Advertisement

ಗಮನಸೆಳೆದ “ಮಾನಿಷಾದ’ಬಯಲಾಟ

12:15 PM Apr 06, 2019 | keerthan |

ಬದಿಯಡ್ಕ : ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಶ್ರೀ ವಿಷ್ಣುಮೂರ್ತಿ ನಗರ ಬೇಳ ಒತ್ತೆಕೋಲ ಮಹೋತ್ಸವದ ಅಂಗವಾಗಿ ಯಕ್ಷಮಿತ್ರರು ಬೇಳ ಪ್ರಾಯೋಜಕತ್ವದಲ್ಲಿ ಸನಾತನ ಯಕ್ಷಾಲಯ ಮಂಗಳೂರು, ಯಕ್ಷಗುರು ರಾಕೇಶ್‌ ರೈ ಅಡ್ಕ ಇವರ ಶಿಷ್ಯ ವೃಂದದವರಿಂದ ಮಾನಿಷಾದ ಯಕ್ಷಗಾನ ಬಯಲಾಟ ನಡೆಯಿತು.

Advertisement

ಯಕ್ಷದ್ರುವ ಪಟ್ಲ ಸತೀಶ್‌ ಶೆಟ್ಟಿ ಹಾಗೂ ಗಿರೀಶ್‌ ರೈ ಕಕ್ಕೆಪದವು ಅವರ ಗಾನ ಮಾಧುರ್ಯ ಪ್ರೇಕ್ಷಕರ ಸಂಭ್ರಮದ ಕೈ ಚಪ್ಪಾಳೆಯ ಸುರಿಮಳೆ ಸುರಿಸಿತು. ಪುಟ್ಟ ಬಾಲ ಪ್ರತಿಭೆಗಳಿಂದ ಹಿಡಿದು ಅನುಭವೀ ಕಲಾವಿದರ ಮನಮೋಹಕ ಅಭಿವ್ಯಕ್ತಿ ಹಾಗೂ ನಾಟ್ಯದ ವೈವಿಧ್ಯತೆ ಗಮನ ಸೆಳೆದರೆ ಪ್ರತಿಭಾ ಸಂಪನ್ನೆ ಅನನ್ಯ ರೈಯ ಸೆ„ರಿಣಿ ತನ್ನ ನಾಟ್ಯ, ಮಾತಿನ ಮೋಡಿ, ಪ್ರೇಮ- ಪ್ರಣಯದ ಭಾವಾಭಿವ್ಯಕ್ತಿಯಿಂದ ಜನಮಾನಸದಲ್ಲಿ ಅಚ್ಚಳಿಯದೆ ನಿಲ್ಲುವಂತಾಯಿತು. ರೂಕ್ಷನಾಗಿ ಹೆಸರಾಂತ ಯಕ್ಷಕಲಾವಿದೆ ವಸುಂಧರಾ ಹರೀಶ್‌ ಅಮೋಘ ಪ್ರದರ್ಶನ ನೀಡಿದರು.

ಮಾನಿಷಾದ ಪ್ರಸಂಗದ ಪ್ರಧಾನ ಆಕರ್ಷಣೆಗಳಲ್ಲಿ ಒಂದಾದ ಬೇಟೆಗಾರರ ಕುಣಿತವು ನೋಡುಗರನ್ನು ಮೈಮರೆಯುವಂತೆ ಮಾಡಿತು.. ಮಾತ್ರವಲ್ಲದೆ ಮಹಾಬಲ ಭಟ್‌ ಭಾಗಮಂಡಲ ಅವರ ಅಗಸನ ಪಾತ್ರವು ಯಕ್ಷಾಭಿಮಾನಿಗಳು ನಗೆಗಡಲಲ್ಲಿ ತೇಲಾಡಿಸಿತು. ಮಾನಿಷಾದದ ಕೇಂದ್ರ ಬಿಂದುವಾದ ರಾಮ ಮತ್ತು ಸೀತೆಯ ಪಾತ್ರಗಳಿಗೆ ಜೀವ ತುಂಬಿದವರು ಕಲಾಸಂಪನ್ನೆ ವೃಂದಾ ಕೊನ್ನಾರ್‌ ಹಾಗೂ ಗಡಿನಾಡಿನ ನಾಟ್ಯ ವಿಶಾರದೆ ಮಹಿಮಾ ಎಸ್‌ ರಾವ್‌. ಅತಿಗಳಿಲ್ಲದೆ ಮಿತಿಯಲ್ಲಿ ಪಾತ್ರ ಪೋಷಣೆ ಮಾಡುವ ನೈಪುಣ್ಯತೆ ಈ ಕಲಾವಿದರಲ್ಲಿದೆ.

