Advertisement

ನಂದಿಕೇಶ್ವರ ಪ್ರಶಸ್ತಿಗೆ ಎಂ.ಎ.ನಾಯ್ಕ, ವಿಶ್ವನಾಥ ಗಾಣಿಗ

09:33 PM Mar 28, 2019 | mahesh |

ಬ್ರಹ್ಮಾವರದ ಮಟಪಾಡಿ ನಂದಿಕೇಶ್ವರ ಯಕ್ಷಗಾನ ಮಂಡಳಿಯ ಮಟಪಾಡಿ ವೀರಭದ್ರ ನಾಯಕ್‌ ಸಂಸ್ಮರಣಾ ಪ್ರಶಸ್ತಿ ಮತ್ತು ವೇದಮೂರ್ತಿ ಶ್ರೀನಿವಾಸ ಉಡುಪ ಪ್ರಶಸ್ತಿಗಳಿಗೆ ಈ ವರ್ಷ ಹಾರಾಡಿ ಮಟಪಾಡಿ ಶೈಲಿಯ ಎಂ.ಎ.ನಾಯ್ಕ ಮತ್ತು ವಿಶ್ವನಾಥ ಗಾಣಿಗ ಪಾತ್ರರಾಗಿದ್ದಾರೆ. ಪ್ರಶಸ್ತಿ ಪ್ರದಾನ ಮಾ. 30 ನೆರವೇರಲಿದೆ.

Advertisement

ಎಂ.ಎ.ನಾಯ್ಕ: ಮಂದಾರ್ತಿ ಅಣ್ಣು ನಾಯಕ್‌ ಯಾನೆ ಎಂ.ಎ.ನಾಯ್ಕರು ಬಡಗುತಿಟ್ಟಿನ ಅಗ್ರಪಂಕ್ತಿಯ ಸ್ತ್ರೀವೇಷದಾರಿಗಳಲ್ಲಿ ಒಬ್ಬರು. ಒನಪು ವೈಯ್ನಾರ ಶರೀರ – ಶಾರೀರ, ಸ್ವರಬಾರ, ಹೀಗೆ ಸ್ತ್ರೀವೇಷಕ್ಕೆ ಬೇಕಾದ ಸರ್ವ ಅಂಗಗಳಲ್ಲೂ ಪರಿಪೂರ್ಣರಾದ ಇವರು ಬಡಗುತಿಟ್ಟಿನ ಸಾಂಪ್ರದಾಯದ ಕಲಾವಿದರಾದ ಹಾರಾಡಿ ನಾರಾಯಣ ಗಾಣಿಗ ಕೋಟ ವೈಕುಂಠ, ಅರಾಟೆ ಮಂಜುನಾಥ ದಯಾನಂದ ನಾಗೂರರ ಸಾಲಿನಲ್ಲಿ ಗುರುತಿಸಲ್ಪಟ್ಟವರು.

ಮಂದಾರ್ತಿ ಮೇಳದ ಹರಕೆ ಆಟ ನೋಡಿ ಶಿರಿಯಾರ ಮಂಜು ನಾಯಕ್‌, ಕೋಟ ವೈಕುಂಠ,ಅರಾಟೆ ಮಂಜುನಾಥ ಮುಂತಾದವರ ವೇಷ,ಕೊರಗಪ್ಪ ಹಾಸ್ಯಗಾರರ ಹಾಸ್ಯ ನೋಡಿ ಆಕರ್ಷಿತರಾದ ಇವರನ್ನು ಹಿರಿಯ ಕಲಾವಿದ ಸುರ್ಗಿಕಟ್ಟೆ ಹೆರಿಯ ಗಾಣಿಗರು 1964ರಲ್ಲಿ ಅಮೃತೇಶ್ವರಿ ಮೇಳಕ್ಕೆ ಸೇರಿಸಿದರು. ಕೋಡಂಗಿ ಕಟ್ಟುವೇಷ , ಪೀಠಿಕಾ ಸ್ತ್ರೀವೇಷ , ಸಖೀ ವೇಷಕ್ಕೆ ತಯಾರದ ಸಂದರ್ಭದಲ್ಲಿ ಅಮೃತೇಶ್ವರಿ ಮೇಳ ಡೇರೆ ಮೇಳವಾಗಿ ತಿರುಗಾಟಕ್ಕೆ ಹೊರಟಿತ್ತು. ಅಣ್ಣು ನಾಯ್ಕರು ಎಂ.ಎ ನಾಯ್ಕ ಆಗಿ ಮುಖ್ಯ ಸ್ತ್ರೀàವೇಷದಾರಿಯಾಗಿ ಸೇರಿದರು. ಯಕ್ಷಲೋಕ ವಿಜಯದ ಸುಮಗಂಧಿಯ ಪಾತ್ರ ಇವರಿಗೆ ಅಪಾರ ಹೆಸರು ತಂದುಕೊಟ್ಟಿತ್ತು. 13 ವರ್ಷ ಅಮೃತೇಶ್ವರಿ ಮೇಳದಲ್ಲಿ ಚಕ್ರ ಚಂಡಿಕೆ,ರಾಜ ಬೃಹದ್ರಥ, ಮಾಯಾ ಮೃಗಾವತಿ ಮುಂತಾದ ಪ್ರಸಂಗಗಳಲ್ಲಿ ಪಾತ್ರ ನಿರ್ವಹಿಸಿದ ಇವರು ಬಳಿಕ ಮೂಲ್ಕಿ ಮೇಳ ಸೇರಿದರು.ಇವರ ಚಂದ್ರಮತಿ,ದಮಯಂತಿ,ಸೀತೆ ಸಾವಿತ್ರಿ ಮಂಡೋದರಿ ಮುಂತಾದ ಪಾತ್ರಗಳು ಜನಮನ್ನಣೆ ಪಡೆದಿವೆ.

