Advertisement

ಎಂ. ವೈ. ಪುತ್ರನ್‌ ಅವರ ಪ್ರಾಮಾಣಿಕ ಸೇವೆ ಮಾದರಿ: ಕೃಷ್ಣ ಕುಮಾರ್‌ ಬಂಗೇರ

02:45 PM Sep 08, 2021 | Team Udayavani |

ಮುಂಬಯಿ: ಮೊಗವೀರ ವ್ಯವಸ್ಥಾಪಕ ಮಂಡಳಿಯ ಮಾಜಿ ಟ್ರಸ್ಟಿ ಎಂ. ವೈ. ಪುತ್ರನ್‌ ಅವರ ಸಂತಾಪ ಸೂಚಕ ಸಭೆ ಸೆ. 1ರಂದು ಅಂಧೇರಿಯ ಮೊಗವೀರ ಭವನದಲ್ಲಿ ಸಂಜೆ 6ರಿಂದ ನಡೆಯಿತು. ಮೊಗವೀರ ವ್ಯವಸ್ಥಾಪಕ ಮಂಡಳಿ, ದೊಡ್ಡಕೊಪ್ಪಲ ಮೊಗವೀರ ಸಭಾ ಮತ್ತು ಮೊಗವೀರ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘ ಸಂಯುಕ್ತವಾಗಿ ಆಯೋಜಿಸಿದ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಡಳಿಯ ಅಧ್ಯಕ್ಷ ಕೃಷ್ಣ ಕುಮಾರ್‌ ಎಲ್‌. ಬಂಗೇರ ಅವರು ವಹಿಸಿದ್ದರು.

Advertisement

ಆ. 21ರಂದು ನಿಧನ ಹೊಂದಿದ ಎಂ. ವೈ. ಪುತ್ರನ್‌ ಮೊಗವೀರ ರಾತ್ರಿ ಶಾಲೆಯ ವಿದ್ಯಾರ್ಥಿಗಳ ಕ್ರೀಡೆ, ಪ್ರತಿಭಾ ಸ್ಪರ್ಧೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಯಶಸ್ಸಿಗೆ ಸಲ್ಲಿಸಿದ ಅಮೋಘ ಸೇವೆಯನ್ನು ಹಳೆ ವಿದ್ಯಾರ್ಥಿ ಹಾಗೂ ದೊಡ್ಡ ಕೊಪ್ಪಲ ಮೊಗವೀರ ಸಭಾದ ಹಿರಿಯ ಕಾರ್ಯಕರ್ತ ಅರವಿಂದ್‌ ಕಾಂಚನ್‌ ಸಭೆಗೆ ತಿಳಿಸಿದರು. ಪುತ್ರನ್‌ ಅವರ ಶಿಸ್ತುಬದ್ಧವಾಗಿ ಶಾಲಾಡಳಿತ ನಿರ್ವಹಿಸುತ್ತಿದ್ದ ರೀತಿ ಆದರ್ಶವಾದುದು ಎಂದು ಹೇಳಿ ಶ್ರದ್ಧಾಂಜಲಿ ಅರ್ಪಿಸಿದರು.

ಮೊಗವೀರ ರಾತ್ರಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಪರವಾಗಿ ಹಳೆ ವಿದ್ಯಾರ್ಥಿ, ಉದ್ಯಮಿ ಶ್ರೀನಿವಾಸ್‌ ಕಾಂಚನ್‌ ಅವರು, ಎಂ. ವೈ. ಪುತ್ರನ್‌ ಫುಟ್ಬಾಲ್‌ ಕ್ರೀಡಾ ಸ್ಪರ್ಧೆಗಾಗಿ ರಾತ್ರಿ ಶಾಲೆಯ ವಿದ್ಯಾರ್ಥಿಗಳಿಗೆ ಕಠಿನ ತರಬೇತಿ ನೀಡಿ ಶಾಲಾ ತಂಡವು ಜಯಶಾಲಿಯಾಗುವಂತೆ ಪ್ರತೀ ವರ್ಷ ಮಾಡುತ್ತಿದ್ದ ಪರಿಶ್ರಮ, ತ್ಯಾಗ ಮರೆಯುವಂತಿಲ್ಲ. ಅವರಿಂದಾಗಿ ಅನೇಕ ಯುವಕರಿಗೆ ಬ್ಯಾಂಕ್‌, ಇನ್ಶೂರೆನ್ಸ್‌ ಕಂಪೆನಿ, ಟಾಟಾ, ಬಿರ್ಲಾ ಹಾಗೂ ಇನ್ನಿತರ ಬೃಹತ್‌ ಸಂಸ್ಥೆಗಳಲ್ಲಿ ಹುದ್ದೆ ಪಡೆಯುವ ಅವಕಾಶ ದೊರೆತಿದೆ. ಪುತ್ರನ್‌ ಅವರ ಅಮೂಲ್ಯ ಸೇವೆ ಸದಾ ಸ್ಮರಣೀಯ ಎಂದು ನುಡಿನಮನ ಸಲ್ಲಿಸಿದರು.

