ಬೆಂಗಳೂರು: ಕೆಪಿಸಿಸಿ ನೂತನ ಅಧ್ಯಕ್ಷರ ಬಗ್ಗೆ ಬಹುತೇಕ ಇವತ್ತು ಅಥವಾ ನಾಳೆ ಅಧಿಕೃತವಾಗಿ ಗೊತ್ತಾಗುತ್ತದೆ. ಪಕ್ಷ ಯಾವ ತೀರ್ಮಾನ ಮಾಡುತ್ತದೋ ಅದನ್ನು ಪಾಲಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಎಂ.ಬಿ ಪಾಟೀಲ್ ಹೇಳಿದ್ದಾರೆ.
ಸದಾಶಿವನಗರದ ನಿವಾಸದ ಬಳಿ ಮಾತನಾಡಿದ ಅವರು, ವೈಯಕ್ತಿಕ ಅಭಿಪ್ರಾಯ ಬಹಳ ಇರುತ್ತದೆ. ಪಕ್ಷದ ತೀರ್ಮಾನ ಒಂದಾದರೆ ವೈಯಕ್ತಿಕ ಒಂದು ತೀರ್ಮಾನ ಇರುತ್ತದೆ. ಎಲ್ಲದಕ್ಕೂ ಕಾದು ನೋಡೋಣ, ಮುಂಚೆಯೇ ಹೇಳಲು ಆಗುವುದಿಲ್ಲ ಎಂದರು.
ಕಾರ್ಯಾಧ್ಯಕ್ಷ ನೇಮಕದ ಬೇಡಿಕೆಯ ಬಗ್ಗೆ ಸಮರ್ಥನೆ ಮಾಡಿಕೊಂಡ ಅವರು, ಕಾರ್ಯಾಧ್ಯಕ್ಷ ನೇಮಕ ಮಾಡುವುದರಿಂದ ಯಾವುದೇ ಸಮಸ್ಯೆ ಕಾಣಿಸುತ್ತಿಲ್ಲ. ಅಧ್ಯಕ್ಷರೊಬ್ಬರೇ ಎಲ್ಲ ಕಡೆಯೂ ಓಡಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಹೀಗಾಗಿ ಪಕ್ಷದ ಹಿತ ದೃಷ್ಟಿಯಿಂದ ಕಾರ್ಯಾಧ್ಯಕ್ಷ ನೇಮಕ ಮಾಡುವುದರ ಬಗ್ಗೆ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಬಹುದು ಎಂದರು.
ಕೆಪಿಸಿಸಿ ಅಧ್ಯಕ್ಷಗಿರಿಯ ಬಗ್ಗೆ ಮಾತನಾಡಿದ ಎಂ ಬಿ ಪಾಟೀಲ್, ನನ್ನನ್ನು ಅಧ್ಯಕ್ಷ ಮಾಡಬೇಕೆಂದು ನಾನ್ಯಾರಿಗೂ ಭೇಟಿ ಮಾಡಿ ಮನವಿ ಮಾಡಿಲ್ಲ. ಆದರೆ ಯಾರು ಸೂಕ್ತ ಎನ್ನುವ ಪಟ್ಟಿಯಲ್ಲಿ ನನ್ನ ಹೆಸರೂ ಸೂಚಿಸಿದ್ದಾರೆ. ಅದನ್ನೆಲ್ಲ ಹೈಕಮಾಂಡ್ ಇಂದು ಅಥವಾ ನಾಳೆ ಅಂತಿಮಗೊಳಿಸಬಹುದು ಎಂದರು.
ರಾಜ್ಯ ಸರಕಾರದ ಸಂಪುಟ ವಿಸ್ತರಣೆ ವಿಳಂಬ ವಿಚಾರದಲ್ಲಿ ಮಾತನಾಡಿದ ಅವರು, ಅದು ಅವರ ಪಕ್ಷದ ಆಂತರಿಕ ವಿಚಾರ. ಅಂದು ನಮ್ಮ ಪಕ್ಷದ ಶಾಸಕರನ್ನು ಕರೆದುಕೊಂಡು ಹೋಗಿ ಮಂತ್ರಿ ಮಾಡುವ ಆಮಿಷ ಒಡ್ಡಿದ್ದರು. ಈಗ ಮಾತಿನಂತೆ ನಡೆದುಕೊಳ್ಳಬೇಕಲ್ಲಾ. ಅವರದ್ದೇ ಸರ್ಕಾರ ಇದೆ. ಜನರೂ ಸಹ ಶಾಸಕರು ಮಂತ್ರಿ ಆಗ್ತಾರೆ ಅಂತ ಮತ ಹಾಕಿದ್ದಾರೆ ಎಂದರು.
ಪಂಚಮಸಾಲಿ ಸ್ವಾಮಿಜಿಗಳ ವಿವಾದದ ಬಗ್ಗೆ ಮಾತನಾಡಿದ ಅವರು, ಸ್ವಾಮೀಜಿ ಮಾತನಾಡಿದ್ದು ತಪ್ಪು. ತಮ್ಮ ಸಮುದಾಯಕ್ಕೆ ಬೆಂಬಲ ಕೊಡ್ಬೇಕು ಅಂತ ಕೇಳುವುದು ತಪ್ಪಲ್ಲ. ಆದರೆ ಕೊಡದಿದ್ರೆ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುವುದು ಸರಿ ಅಲ್ಲ ಅವರು ಕೇಳುವ ರೀತಿಯಲ್ಲಿ ಎಲ್ಲೋ ಸಮಸ್ಯೆ ಆಗಿದೆ ಎಂದರು.