ಬಾಗಲಕೋಟೆ: ಲಾಕ್‌ಡೌನ್ ಮಧ್ಯೆಯೂ ಮಾವಾ, ಚೀಟ್ ಹಾಗೂ ಸಿಗರೇಟ್ ಮಾರಾಟ ಎಲ್ಲೆಡೆ ಎಗ್ಗಿಲ್ಲದೇ ಸಾಗಿದೆ. ನಗರದ ಒಂದೇ ಏರಿಯಾದ 13 ಜನರು ಸೋಂಕಿಗೆ ತುತ್ತಾಗಿ ಜಿಲ್ಲಾಸ್ಪತ್ರೆಗೆ ಸೇರಿದ್ದಾರೆ. ಈ ಏರಿಯಾದ ಅನತಿ ದೂರದಲ್ಲೇ ಮಾವಾ ಮಾರಾಟ ಮಾಡುವ ದೊಡ್ಡ ಪಡಸಾಲೆಯೇ ಇದೆ.
ಮಾವಾ ತಯಾರಿಸುವ ವಿಧಾನ ಕಣ್ಣಾರೆ ಕಂಡವರಂತೂ ತಿನ್ನಲೂ ಹೇಸಿಗೆ ಪಡುವಂಥ ಸ್ಥಿತಿ ಇದೆ. ಆದರೂ ಕದ್ದುಮುಚ್ಚಿ ಮಾರಾಟ ಮಾಡುವ ದೊಡ್ಡ ಜಾಲವೇ ಇಲ್ಲಿದೆ. ದಿನಸಿ ಸಾಮಗ್ರಿ, ಹಾಲು, ತರಕಾರಿ ತಕ್ಷಣಕ್ಕೆ ಸಿಗುತ್ತದೆಯೋ ಇಲ್ಲೋ ಗೊತ್ತಿಲ್ಲ. ಆದರೆ ಮಾವಾ, ಸ್ಟಾರ್, ಆರ್ ಎಂಡಿ ಮಾತ್ರ ದೊರೆಯುತ್ತಿವೆ. ಸಂಸ್ಕರಿಸಿದ ತಂಬಾಕಿನಿಂದ ಮಾಡುವ ಸ್ಟಾರ್, ಆರ್‌ಎಂಡಿ ಮುಂತಾದ ವಸ್ತುಗಳ ಮಾರಾಟಕ್ಕೆ ಅಧಿಕೃತ ಪರವಾನಗಿ ಇದೆ. ಅವುಗಳ ಉತ್ಪಾದನೆಗೆ ಕಂಪನಿಗಳೂ ಇವೆ. ಸದ್ಯ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಘೋಷಿಸಿದ್ದರಿಂದ ಅಧಿಕೃತ ಪರವಾನಗಿ ಇದ್ದರೂ ಅವುಗಳ ಮಾರಾಟ ಮಾಡುವಂತಿಲ್ಲ. ಹೀಗಾಗಿ ಹಿಂಬದಿ ಬಾಗಿಲಿನಿಂದ ಮಾರಾಟ ನಡೆಯುತ್ತಿದೆ. ಆದರೆ, ಮುಖ್ಯವಾಗಿ ಮಾವಾ ಹಾವಳಿ ಮಾತ್ರ ನಿಂತಿಲ್ಲ.
ಎಲ್ಲೆಂದರಲ್ಲಿ ಉಗಿಯುತ್ತಾರೆ: ಹಳೆಯ ನಗರದ ಪ್ರಮುಖ ವೃತ್ತದ ಪಕ್ಕದಲ್ಲೇ ಮಾವಾ ಮಾರಾಟದ ಪಡಸಾಲೆ ಯಾವಾಗಲೂ ತೆರೆದಿರುತ್ತದೆ. ಮಾವಾ ಕೊಂಡುಕೊಳ್ಳಲು ಪರಿಚಯಸ್ಥರ ವಸೂಲಿ ಹಚ್ಚುವ, ಇಲ್ಲವೇ ಮಾರಾಟಗಾರರ ಪರಿಚಯಸ್ಥರಿಗೆ ಹಣ ಕೊಟ್ಟು ನನಗೂ ನಾಲ್ಕು ಮಾವಾ ತೆಗೆದುಕೊಂಡು ಬನ್ನಿ ಎಂದು ಹೇಳುವ ಮಾತುಗಳು ನಿತ್ಯ ಕೇಳಿ ಬರುತ್ತವೆ. ಕೋವಿಡ್ 19 ದಂತಹ ಗಂಭೀರ ಪರಿಸ್ಥಿತಿಯಲ್ಲಾದರೂ ಚಟಗಳಿಗೆ ಕಡಿವಾಣ ಹಾಕಿಕೊಳ್ಳಲೇಬೇಕಿದೆ. ತಿಂದು ಎಲ್ಲೆಂದರಲ್ಲಿ ಉಗುಳುವುದು ಒಂದೆಡೆ ನಡೆದರೆ, ಅದನ್ನು ತರಲೆಂದೇ ಇಲ್ಲಸಲ್ಲದ ಸಬೂಬು ಹೇಳಿ ಓಡಾಟದ ಪ್ರಸಂಗ ನಡೆಯುತ್ತಿವೆ. ಮುಖ್ಯವಾಗಿ ಮಾವಾ ತಿಕ್ಕುವ, ತಯಾರಿಸುವ ಸ್ಥಳದಿಂದ ತಿನ್ನುವವರ ಕೈ ಸೇರುವ ಹೊತ್ತಿಗೆ, ನಾಲ್ಕರಿಂದ ಐದು ಜನರ ಕೈ ಬದಲಾಗುತ್ತದೆ. ಕೊರೊನಾ ವೈರಸ್ ಹರಡುತ್ತಿರುವ ಇಂತಹ ಸಂದರ್ಭದಲ್ಲಿ ಅದನ್ನು ತಿನ್ನುವುದು ಬಿಟ್ಟರೆ ದೊಡ್ಡ ಸಂಕಷ್ಟವೇನೂ ಆಗಲ್ಲ. ದುಪ್ಪಟ್ಟು ಬೆಲೆಗೆ ಮಾರಾಟ ಮಾಡಿ, ಜನರನ್ನು ಅನಾರೋಗ್ಯಕ್ಕೆ ತಳ್ಳುವ ಜನರ ಬಗ್ಗೆ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕಿದೆ.
ಹಳೆಯ ನಗರದಲ್ಲಿ ಮಾವಾ ಮಾರಾಟ ಮಾಡುತ್ತಿದ್ದನ್ನು ಬಹುತೇಕ ಸಂಪೂರ್ಣ ಬಂದ್ ಮಾಡಿಸಿದ್ದೇವೆ. ಕೆಲವರು ಕದ್ದುಮುಚ್ಚಿ ಮಾರುತ್ತಿದ್ದರೂ ಕೂಡಲೇ ಕಡಿವಾಣ ಹಾಕುತ್ತೇವೆ. ಜನರೂ ಇಂತಹ ವಿಷಯದಲ್ಲಿ ಸಹಕಾರ ನೀಡಬೇಕು. ಕದ್ದುಮುಚ್ಚಿ ಮಾರುತ್ತಿದ್ದರೆ ಮಾಹಿತಿ ಕೊಡಲಿ. ಅಲ್ಲದೇ ಮುಖ್ಯವಾಗಿ ಜನರು, ಇಂತಹ ಸಂದರ್ಭದಲ್ಲಿ ತಿಂದು ಎಲ್ಲೆಂದರಲ್ಲಿ ಉಗಿಯುವುದು ಬಿಡಬೇಕು. –
ಈರಣ್ಣ ಪಟ್ಟಣಶೆಟ್ಟಿ, ಸಿಪಿಐ, ಬಾಗಲಕೋಟೆ
ಕೋವಿಡ್ 19 ಕ್ಕಿಂತ ಮಾವಾ ತಿಂದು ಉಗುಳುವವರ ಬಗ್ಗೆಯೇ ದೊಡ್ಡ ಭೀತಿ ಇದೆ. ನಿತ್ಯ ಸಾವಿರಾರು ಜನರು ಮಾವಾ ತಿಂದು ಮನೆ ಎದುರಿನ ಕಟ್ಟೆ ಮೇಲೆ ಉಗಿಯುತ್ತಾರೆ. ತಿನ್ನುವವರು ತಮ್ಮ ಮನೆಯ ಎದುರು ಉಗಳಲ್ಲ. ಬೇರೊಬ್ಬರ ಮನೆ, ಚರಂಡಿ, ಅಂಗಳ ಹೀಗೆ ಎಲ್ಲೆಂದರಲ್ಲಿ ಉಗುಳುತ್ತಾರೆ. ಮಾವಾ ಎಲ್ಲಿ ತಯಾರಾಗುತ್ತದೆ, ಯಾರು ಮಾರುತ್ತಾರೆ ಎಲ್ಲವೂ ಪೊಲೀಸರಿಗೆ ಗೊತ್ತಿದೆ. ಇಂಥ ಸಂದರ್ಭದಲ್ಲಾದರೂ ಸಂಪೂರ್ಣ ಬಂದ್ ಮಾಡಿಸಲಿ. –
ಹೆಸರು ಬಹಿರಂಗಪಡಿಸದ ಕಿಲ್ಲಾ ಪ್ರದೇಶದ ಹಿರಿಯ ನಾಗರಿಕ
-ಶ್ರೀಶೈಲ ಕೆ. ಬಿರಾದಾರ