ನವದೆಹಲಿ: ಕೋವಿಡ್ 19 ವೈರಸ್‌ನಿಂದಾಗಿ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಟಿ20 ಕೂಟಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಾಗಿದೆ. ಐಪಿಎಲ್ 13ನೇ ಆವೃತ್ತಿ ಮುಂದೆ ನಡೆಯುವುದೇ ಅನುಮಾನ ಅನ್ನುವ ಸ್ಥಿತಿಯಲ್ಲಿದೆ. ಒಂದು ವೇಳೆ ಕೂಟ ನಡೆಯದಿದ್ದರೆ ಕೆಲವು ಆಟಗಾರರ ಕ್ರಿಕೆಟ್ ಭವಿಷ್ಯಕ್ಕೆ ದೊಡ್ಡ ಹೊಡೆತ ಬೀಳುವುದಂತೂ ಖಚಿತ. ಹೌದು, ಈ ಸಲ ಐಪಿಎಲ್ ನಡೆಯದಿದ್ದರೆ ಭಾರತ ಕ್ರಿಕೆಟ್ ತಂಡದ ಮೂವರು ಕ್ರಿಕೆಟಿಗರು ಭಾರೀ ನಷ್ಟ ಅನುಭವಿಸಲಿದ್ದಾರೆ. ಯಾರು ಆ ಮೂವರು? ಎನ್ನುವ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.
ಎಂ.ಎಸ್.ಧೋನಿ
ಕಳೆದೊಂದು ವರ್ಷಗಳಿಂದ ಈಚೆಗೆ ಎಂ.ಎಸ್.ಧೋನಿ ಕ್ರಿಕೆಟ್‌ನಿಂದ ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಕೊನೆಯದಾಗಿ ಅವರು ಆಡಿದ್ದು ಏಕದಿನ ವಿಶ್ವಕಪ್‌ನಲ್ಲಿ. ಅದಾದ ಬಳಿಕ ಧೋನಿ ವಿಶ್ರಾಂತಿ ಎಂದರು, ಆಗಿನಿಂದ ಈಗಿನ ತನಕ ಧೋನಿ ನಿವೃತ್ತಿ ಕುರಿತು ನಿರಂತರ ಚರ್ಚೆಯಾಗುತ್ತಲೇ ಇದೆ. ಇದುವರೆಗೆ ಧೋನಿ ನಿವೃತ್ತಿ ಬಗೆಗೆ ಬಿಸಿಸಿಐ ಯಾವುದೇ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಮೂಲಗಳ ಪ್ರಕಾರ ಧೋನಿ ಮುಂಬರುವ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಆಡಿ ವೃತ್ತಿ ಬದುಕಿಗೆ ವಿದಾಯ ಹೇಳುವ ಸಂಕಲ್ಪ ಮಾಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಪೈಪೋಟಿಯಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಧೋನಿಗೆ ಕಷ್ಟವಾಗಿತ್ತು. ಅವರಿಗಿದ್ದದ್ದು ಒಂದೇ ದಾರಿ, ಅದು ಐಪಿಎಲ್, ಅಲ್ಲಿ ಶ್ರೇಷ್ಠ ನಿರ್ವಹಣೆ ನೀಡುವುದು ಧೋನಿ ಕನಸಾಗಿತ್ತು, ಆದರೆ ಕೊರೊನಾ ಇದಕ್ಕೆ ಅಡ್ಡಗಾಲು ಹಾಕಿದೆ. ಐಪಿಎಲ್ ಆರಂಭಕ್ಕೆ 1 ತಿಂಗಳು ಬಾಕಿ ಇರುವಾಗಲೇ ಧೋನಿ ಚೆನ್ನೈನಲ್ಲಿ ಅಭ್ಯಾಸ ಆರಂಭಿಸಿ ಸದ್ದು ಮಾಡಿದ್ದರು. ಆದರೆ ಈಗ ಕೊರೊನಾ ಹಿನ್ನೆಲೆಯಲ್ಲಿ ಅಭ್ಯಾಸ ನಡೆಸಲಾಗದೆ ತವರಿಗೆ ತೆರಳಿದ್ದಾರೆ.
ಸಂಜು ಸ್ಯಾಮ್ಸನ್
ಕಳಪೆ ಫಾರ್ಮ್ ನಲ್ಲಿರುವ ರಿಷಭ್ ಪಂತ್ ಬದಲು ಇತ್ತೀಚೆಗೆ ನ್ಯೂಜಿಲೆಂಡ್ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಕೇರಳದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿತ್ತು. ಐಪಿಎಲ್ ನಡೆದರೆ ಸಂಜು ಸ್ಯಾಮ್ಸನ್ ಮತ್ತಷ್ಟು ಉತ್ತಮ ನಿರ್ವಹಣೆ ನೀಡಿ ಭಾರತ ಟಿ20 ತಂಡದಲ್ಲಿ ಸ್ಥಾನ ಗಟ್ಟಿ ಮಾಡಿಕೊಳ್ಳಲು ಅವಕಾಶವಿತ್ತು. ಸದ್ಯದ ಮಟ್ಟಿಗೆ ಅದಕ್ಕೆ ಅವಕಾಶ ಸಿಗುವುದು ಕಷ್ಟ. ಒಂದು ವೇಳೆ ಕೂಟ ರದ್ದಾದರೆ ಮುಂದೆ ಸ್ಯಾಮ್ಸನ್ ಹಾಗೂ ಪಂ ತ್ ಇಬ್ಬರನ್ನೂ ಕೈಬಿಟ್ಟು ಹೊಸ ಆಟಗಾರ ನೊಬ್ಬನಿಗೆ ಬಿಸಿಸಿಐ ಮಣೆ ಹಾಕಿದರೂ ಅಚ್ಚರಿ ಇಲ್ಲ.
ಪೃಥ್ವಿ ಶಾ
ಬಿಸಿಸಿಐ ಭಾರತ ತಂಡಕ್ಕೆ ಮೂರನೇ ಆರಂಭಿಕ ಬ್ಯಾಟ್ಸ್ ಮನ್ ಹುಡುಕಾಟದಲ್ಲಿದೆ. ಧವನ್ ಟಿ20 ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಗಳು ಕಡಿಮೆ ಇದ್ದು ಈ ಸ್ಥಾನಕ್ಕೆ ಪೃಥ್ವಿ ಶಾ ಕರೆತರುವ ಬಗ್ಗೆ ಚಿಂತನೆ ನಡೆದಿತ್ತು. ಐಪಿಎಲ್ ಬಳಿಕ ತೀರ್ಮಾನ ತೆಗೆದುಕೊಳ್ಳಲು ಬಿಸಿಸಿಐ ಚಿಂತಿಸಿತ್ತು. ಸದ್ಯದ ಪರಿಸ್ಥಿತಿ ನೋಡಿದರೆ ಬಿಸಿಸಿಐ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೆ ಧವನ್ ರನ್ನೇ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಅಲ್ಲಿಗೆ ಪೃಥ್ವಿ ಶಾ ಟಿ20 ತಂಡದಲ್ಲಿ ಪದಾರ್ಪಣೆ ಮಾಡುವ ಕನಸು ನನಸಾಗದೆ ಉಳಿಯಬಹುದು.