ಬೆಂಗಳೂರು: ತುಮಕೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಮಷೀನ್ ಟೂಲ್ಸ್ ಪಾರ್ಕ್‌ಗೆ (ಯಂತ್ರೋಪಕರಣಗಳ ತಯಾರಿಕಾ ಕೈಗಾರಿಕಾ ಪಾರ್ಕ್) ಫೆ.10ರಂದು ಶಂಕುಸ್ಥಾಪನೆ ನೆರವೇರಿಸುವುದಾಗಿ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಭಾರತೀಯ ಮಷೀನ್ ಟೂಲ್ಸ್ ಉತ್ಪಾದಕರ ಒಕ್ಕೂಟವು ನಗರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಇಮ್ಟೆಕ್ಸ್ ಟೂಲ್‌ಟೆಕ್- 2018′ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಮೆಷೀನ್ ಟೂಲ್ಸ್ ತಯಾರಿಕೆಯಲ್ಲಿ ಕರ್ನಾಟಕ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ದೇಶದ ಯಂತ್ರೋಪಕರಣಗಳ ಒಟ್ಟು ಉತ್ಪಾದನೆಯಲ್ಲಿ ಶೇ.60ರಷ್ಟು ಬೆಂಗಳೂರಿನಲ್ಲೇ ತಯಾರಾಗುತ್ತಿದೆ. ವಿಶೇಷ ಉದ್ದೇಶದ ಯಂತ್ರೋಪಕರಣ, ಭಾರಿ ಎಲೆಕ್ಟ್ರಿಕಲ್ ಯಂತ್ರೋಪಕರಣ ತಯಾರಿಕೆಯಲ್ಲೂ ರಾಜ್ಯ ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ ಎಂದು ಹೇಳಿದರು.
ವಿಶೇಷ ಉದ್ದೇಶದ ಯಂತ್ರೋಪಕರಣಗಳ ತಯಾರಿಕೆಯಲ್ಲೂ ಕರ್ನಾಟಕ ಜಗತ್ತಿನ ಐದು ಮುಂಚೂಣಿ ತಾಣಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಯಂತ್ರೋಪಕರಣ ತಯಾರಿಕೆಯಲ್ಲಿ ಪರಿಣತಿ ಹೊಂದಿರುವ 120 ಕಂಪನಿಗಳಿವೆ. ಈ ವಲಯದಿಂದ 500 ಕೋಟಿ ರೂ.ನಿಂದ 1,000 ಕೋಟಿ ರೂ.ಗಿಂತ ಹೆಚ್ಚು ಬಂಡವಾಳ ಹೊಂದಿರುವ ಅಲ್ಟ್ರಾ ಮೆಗಾ ಮತ್ತು ಸೂಪರ್ ಮೆಗಾ ಕಂಪನಿಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ತಿಳಿಸಿದರು.
ಸುಧಾರಿತ ತಂತ್ರಜ್ಞಾನ ಬಳಕೆ: ಅತ್ಯಾಧುನಿಕ ತಂತ್ರಜ್ಞಾನವೆನಿಸಿದ ಬಿಗ್ ಡೇಟಾ, ಹೈ-ಕಂಪ್ಯೂಟಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಅನಾಲಿಟಿಕ್ಸ್‌ಗಳನ್ನು ಬಳಸಿಕೊಳ್ಳುವ ಮೂಲಕ ಡಿಜಿಟಲೀಕರಣಕ್ಕೆ ಒತ್ತು ನೀಡಲಾಗಿದೆ. ಉದ್ಯಮ ಉತ್ತೇಜನದಲ್ಲಿ ರಾಜ್ಯ ಸರ್ಕಾರದ ನಿರ್ಧಾರಗಳನ್ನು ಕೇಂದ್ರ ಸರ್ಕಾರವೂ ಅನುಸರಿಸುತ್ತಿರುವುದು ವಿಶೇಷ ಎಂದು ಸಚಿವ ದೇಶಪಾಂಡೆ ಹೇಳಿದರು.
ಪೂರೈಕೆ ಸರಪಳಿಯನ್ನು ಇನ್ನಷ್ಟು ಬಲಪಡಿಸಬೇಕಾದ ಅಗತ್ಯವಿದೆ. ಇನ್ನೊಂದೆಡೆ ಐಟಿ-ಬಿಟಿ ವಲಯದ ಸೇವೆ ಪೂರೈಕೆ ವ್ಯವಹಾರದಲ್ಲೇ ಮುಂದುವರಿದರೆ ಪ್ರಯೋಜನವಾಗದು. ಯಂತ್ರೋಪಕರಣ ತಯಾರಿಕೆ ಜತೆಗೆ ಇತರೆ ವಲಯಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗೂ ಒತ್ತು ನೀಡಬೇಕು. ಹೂಡಿಕೆದಾರರು ಸಾಮಾಜಿಕ ಹೊಣೆಗಾರಿಕೆ ಅರಿತು ಯುವಜನತೆಗೆ ಉದ್ಯೋಗ ಕಲ್ಪಿಸುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಸದಾ ಸ್ಮರಣೀಯರು: ದಿವಂಗತ ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ, ಡಾ.ಮನಮೋಹನ್ ಸಿಂಗ್ ಹಣಕಾಸು ಸಚಿವರಾಗಿದ್ದಾಗ 1990ರಲ್ಲಿ ಜಾರಿಯಾದ ಉದಾರ ಆರ್ಥಿಕ ನೀತಿ ಇತಿಹಾಸ ಸೃಷ್ಟಿಸಿತು. ಭಾರತದ ಇಂದಿನ ಅಗಾಧ ಬೆಳವಣಿಗೆಗೆ ಈ ಇಬ್ಬರು ಮೂಲಪುರುಷರೆನಿಸಿದ್ದು, ಅವರನ್ನು ಸದಾ ಸ್ಮರಿಸಬೇಕು ಎಂದು ಸಚಿವರು ಹೇಳಿದರು.
ಇಸ್ರೊ ನಿವೃತ್ತ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್, ಐಎಂಟಿಎಂಎ ಪದಾಧಿಕಾರಿಗಳಾದ ಜಮ್‌ಷೆಡ್ ಗೋದ್ರೇಜ್, ಪಿ.ರಾಮದಾಸ್, ಎಪಿಎಂಐ ಅಧ್ಯಕ್ಷ ನಿರ್ಮಲ್ ಮಿಂದಾ, ಉಪಾಧ್ಯಕ್ಷ ಇಂದ್ರದೇವ್ ಬಾಬು ಉಪಸ್ಥಿತರಿದ್ದರು.