ಗದಗ: ಕಳೆದ 8 ತಿಂಗಳಿನಿಂದ ಮಾಸಾಶನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಬೇಸತ್ತ ಮಾಜಿ ಕುಸ್ತಿ ಪಟುಗಳು ಮಣ್ಣು ತಿನ್ನುವ ಮೂಲಕ ಜಿಲ್ಲಾಡಳಿತ ಭವನದ ಎದುರು ವಿನೂತನ ಪ್ರತಿಭಟನೆ ನಡೆಸಿದರು.
ಕಳೆದ 8 ತಿಂಗಳಿನಿಂದ ಮಾಸಾಶನ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾ ಕುಸ್ತಿ ಪೈಲ್ವಾನರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಮಾಜಿ ಕುಸ್ತಿ ಪಟುಗಳು ಹಾಗೂ ಕಬಡ್ಡಿ ಪಟುಗಳು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 140ಕ್ಕೂ ಹೆಚ್ಚು ಮಾಜಿ ಕುಸ್ತಿಪಟುಗಳಿದ್ದು, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಪ್ರತಿ ತಿಂಗಳು ದೊರೆಯುತ್ತಿದ್ದ ಮಾಸಾಶನದಲ್ಲಿ ಜೀವನ ನಿರ್ವಹಣೆ ಮಾಡುತ್ತಿದ್ದರು. ಆದರೆ, ಕಳೆದ 8 ತಿಂಗಳಿನಿಂದ ಮಾಸಾಶನ ಬಿಡುಗಡೆಯಾಗದ ಕಾರಣ ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಜಿಲ್ಲೆಯಲ್ಲಿ ಹಲವು ವಯೋವೃದ್ಧ ಮಾಜಿ ಕುಸ್ತಿಪಟುಗಳಿದ್ದಾರೆ. ಕೆಲವರ ಆರೋಗ್ಯ ಹದಗೆಟ್ಟಿದ್ದು, ಔಷಧೋಪಚಾರ ಪಡೆಯಲು ಪರದಾಡುವಂತಾಗಿದೆ. ಜಿಲ್ಲಾಡಳಿತ, ಜಿಪಂ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಕೂಡಲೇ ಮಾಸಾಶನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನಂತರ ಮಾಜಿ ಕುಸ್ತಿ ಹಾಗೂ ಕಬಡ್ಡಿ ಪಟುಗಳು ಜಿಪಂ ಸಿಇಒ ಡಾ|ಸುಶೀಲಾ ಬಿ. ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಜಿಪಂ ಸಿಇಒ, ಮುಂದಿನ ನಾಲ್ಕು ದಿನದೊಳಗಾಗಿ ಮಾಸಾಶನ ಬಿಡುಗಡೆಯಾಗುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಜಿಲ್ಲಾ ಕುಸ್ತಿ ಪೈಲ್ವಾನ್ ಸಂಘದ ಅಧ್ಯಕ್ಷ ದೇವಪ್ಪ ಗುಡೇದ, ಪದಾ ಧಿಕಾರಿಗಳಾದ ಸುಭಾಷ್ ಕಟಗೇರಿ, ಮೋದಿನಸಾಬ್ ಅಣ್ಣಿಗೇರಿ, ದೇವಪ್ಪ ಯಲಿಗಾರ, ಅಮರಪ್ಪ ಗುಡಗುಂಟಿ ಸೇರಿ ಮಾಜಿ ಕುಸ್ತಿ ಹಾಗೂ ಕಬಡ್ಡಿ ಪಟುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಕಳೆದ ಎಂಟು ತಿಂಗಳಿನಿಂದ ಪ್ರತಿ ತಿಂಗಳು ಜಿಲ್ಲಾಡಳಿತ ಭವನಕ್ಕೆ ಭೇಟಿ ನೀಡಿ ಮಾಸಾಶನ ಬಿಡುಗಡೆಗೊಳಿಸುವಂತೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ, ಆರ್ಥಿಕವಾಗಿ ಹಿಂದುಳಿದ ನಮಗೆ ತಿನ್ನಲು ಮಣ್ಣೇ ಗತಿ ಎಂದು ಮಾಜಿ ಕುಸ್ತಿ ಪಟುಗಳು ಸೇರಿ ಮಣ್ಣು ತಿಂದು ಪ್ರತಿಭಟನೆ ನಡೆಸಿದೆವು. –
ದೇವಪ್ಪ ಗುಡೇದ, ಅಧ್ಯಕ್ಷ, ಗದಗ ಜಿಲ್ಲಾ ಕುಸ್ತಿ ಪೈಲ್ವಾನರ ಸಂಘ