Advertisement

ಬಳಸದೇ ತುಕ್ಕು ಹಿಡಿದ ಸಕ್ಕಿಂಗ್‌ ಯಂತ್ರ

07:56 PM Nov 27, 2019 | Naveen |

●ಎಂ.ಮೂರ್ತಿ
ಮಾಸ್ತಿ:
ಶೌಚಾಲಯ ತ್ಯಾಜ್ಯ ವಿಲೇವಾರಿಗೆ ಲಕ್ಷಾಂತರ ರೂ. ನೀಡಿ ಜಿಪಂನಿಂದ ಖರೀದಿಸಿ ಇಲ್ಲಿನ ಗ್ರಾಪಂಗೆ ನೀಡಿದ್ದ ಸಕ್ಕಿಂಗ್‌ ಯಂತ್ರ ಕೆಟ್ಟು ನಿಂತು, ವರ್ಷಗಳೇ ಕಳೆದಿದ್ದು, ಪೊಲೀಸ್‌ ಠಾಣೆ ಆವರಣದಲ್ಲಿ ಮಳೆ, ಗಾಳಿಗೆ ತುಕ್ಕು ಹಿಡಿಯುತ್ತಿದೆ.

Advertisement

ಬಯಲು ಬಹಿರ್ದೆಸೆ ಮುಕ್ತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಗ್ರಾಪಂಗೆ ಶೌಚಾಲಯ ತುಂಬಿದಾಗ ಅದರಲ್ಲಿ ತ್ಯಾಜ್ಯ ಖಾಲಿ ಮಾಡಲು ಸಕ್ಕಿಂಗ್‌ ಯಂತ್ರ ನೀಡಲಾಗಿತ್ತು. ಆದರೆ, ಅದು ಕೆಟ್ಟು ನಿಂತು, 6 ವರ್ಷಗಳೇ ಕಳೆದಿದ್ದು, ಶೌಚಾಲಯಗಳು ಗುಂಡಿಗಳು ತುಂಬಿ, ಜನ ಮತ್ತೆ ಬಯಲು ಆಶ್ರಯಿಸಲು ಮುಂದಾಗಿದ್ದಾರೆ. ಗ್ರಾಮದಲ್ಲಿ ಪ್ರತಿಯೊಬ್ಬರೂ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಸಕ್ಕಿಂಗ್‌ಯಂತ್ರ ಇಲ್ಲದ ಕಾರಣದಿಂದ ಖಾಸಗಿಯವರಿಗೆ ಸಾವಿರಾರು ರೂ. ಕೊಟ್ಟು ಶೌಚಾಲಯ ಸ್ವಚ್ಛ ಮಾಡಿಸುವಂತಹ ಪರಿಸ್ಥಿತಿ ಇದೆ. ಮನುಷ್ಯರು ಶೌಚಾಲಯದ ಗುಂಡಿಗೆ ಇಳಿಯುವುದು ಹಾಗೂ ವಿಲೇವಾರಿ ಮಾಡುವ ಪದ್ಧತಿಯನ್ನು ನಿಷೇಧಿಸಿದ ನಂತರ ಸಾರ್ವಜನಿಕ, ಸರ್ಕಾರಿ ಕಚೇರಿಗಳು, ಸಮುದಾಯ ಶೌಚಾಲಯಗಳಲ್ಲಿನ ತ್ಯಾಜ್ಯವನ್ನು ಯಂತ್ರಗಳ ಮೂಲಕ ವಿಲೇವಾರಿ ಮಾಡುವುದನ್ನು ರಾಜ್ಯ ಸರ್ಕಾರ ಕಡ್ಡಾಯ ಮಾಡಿದೆ. ಇದರಿಂದ ಸಕ್ಕಿಂಗ್‌ ಯಂತ್ರಕ್ಕೆ ಬೇಡಿಕೆ ಬಂದಿದೆ.

ವಿನಾಶದ ಅಂಚಿಕೆ ತಲುಪಿದೆ: ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಕಳೆದ 6 ವರ್ಷಗಳ ಹಿಂದೆ ಜಿಪಂನಿಂದ ಮಾಲೂರು ತಾಲೂಕಿಗೆ 2 ಸಕ್ಕಿಂಗ್‌ಯಂತ್ರಗಳನ್ನು ನೀಡಲಾಗಿತ್ತು. ಅದರಲ್ಲಿ ಒಂದು ಮಾಸ್ತಿ ಗ್ರಾ.ಪಂ. ವಶಕ್ಕೆ ನೀಡಲಾಗಿತ್ತು. ಆದರೆ, ಸಕ್ಕಿಂಗ್‌ ಯಂತ್ರವನ್ನು ಗ್ರಾಮ ಪಂಚಾಯ್ತಿಯು ಸಾರ್ವಜನಿಕರ ಅನುಕೂಲಕ್ಕೆ ಬಳಸದ ಕಾರಣ, ಮಾಸ್ತಿ ಪೊಲೀಸ್‌ ಠಾಣೆ ಆವರಣದಲ್ಲಿ 6 ವರ್ಷಗಳಿಂದ ಬಿಸಿಲು, ಮಳೆಗೆ ತುಕ್ಕು ಹಿಡಿದು ಕೆಟ್ಟು ವಿನಾಶದ ಅಂಚಿಗೆ ಸಿಲುಕಿದೆ.

ಸರ್ಕಾರ ಸಕ್ಕಿಂಗ್‌ ಯಂತ್ರವನ್ನು ಸಾರ್ವಜನಿಕ ಉಪಯೋಗಕ್ಕೆ ನೀಡಿದೆಯೋ ಅಥವಾ ಮಾಸ್ತಿ ಪೊಲೀಸ್‌ ಠಾಣೆ ಆವರಣದಲ್ಲಿ ಸಾರ್ವಜನಿಕರ ಪ್ರದರ್ಶನಕ್ಕೆ ಇಟ್ಟಿದೆಯೋ ಎಂಬ ಅನುಮಾನ ಮಾಸ್ತಿ ಗ್ರಾಮಸ್ಥರನ್ನು ಕಾಡುತ್ತಿದೆ. ಅಲ್ಲದೆ, ವಿವಿಧ ಪ್ರಕರಣಗಳಲ್ಲಿ ಮಾಸ್ತಿ ಪೊಲೀಸ್‌ ಠಾಣೆ ಆವರಣದಲ್ಲಿ ನಿಲ್ಲಿಸಲಾಗಿರುವ ವಾಹನಗಳ ನಡುವೆಯೇ ಈ ಸಕ್ಕಿಂಗ್‌ ಯಂತ್ರವನ್ನೂ ನಿಲ್ಲಿಸಲಾಗಿದೆ. ಹೀಗಾಗಿ ಯಾವುದೋ ಪ್ರಕರಣದಲ್ಲಿ ಪೊಲೀಸರು ಸಕ್ಕಿಂಗ್‌ ಯಂತ್ರ ವಶಕ್ಕೆ ಪಡೆದು ಠಾಣೆ ಆವರಣದಲ್ಲಿ ನಿಲ್ಲಿಸಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಸದ್ಯ ಟೈರ್‌ಗಳು, ಕಬ್ಬಿಣದ ಪೈಪ್‌ಗ್ಳು, ಯಂತ್ರದ ಬಣ್ಣ ಮಾಸುತ್ತಿದ್ದು, ಗುಜುರಿಗೆ ಸೇರುವ ಮುನ್ನವೇ ಗ್ರಾಪಂನವರು ದುರಸ್ತಿ ಮಾಡಿಸಬೇಕು. ಕೂಡಲೇ ಗ್ರಾಪಂ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ, ಸರ್ಕಾರದಿಂದ 5 ಲಕ್ಷ ರೂ.ಗೂ ಹೆಚ್ಚು ವೆಚ್ಚ ಮಾಡಿ ಖರೀದಿಸಿರುವ ಸಕ್ಕಿಂಗ್‌ ಯಂತ್ರವನ್ನು ಸರಿಪಡಿಸಿ ಶೌಚಾಲಯಗಳ ತ್ಯಾಜ್ಯ ಸ್ವತ್ಛ ಮಾಡಲು ಉಪಯೋಗಿಸಲಿ ಎಂದು ಗ್ರಾಮದ ಮುಖಂಡ ನರಸಿಂಹ ಮೂರ್ತಿ ಮನವಿ ಮಾಡಿದ್ದಾರೆ.

Advertisement

ಸಕ್ಕಿಂಗ್‌ ಯಂತ್ರ ಪೊಲೀಸ್‌ ಠಾಣೆ ಆವರಣದಲ್ಲಿ ನಿಲ್ಲಿಸಿರುವುದು ಗಮನ ಬಂದಿದೆ. ತುಕ್ಕು ಹಿಡಿಯುತ್ತಿರುವ ಯಂತ್ರವನ್ನು ದುರಸ್ತಿ ಪಡಿಸಲು ಮುಂದಿನ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.
●ಸುಗುಣಮ್ಮ ಶ್ರೀನಿವಾಸ್‌,
ಅಧ್ಯಕ್ಷರು, ಮಾಸ್ತಿ ಗ್ರಾಪಂ.

ಸುರಕ್ಷತೆ ದೃಷ್ಟಿಯಿಂದ ಗ್ರಾಪಂ ಆವರಣದಲ್ಲಿ ಸಕ್ಕಿಂಗ್‌ಯಂತ್ರ ನಿಲ್ಲಿಸಿಲ್ಲ. ನಾನು ಅಧಿಕಾರಿವಹಿಸಿಕೊಳ್ಳುವುದಕ್ಕೂ ಮುನ್ನವೇ ಪೊಲೀಸ್‌ ಠಾಣೆ ಆವರಣದಲ್ಲಿ ಯಂತ್ರ ನಿಲ್ಲಿಸಲಾಗಿತ್ತು. ಅದು ಕೆಟ್ಟು ನಿಂತಿರುವುದು ನನ್ನ ಗಮನಕ್ಕೆ ಬಂದಿದೆ. ಸರಿಪಡಿಸಲು ಹೆಚ್ಚಿನ ಕಾಳಜಿ ವಹಿಸಲಾಗಿದೆ. ಸದ್ಯದಲ್ಲೇ ಸಾರ್ವಜನಿಕರಿಗೆ ಸೇವೆಗೆ ಒದಗಿಸಲಾಗುವುದು.
ಕಾಶೀನಾಥ್‌, ಪಿಡಿಒ, ಮಾಸ್ತಿ ಗ್ರಾಪಂ

Advertisement

Udayavani is now on Telegram. Click here to join our channel and stay updated with the latest news.

Next