕ್ಕೂ ಯಂತ್ರೋಪಕರಣಗಳು ರೈತರ ಕೈಹಿಡಿಯುತ್ತಿದ್ದು, ಲಾಭದತ್ತ ಕೊಂಡೊಯ್ಯುತ್ತಿವೆ ಎಂದು ಕೃಷಿ ತಜ್ಞರು ಹೇಳುತ್ತಾರೆ. ಈ ಮಧ್ಯೆ ಆರೋಗ್ಯ ತಪಾಸಣೆ ಕೇಂದ್ರದಲ್ಲಿ ಭೇಟಿ ನೀಡಿದವರ ಪೈಕಿ ಸುಮಾರು 40ಕ್ಕೂ ಹೆಚ್ಚು ಜನ ಖನ್ನತೆಯಿಂದ ಬಳಲುತ್ತಿರುವವರೂ ಇದ್ದಾರೆ.
ಅವರಲ್ಲಿ ಕೆಲವರು ರೈತರೂ ಆಗಿದ್ದಾರೆ. ಮದ್ಯಪಾನ ಮತ್ತು ಧೂಮಪಾನ ವ್ಯಸನದಿಂದ ಮುಕ್ತಿ ಪಡೆಯುವುದು ಹೇಗೆ ಎಂದು ಅವರು ಸಮಾಲೋಚನಾ ಕೇಂದ್ರದಲ್ಲಿ ಸಲಹೆ ಪಡೆದಿದ್ದಾರೆ. ಈ ಪೈಕಿ ಬೆರಳೆಣಿಕೆಯಷ್ಟು ರೈತರು ಸಾಲದಿಂದ ಬೇಸತ್ತಿರುವುದಾಗಿಯೂ ಹೇಳಿದ್ದಾರೆ ಎಂದು ಸಮಾಲೋಚನಾ ಘಟಕದಲ್ಲಿದ್ದ ಪೀಪಲ್ ಟ್ರೀ ಮಾರ್ಗದ ಸಮಾಲೋಚಕಿಯೊಬ್ಬರು ತಿಳಿಸಿದರು.
ಕೃಷಿಯತ್ತ ಟೆಕ್ಕಿಗಳ ಆಸಕ್ತಿ: ಸಾಫ್ಟ್ವೇರ್ ಕಂಪೆನಿ ಉದ್ಯೋಗಿಗಳು ಕೃಷಿ ಬಗ್ಗೆ ಆಸಕ್ತಿ ತೋರಿಸುತ್ತಿರುವುದೂ ಮೇಳದಲ್ಲಿ ಕಂಡುಬಂದಿದೆ. ಮೇಳದಲ್ಲಿ ಸಲಹಾ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಕಳೆದ ಮೂರು ದಿನಗಳಿಂದ ಸರಾಸರಿ 600-700 ಜನ ಭೇಟಿ ನೀಡಿ, ಸಲಹೆಗಳನ್ನು ಪಡೆದಿದ್ದಾರೆ. ಇದರಲ್ಲಿ ಶೇ. 5ರಷ್ಟು ಜನ ಟೆಕ್ಕಿಗಳೂ ಆಗಿದ್ದಾರೆ ಎಂದು ಸಲಹಾ ಕೇಂದ್ರದ ಮುಖ್ಯಸ್ಥ ಹಾಗೂ ಬೆಂಗಳೂರು ಕೃಷಿ ವಿವಿಯ ಅನುವಂಶೀಯತೆ ಮತ್ತು ಸಸ್ಯತಳಿ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ.ಡಿ.ಇ. ಗಂಗಪ್ಪ ತಿಳಿಸಿದರು.
ಟೆಕ್ಕಿಗಳು ಕುರಿ, ಕೋಳಿ ಸಾಕಾಣಿಕೆ ಲಾಭದಾಯಕವೇ? ತಮ್ಮಲ್ಲಿ ಜಮೀನು ಇದ್ದು, ಅದರಲ್ಲಿ ಏನು ಬೆಳೆದರೆ ಲಾಭದಾಯಕ ಆಗಬಹುದು? ಎಂಬ ಇತ್ಯಾದಿ ಮಾಹಿತಿ ಪಡೆದಿದ್ದಾರೆ. ಉಳಿದವರು ಬಹುತೇಕ ರೋಗಗಳ ಹತೋಟಿ, ಹೊಸ ತಳಿಗಳು, ತೋಟಗಾರಿಕೆಯಲ್ಲಿ ಹಣ್ಣಿನ ತಳಿಗಳ ಬಗ್ಗೆ ಹೆಚ್ಚಾಗಿ ಕೇಳುತ್ತಿರುವುದು ಕಂಡುಬಂದಿದೆ ಎಂದರು.
* ವಿಜಯಕುಮಾರ್ ಚಂದರಗಿ