ಹಿಮ್ಮೇಳದಲ್ಲಿ ಚೆಂಡೆ ಮುರಾರಿ ಕಡಂಬಳಿತ್ತಾಯ ಹಾಗೂ ಸುಬ್ರಹ್ಮಣ್ಯ ಚಿತ್ರಾಪುರ, ಮದ್ದಳೆ ಗಣೇಶ್‌ ನೆಕ್ಕರೆಮೂಲೆ, ಚಕ್ರತಾಳದಲ್ಲಿ ಅಭಿಜಿತ್‌ ಬಂಟ್ವಾಳ ಸಹಕರಿಸಿದರು. ವಿಕ್ಷಿಪ್ತನಾಗಿ ದಿನೇಶ್‌ ಬಂಗೇರ, ದಕ್ಷನ ಪಾತ್ರದಲ್ಲಿ ಮುರಳಿ ನಾವಡ ಮಧೂರು, ಸಪ್ತ ಋಷಿಗಳು ದಿನೇಶ್‌, ವಿಶ್ವನಾಥ, ಶ್ರೀಶ ನಾವಡ, ಪುಂಗವನಾಗಿ ಕುಸುಮಾಕರ, ಬೇಟೆಗಾರರಾಗಿ ಹಿಮಜಾ, ಕಾರ್ತಿಕ್‌, ಧನಿಶ್‌, ಕಿಶನ್‌, ಶ್ರೀಶ, ಕಿಶನ್‌ ಅಗ್ಗಿತ್ತಾಯ, ಹುಲಿ ಕೃಷ್ಣ ಪ್ರಕಾಶ್‌, ವಾಲ್ಮೀಕಿ ದೀಪಕ್‌ ಶೆಟ್ಟಿ, ಬ್ರಹ್ಮ ಅನನ್ಯ ಐತಾಳ್‌, ಭದ್ರ ಕಾರ್ತಿಕ್‌ ಸಮರ್ಥವಾಗಿ ಪಾತ್ರ ನಿರ್ವಹಿಸಿದರೆ ಲಕ್ಷ್ಮಣನಾಗಿ ಮೈತ್ರಿ ಭಟ್‌ ಮವ್ವಾರು ಹಾಗೂ ಶತ್ರುಘ್ನನ ಪಾತ್ರದಲ್ಲಿ ಪ್ರವೀಣ್‌ ರೈ ಬೇಳ ಗಮನಸೆಳೆದರು. ಲವಣಾಸುರ ಸುಬ್ರಹ್ಮಣ್ಯ ಭಟ್‌ ಬದಿಯಡ್ಕ, ಬಲಗಳಾಗಿ ಬಾಲಚಂದ್ರ, ಮಿಥುನ್‌, ಕಿಷನ್‌, ಕಾರ್ತಿಕ್‌ ಹಾಗೂ ಧನಿಶ್‌ ಹಾಗೂ ಲವ ಕುಶರಾಗಿ ಚಮನ್‌ ಮತ್ತು ಭವಿಷ್‌ ಪಾತ್ರ ನಿರ್ವಹಿಸಿದರು.

ಉತƒಷ್ಟ ಗುಣಮಟ್ಟದ ವೇಷ ಭೂಷಣ, ಹಿತವರಿತ ನಾಟ್ಯ, ಮಾತುಗಾರಿಕೆ, ಸಮರ್ಥ ಗುರುವಿನ ಸೂಕ್ತ ಮಾರ್ಗದರ್ಶನದಲ್ಲಿ ಮೂಡಿಬಂದಾಗ ಒಟ್ಟು ಕತೆಯನ್ನು ಅತ್ಯಾಕರ್ಷಕವಾಗಿ ಬಿಂಬಿಸುವಲ್ಲಿ ಯಶಸ್ವಿಯಾಯಿತು. ಆದುದರಿಂದಲೇ ಒಂದು ಅತ್ಯುತ್ತಮ, ಅಚ್ಚುಕಟ್ಟಾದ ಆಪ್ತ ಪ್ರದರ್ಶನವಾಗಿ ಮಾನಿಷಾದ ಮೂಡಿಬಂತು.

Advertisement
Advertisement

Udayavani is now on Telegram. Click here to join our channel and stay updated with the latest news.

Next