Advertisement

ಸಿದ್ದು-ಡಿಕೆಶಿ ಮಾತ್ರ ಅಲ್ಲ ಇನ್ನೂ 25 ಜನ ಸಿಎಂ ಸ್ಥಾನಕ್ಕೆ ಅರ್ಹ: ಎಂ.ಬಿ.ಪಾಟೀಲ್

09:11 PM Nov 30, 2022 | Team Udayavani |

ವಿಜಯಪುರ: ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಶಕ್ತಿ ಬಂದ ಮೇಲೆ ಮುಖ್ಯಮಂತ್ರಿ ಯಾರಾಗಬೇಕು ಎಂದು ಶಾಸಕಾಂಗ ಸಭೆ ಹಾಗೂ ಹೈಕಮಾಂಡ್‌ ನಿರ್ಧರಿಸಲಿದೆ.

Advertisement

ಕಾಂಗ್ರೆಸ್‌ನಲ್ಲಿ ಡಿ.ಕೆ.ಶಿವಕುಮಾರ, ಸಿದ್ದರಾಮಯ್ಯ ಅಷ್ಟೇ ಅಲ್ಲ ಆರ್‌.ವಿ.ದೇಶಪಾಂಡೆ, ಎಚ್‌.ಕೆ.ಪಾಟೀಲ, ಕೆ.ಎಚ್‌.ಮುನಿಯಪ್ಪ, ಪರಮೇಶ್ವರ, ರಾಮಲಿಂಗಾರೆಡ್ಡಿ ಸೇರಿದಂತೆ 25ಕ್ಕೂ ಹೆಚ್ಚು ಹಿರಿಯರು ಸಿಎಂ ಸ್ಥಾನಕ್ಕೇರುವ ಅರ್ಹತೆ ಹೊಂದಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಸರ್ಕಾರ ನಡೆಸಲು 113 ಶಾಸಕರ ಬಲ ಬೇಕು. ಕಾಂಗ್ರೆಸ್‌ ಈ ಬಾರಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಅಧಿಕಾರಕ್ಕೆ ಬರಲಿದೆ. ಬಳಿಕ ಶಾಸಕಾಂಗ ಸಭೆಯಲ್ಲಿ ಮೂಡುವ ಅಭಿಪ್ರಾಯ ಸಂಗ್ರಹಿಸಿ ಪಕ್ಷದ ವೀಕ್ಷಕರು ನೀಡುವ ವರದಿ ಆಧರಿಸಿ ಹೈಕಮಾಂಡ್‌ ಸಿಎಂ ಅಭ್ಯರ್ಥಿ ಘೋಷಿಸಲಿದೆ. ಇದು ಕಾಂಗ್ರೆಸ್‌ ನೀತಿ. ರಾಜ್ಯದಲ್ಲಿ ಪರಿಶಿಷ್ಟ ಸಮುದಾಯಗಳಿಗೆ ಮೀಸಲಿರುವ ಕ್ಷೇತ್ರಗಳ ಹೊರತಾಗಿ ಯಾವುದೇ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸಲು ಅರ್ಹರಿದ್ದಾರೆ ಎಂದರು.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ಅವರು ಸಿದ್ದರಾಮಯ್ಯ ಬಗ್ಗೆ ಸಿದ್ರಾಮುಲ್ಲಾ ಖಾನ್‌ ಎಂದು ಹಗುರವಾಗಿ ಮಾತನಾಡಿರುವ ಕ್ರಮ ಖಂಡನಾರ್ಹ. ಹಾಲುಮತ ಸಮಾಜದವರು, ಅಲ್ಪಸಂಖ್ಯಾತರು ಗಂಭೀರವಾಗಿ ಪರಿಗಣಿಸಿ ಸಿಡಿದೆದ್ದರೆ ಪರಿಸ್ಥಿತಿ ಏನಾದೀತೆಂಬ ಎಚ್ಚರಿಕೆ ಇರಬೇಕು. ಸಿ.ಟಿ.ರವಿ ಕೀಳು ರಾಜಕೀಯ ಬಿಡಬೇಕು. ಪ್ರಧಾನಿ ಮೋದಿ, ಮೋಹನ ಭಾಗವತ್‌ ಅವರೇ ಹಿಂದು, ಹಿಂದುತ್ವ ಎಂಬುದು ಭಾರತೀಯರ ಜೀವನ ಶೈಲಿ ಎಂದಿದ್ದನ್ನೇ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಸುಮ್ಮನೆ ವಿವಾದ ಸೃಷ್ಟಿಸಿದ್ದರಿಂದ ಸೌಜನ್ಯಕ್ಕೆ ಕ್ಷಮೆಯಾಚಿಸಿದ್ದರೂ ಚರ್ಚೆಗೆ ಬರಲಿ ಎಂದು ಸವಾಲು ಹಾಕಿರುವುದು ಸರಿಯಲ್ಲ ಎಂದರು.

ತಾಕತ್ತಿದ್ದರೆ ಯತ್ನಾಳ ಈ ಬಾರಿ ಗೆದ್ದು ತೋರಿಸಲಿ
ವಿಜಯಪುರ: ತಲೆಗೂ ಬಾಯಿಗೂ ಸಂಪರ್ಕವೇ ಇಲ್ಲದಂತೆ ಮಾತನಾಡುವ ವಿಜಯಪುರ ನಗರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಾಕತ್ತಿದ್ದರೆ ಈ ಬಾರಿ ಗೆದ್ದು ತೋರಿಸಲಿ.

Advertisement

ವಿಜಯಪುರ ನಗರ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ ಮುಸ್ಲಿಮರಿಗೆ ಟಿಕೆಟ್‌ ನೀಡಲಿದ್ದು ಗೆದ್ದು ತೋರಿಸುತ್ತೇ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಸವಾಲು ಎಸೆದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಹುಲ್‌ ಗಾಂಧಿ ಪ್ರಧಾನಿ ಆಗಲ್ಲ ಎನ್ನಲು ಯತ್ನಾಳ ಕೈಯಲ್ಲೇನಿದೆ.

ಪ್ರಧಾನಿ ಯಾರಾಗಬೇಕು, ನಾನು ಏನಾಗಬೇಕು ಎಂದು ನಿರ್ಧರಿಸುವುದು ದೇಶ-ರಾಜ್ಯದ ಜನರೇ ಹೊರತು ಯತ್ನಾಳ ಅಲ್ಲ. ರಾಹುಲ್‌ ಗಾಂಧಿ  ಏನಾಗಲಿದ್ದಾರೆ ಎಂಬ ಮಾತಿರಲಿ, ಮೊದಲು ಈ ಬಾರಿ ಯತ್ನಾಳ ಗೆದ್ದು ಬರಲಿ. ಅವರಿಗೆ ಪಾಠ ಕಲಿಸದೇ ಬಿಡಲ್ಲ. ಜಿಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ, ಪಾಲಿಕೆ ಮೇಯರ್‌ ಚುನಾವಣೆಯಲ್ಲಿ ಏನು ಮಾಡಿದ್ದೇವೆ ಎಂಬುದನ್ನು ಯತ್ನಾಳ ಮರೆತಂತಿದ್ದಾರೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next