ವಿಜಯಪುರ: ಬಿಜೆಪಿ ಪಕ್ಷ ಕಟ್ಟುವಲ್ಲಿ ಶ್ರಮಿಸಿದ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಮುಖ್ಯಮಂತ್ರಿ ಸ್ಥಾನದ ಅವಕಾಶವೂ ಸೇರಿದಂತೆ ರಾಜಕೀಯ ಅಧಿಕಾರ ತಪ್ಪಿಸುವಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಮೇಶ ಜಿಗಜಿಣಗಿ ಕೈವಾಡವೂ ಇದೆ ಎಂದು ಪಂಚಮಸಾಲಿ ಮುಖಂಡ ಎಂ.ಆರ್.ಪಾಟೀಲ ಬಳ್ಳೊಳ್ಳಿ ಆರೋಪಿಸಿದರು.
ಗುರುವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನದ ಚರ್ಚೆ ಸಂದರ್ಭದಲ್ಲಿ ನಮ್ಮ ಸಮಾಜದ ಹಿರಿಯ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಅರವಿಂದ ಬೆಲ್ಲದ ಅವರ ಹೆಸರುಗಳು ಮುಂಚೂಣಿಯಲ್ಲಿ ಇದ್ದವು ಎಂಬುದನ್ನು ಮಾಧ್ಯಮಗಳೇ ಹೇಳಿದ್ದವು ಎಂದರು.
ಆದರೆ ಅಧಿಕಾರ ನೀಡುವ ಹಂತದಲ್ಲಿ ಈ ಇಬ್ಬರೂ ನಾಯಕರಿಗೆ ಬಿಜೆಪಿ ಮುಖ್ಯಮಂತ್ರಿ ಸ್ಥಾನವಲ್ಲ ಕನಿಷ್ಟ ಮಂತ್ರಿ ಸ್ಥಾನವನ್ನೂ ನೀಡಲಿಲ್ಲ. ಯತ್ನಾಳ ಅವರಿಗೆ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಸ್ಥಾನದ ರಾಜಕೀಯ ಅಧಿಕಾರದ ಅವಕಾಶ ತಪ್ಪಿಸುವಲ್ಲಿ ಹಾಲಿ ಸಂಸದ, ವಿಜಯಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಕೈವಾಡವೂ ಇದೆ ಎಂದು ಆರೋಪಿಸಿದರು.
ಬಿಜೆಪಿ ಪಕ್ಷದಲ್ಲಿನ ಎರಡು ಬಣಗಳ ರಾಜಕೀಯ ಬಡಿದಾಟ, ಸಂಸದ ಜಿಗಜಿಣಗಿ ಕೈವಾಡದಿಂದ ಯತ್ನಾಳ ಅವರಿಗೆ ಮುಖ್ಯಮಂತ್ರಿ, ವಿಪಕ್ಷ ನಾಯಕನ ಸ್ಥಾನ ತಪ್ಪಿದೆ. ಪಕ್ಷವನ್ನು ಸಂಘಟಿಸುವಲ್ಲಿ ಪರಿಶ್ರಮ ಹಾಕಿದ ಈಶ್ವರಪ್ಪ ಅವರನ್ನೇ ಬಿಜೆಪಿ ಉಚ್ಚಾಟನೆ ಮಾಡಿದೆ. ಭವಿಷ್ಯದಲ್ಲಿ ಬಸನಗೌಡ ಪಾಟೀಲ ಯತ್ನಾಳ ಅವರಿಗೂ ಉಚ್ಚಾಟನೆಯ ಸ್ಥಿತಿ ಬಂದರೂ ಬರಬಹುದು ಎಂದೂ ಹೇಳಿದರು.
ನಮ್ಮ ಪಂಚಮಸಾಲಿ ಸಮಾಜದ ಬಗ್ಗೆ ಯಾವುದೇ ಕಾಳಜಿ ಇಲ್ಲದ ಸಂಸದ ರಮೇಶ ಜಿಗಜಿಣಗಿ ಚುನಾವಣೆ ಸಂದರ್ಭದಲ್ಲೂ ನಮ್ಮ ಸಮಾಜದ ಜಗದ್ಗುರು ಪೀಠಕ್ಕೆ ಭೇಟಿ ನೀಡುವಷ್ಟು ಸೌಜನ್ಯವನ್ನೂ ತೋರಿಲ್ಲ. ಹೀಗಾಗಿ ಅಂಥವರಿಗೆ ಬಲವಂತವಾಗಿ ನಮ್ಮ ಸಮಾಜ ಅಧಿಕಾರ ಕೊಡಿಸುವ ಅಗತ್ಯವಿಲ್ಲ ಎಂದರು.