ಇದನ್ನೂ ಓದಿ:ರ್‍ಯಾಂಬೊ ಗೆಲುವಿಗೆ ಕಾರಣಕರ್ತರ ಸ್ಮರಿಸಿದ ಶರಣ್‌

ಮಂಡಳಿಯ ಟ್ರಸ್ಟಿ ಅಜಿತ್‌ ಸುವರ್ಣ ಅವರು ಎಂ. ವೈ ಪುತ್ರನ್‌ ಅವರ ಸ್ನೇಹಮಯ ನಡವಳಿಕೆ, ನಿಷ್ಪಕ್ಷ ಧೋರಣೆ ಯುವಕರನ್ನು ಹುರಿದುಂಬಿಸುವ ರೀತಿ ಅನನ್ಯ ವಾದುದು ಎಂದು ಹೇಳಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.

Advertisement

ಮಂಡಳಿಯ ಹಿರಿಯ ಕಾರ್ಯಕರ್ತ ಬಿ. ಕೆ. ಪ್ರಕಾಶ್‌ ಅವರು, ಎಂ. ವೈ. ಅವರ ನಿಷ್ಕಲ್ಮಶ ವ್ಯಕ್ತಿತ್ವ, ಹಾಸ್ಯ ಪ್ರವೃತ್ತಿ ಎಲ್ಲರೂ ಮೆಚ್ಚುವಂತಹದು. ರಾತ್ರಿ ಶಾಲೆಗೆ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆಯನ್ನು ಮಂಡಳಿಯ ಹಿರಿಯರು ಸದಾ ಶ್ಲಾಘನೆ ಮಾಡುತ್ತಿದ್ದರು ಎಂದು ಹೇಳಿ ಪುಷ್ಪಾಂಜಲಿ ಅರ್ಪಿಸಿದರು.

ಅಧ್ಯಕ್ಷ ಕೆ ಎಲ್‌. ಬಂಗೇರ ಅವರು, ಮಂಡಳಿಯ ಪರಂಪರೆ, ಧೋರಣೆಗಳಿಗೆ ಬದ್ಧವಾಗಿ ಪ್ರಾಮಾಣಿಕ ಸೇವೆಯ ಎಂ. ವೈ. ಪುತ್ರನ್‌ ಅವರು ಸದಾ ವಂದನೀಯರು ಎಂದು ಹೇಳಿ ಸಂತಾಪ ಠರಾವು ಮಂಡಿಸಿ, ಎರಡು ನಿಮಿಷಗಳ ಮೌನ ಪ್ರಾರ್ಥನೆಗೆ ಸಭೆಯನ್ನು ವಿನಂತಿಸಿದರು.

ಸಭೆಯಲ್ಲಿ ಉದ್ಯಮಿಗಳಾದ ವೇದ್‌ ಪ್ರಕಾಶ್‌ ಶ್ರೀಯಾನ್‌ ಮತ್ತು ಸುರೇಶ್‌ ಕಾಂಚನ್‌, ಮಂಡಳಿಯ ಪ್ರಧಾನ ಕಾರ್ಯದರ್ಶಿ ಭಾಸ್ಕರ್‌ ಸಾಲ್ಯಾನ್‌, ಟ್ರಸ್ಟಿಗಳಾದ ವಿಕಾಸ್‌ ಪುತ್ರನ್‌, ದಯಾನಂದ್‌ ಬಂಗೇರ, ಹರೀಶ್‌ ಪುತ್ರನ್‌, ಲಕ್ಷ್ಮಣ್‌ ಶ್ರೀಯಾನ್‌, ಮಂಡಳಿಯ ಸಮಿತಿ ಸದಸ್ಯರು, ಎಂ. ವೈ. ಪುತ್ರನ್‌ ಅವರ ಮಕ್ಕಳು, ಸಂಬಂಧಿಕರು ಅಭಿಮಾನಿಗಳು ಉಪಸ್ಥಿತರಿದ್ದರು.

ಮೊಗವೀರ ಮಾಸಿಕದ ಸಂಪಾದಕ ಅಶೋಕ್‌ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next