ವಿಜಯಪುರ: ಪಠ್ಯ ಪುಸ್ತಕ ರಚನಾ ವಿಷಯದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಪಠ್ಯ ಪುಸ್ತಕ ರಚನೆಯ ಮೂಲ ಆಶಯವನ್ನೇ ಮರೆತಿದೆ. ಜಾತಿ, ಮತ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವುದೇ ಆದ್ಯತೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ದೂರಿದರು.
ಶುಕ್ರವಾರ ನಗರದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ನಾಡಿನ ಸಾಹಿತಿ, ಬುದ್ಧಿಜೀವಿಗಳು, ಸಂಶೋಧಕರು ನೀಡುತ್ತಿರುವ ವಿಷಯಗಳನ್ನು ಕಡೆಗಣಿಸಲಾಗುತ್ತಿದೆ. ಮಕ್ಕಳನ್ನು ದೇಶದ ಮಾದರಿ ನಾಯಕನನ್ನಾಗಿ ರೂಪಿಸುವ ವಿಷಯಗಳ ಬದಲಾಗಿ ಶಿಕ್ಷಣ ಮುಗಿಸಿ ಹೊರ ಬರುವ ಮಗು ಕೋಮುವಾದಿಯಾಗಿ ಹೊರಬರುವಂತೆ ಮಾಡಿದೆ ಎಂದು ಆರೋಪಿಸಿದರು.
ಭಗತ್ ಸಿಂಗ್, ಟಿಪ್ಪು ಸುಲ್ತಾನ, ನಾರಾಯಣ ಗುರು, ಪೆರಿಯಾರ ಅವರಂಥ ಮಹಾತ್ಮರ ಕುರಿತ ಪಠ್ಯಗಳನ್ನು ಕೈಬಿಡಲಾಯಿತು. ಕುವೆಂಪು ಅವರ ರಚಿತ ಕವಿತೆಗಳನ್ನು ಕೈಬಿಡಲಾಯಿತು, ಬಸವೇಶ್ವರ ಕುರಿತು ತಿರುಚಲಾಯಿಗಿದೆ. ದೇಶದ ಸ್ವಾತಂತ್ರ್ಯಕ್ಕೆ ಕಿಂಚಿತ್ ಕೊಡುಗೆ ನೀಡದವರನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎಂದು ದೂರಿದರು.
ಮೇ 15 ರಿಂದ ಶಾಲೆಗಳನ್ನು ಆರಂಭಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸರು ಕಳ್ಳನಿಂದ ವರದಿ ಪಡೆದಂತೆ ಇಡೀ ದುರವಸ್ತೆಗೆ ಕಾರಣವಾದ ಶಿಕ್ಷಣ ಸಚಿವ ನಾಗೇಶ ಅವರಿಂದ ವರದಿ ಪಡೆಯುತ್ತೇನೆ ಎಂದಿರುವ ಕ್ರಮ ನಾಚಿಗೇಡಿನದು ಎಂದು ಹರಿಹಾಯ್ದರು.
ಮನುವಾದಿ ಸಂಘಟನೆಗಳು, ನಾಗಪುರ ಕಛೇರಿ ನಿರ್ದೇಶನದಂತೆ ಪಠ್ಯ ಪುಸ್ತಕ ರಚನಾ ಸಮಿತಿ ರಚನೆಯಾಗಿದೆ. ಸಂಸ್ಕೃತಿ ರಕ್ಷಣೆ ಹೆಸರಿನಲ್ಲಿ ಸಮಾಜದಲ್ಲಿ ವಿಕೃತಿ ಮೆರೆಯುವ ಪಠ್ಯ ರಚನೆ ಮಾಡಿ ತರಾತುರಿಯಲ್ಲಿ ವಿತರಿಸಲು ಮುಂದಾಗಿದೆ ಎಂದು ಆರೋಪಿಸಿದರು.
ನಾಗರಾಜ ಲಂಬು, ಡಾ.ರವಿ ಬಿರಾದಾರ, ವಸಂತ ಹೊನಮೋಡೆ ಉಪಸ್ಥಿತರಿದ್ದರು