Advertisement

ಸಾಮಗರಿಗೆ ಸಪ್ತತಿ ಸಂಭ್ರಮ

06:14 PM May 23, 2019 | mahesh |

ಹಿರಿಯ ವೇಷಧಾರಿ, ಆರ್ಥಧಾರಿ, ಸಂಘಟಕ ಎಂ. ಆರ್‌. ವಾಸುದೇವ ಸಾಮಗರ ಸಪ್ತತಿ ಮೇ 26ರಂದು ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಸಮಕ್ಷ ಸಂಪನ್ನಗೊಳ್ಳಲಿದೆ.

Advertisement

ಸಾಮಗರದ್ದು ಸಾಹಸ ಪ್ರವೃತ್ತಿಯುಳ್ಳ, ಸವಾಲುಗಳನ್ನು ಎದುರಿಸುತ್ತಾ ಏರು-ಜಾರುಗಳಲ್ಲಿ ಹರಿದು ಭೋರ್ಗರೆವ ಜಲಪಾತದಂಥ ಬದುಕಿನ ದಾರಿ. ಸದಾ ಕ್ರಿಯಾಶೀಲ, ಕನಸುಗಾರ, ನವಾನ್ವೇಷಕ, ಸಾಧಿಸುವ ಛಲಗಾರ, ಸೋಲಿನಲ್ಲಿಯೂ ಗೆಲುವನ್ನು ಕಾಣುವ ಸಮಚಿತ್ತ.

ಸಾಮಗರ ಮೋಹನ ತರಂಗಿಣಿಯ ಮನ್ಮಥ, ಮಧುರಾ ಮಹೀಂದ್ರದ ಬಾಲಕಂಸ, ಕಚದೇವಯಾನಿಯ ಕಚ, ಯಕ್ಷಲೋಕ ವಿಜಯದ ಪ್ರದೀಪ, ಶನೀಶ್ವರ ಮಹಾತೆ¾ಯ ವಿಕ್ರಮಾದಿತ್ಯ, ಉತ್ತರ ಗೋಗ್ರಹಣದ ಉತ್ತರಕುಮಾರ ಪಾತ್ರಗಳು ಚಿತ್ತಭಿತ್ತಿಯಿಂದ ಅಳಿಸಿಹೋಗದು. ತಾಳಮದ್ದಳೆಯಲ್ಲಿ ನಿರ್ವಹಿಸದ ಪ್ರಸಂಗಗಳಿಲ್ಲ, ಪಾತ್ರಗಳೇ ಇಲ್ಲವೆನ್ನಬಹುದು. ಕರ್ಣ, ಅರ್ಜುನ, ಕೃಷ್ಣ, ಶಲ್ಯರಂಥಹ ಮುಖ್ಯಪಾತ್ರಗಳಲ್ಲದೇ, ಅಶ್ವಸೇನನಂತಹ ಸಣ್ಣ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅಂಬಿಗನ ಪಾತ್ರವನ್ನು ಹೊಸ ಚಿಂತನೆ ಯಲ್ಲಿ ಕಟ್ಟಿಕೊಟ್ಟದ್ದನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಆಟವಿರಲಿ, ಕೂಟವಿರಲಿ ವಾಸುದೇವ ಸಾಮಗರು ರಂಗದಲ್ಲಿ ಅನನ್ಯರಾಗಿಯೇ ಕಾಣಿಸಿಕೊಳ್ಳುತ್ತಾರೆ. ದೊಡ್ಡಪ್ಪ ಶಂಕರನಾರಾಯಣ ಸಾಮಗ ಮತ್ತು ತಂದೆ ರಾಮದಾಸ ಸಾಮಗರ ಪಾತ್ರ ನಿರ್ವಹಣೆಯ ಕೌಶಲದ ಬಳುವಳಿಯೊಂದಿಗೆ ತನ್ನದೇ ಆದ ಹೊಸ ಆಯಾಮದಲ್ಲಿ ಪಾತ್ರಗಳನ್ನು ಕಡೆದು ಕಟ್ಟಿಕೊಡುವ ಅಪೂರ್ವ ಕಲಾವಿದರು.

ತೆಂಕು-ಬಡಗು ರಂಗದಲ್ಲಿ ಪಾತ್ರೋಚಿತವಾಗಿ ಕುಣಿತವನ್ನು ಪ್ರದರ್ಶಿಸುವ ಸಾಮಗರು ವಾಚಿಕ, ಆಂಗಿಕ ಆಹಾರ್ಯಾಭಿನಯಗಳನ್ನು ಸಮದಂಡಿಯಾಗಿ ಸ್ವೀಕರಿಸಿದವರು. ಪ್ರಸಂಗವೊಂದರ ಆಶಯಕ್ಕೆ ಪೂರಕವಾಗಿ, ಅತಿ ಚಿಕ್ಕ ಪಾತ್ರಗಳನ್ನು ಕೂಡ ಅಷ್ಟೇ ಸಮರ್ಥವಾಗಿ ನಿರ್ವಹಿಸುವಲ್ಲಿ ಸಹ ಕಲಾವಿದರನ್ನು ತಿದ್ದಿತೀಡುವ ಹೃದಯ ವೈಶಾಲ್ಯ ಇವರದ್ದು.

– ಸುಜಯೀಂದ್ರ ಹಂದೆ ಎಚ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next