ವಿಶ್ವನಾಥ ಗಾಣಿಗ
ಬಡಗುತಿಟ್ಟಿನ ಬಯಲಾಟ ಪರಂಪರೆಯಲ್ಲಿ ಎದ್ದು ಕಾಣುವ ಹೆಸರು ವಿಶ್ವನಾಥ ಗಾಣಿಗರದ್ದು. ಅವರಲ್ಲಿ ಬಹಳಷ್ಟು ಗಮನಿಸ ಬೇಕಾಗಿದ್ದು ವೇಷಗಾರಿಕೆಯ ಸೊಗಸು ಮತ್ತು ಮಾತುಗಾರಿಕೆಯ ಮೋಡಿ. ಧ್ವನಿವರ್ಧಕವಿಲ್ಲದೆ ಬಹುದೂರ ಕೇಳಿಸುವ ಕಂಠ, ವ್ಯಾಕರಣಬದ್ಧ ಮಾತುಗಾರಿಕೆ, ಸ್ಪಷ್ಟ ಉಚ್ಚಾರ, ಶ್ರೇಷ್ಠ ನಿರೂಪಣಾ ಸಾಮರ್ಥ್ಯದಿಂದ ಗಾಣಿಗರು ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ.

ಹೂವಿನ ಕೋಲಿನ ಕಲಾವಿದರಾಗಿ ಭಾಗವಹಿಸಿದ ಇವರಲ್ಲಿ ಯಕ್ಷಗಾನದ ಆಸಕ್ತಿ ಮೊಳೆಯ ತೊಡಗಿತು. ಗುರುಮುಖೇನ ವಿದ್ಯೆ ಇಲ್ಲದೆ ನಾವುಂದ ಮಹಾಬಲ ಗಾಣಿಗ,ಹಾರಾಡಿ ಸರ್ವ ಗಾಣಿಗ,ಜಮದಗ್ನಿ ಶೀನ , ಆಲೂರು ಸುರೇಂದ್ರ ಮುಂತಾದವರಿಂದ ಕಂಡು ಕೇಳಿ ಕಲಿತದ್ದು ಇವರ ಹೆಚ್ಚುಗಾರಿಕೆ. ಅಮೃತೇಶ್ವರಿ, ಸಾಲಿಗ್ರಾಮ ಹಾಲಾಡಿ ಮೇಳದಲ್ಲಿ ಸೇವೆ ಸಲ್ಲಿಸಿದ ಇವರು 21 ವರ್ಷದಿಂದ ಸೌಕೂರು ಮೇಳದಲ್ಲಿದ್ದಾರೆ.

Advertisement

ಕರ್ಣಾರ್ಜುನದ ಕರ್ಣ,ಜಾಂಬವತಿ ಕಲ್ಯಾಣದ ಜಾಂಬವ, ಭೀಷ್ಮ ಪರ್ವದ ಭೀಷ್ಮ ಅತಿಕಾಯದ ಅರ್ಜುನ, ಶಲ್ಯ, ಸುಧನ್ವ, ರಾವಣ, ಜಮದಗ್ನಿ, ಈಶ್ವರ ಮುಂತಾದ ಪಾತ್ರಗಳಲ್ಲಿ ಹಾರಾಡಿ ವೇಷದ ಸೊಗಸನ್ನು ಗುರುತಿಸಬಹುದಾಗಿದೆ.ಪಾರ್ಟಿನ ವೇಷಗಳನ್ನು ಅಷ್ಟೇ ಸೊಗಸಾಗಿ ಅಭಿನಯಿಸುವ ಇವರ ಕಾಲನೇಮಿ,ಕಂಸ ಶುಂಭ,ಮಧು-ಕೈಟಭ ಮುಂತಾದ ವೇಷಗಳು ಜನಮನ್ನಣೆ ಗಳಿಸಿವೆ.ನಾಗಶ್ರೀಯ ಶಿಥಿಲ, ಚಿತ್ರಾವತಿಯ ಹೇಮಾಂಗದ,ಧರ್ಮ ಸಂಕ್ರಾಂತಿ,ಮೇಘ ಮಯೂರಿ,ಭಾನು ತೇಜಸ್ವಿ ಮುಂತಾದ ಹೊಸ ಪ್ರಸಂಗಗಳ ವೇಷಗಳಿಗೂ ಜೀವ ತುಂಬಿದ್ದಾರೆ.

ಪ್ರೊ| ಎಸ್‌.ವಿ.ಉದಯ ಕುಮಾರ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next