ವಿಜಯಪುರ: ರಾಜ್ಯದಲ್ಲಿ ಜಲಸಂಪನ್ಮೂಲ ಸಚಿವರಾಗಿ ಜಲ ಸಂರಕ್ಷಣೆ ಹಾಗೂ ಪರಿಸರ ರಕ್ಷಣೆಗಾಗಿ ಕೋಟಿ ವೃಕ್ಷ ಅಭಿಯಾನದ ಮೂಲಕ ಜನಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿರುವ ಬಬಲೇಶ್ವರ ಶಾಸಕರಾದ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ರಾಜಸ್ಥಾನ ರಾಜ್ಯದ ಪ್ರಶಸ್ತಿ ದೊರಕಿದೆ.
ರಾಜಸ್ಥಾನ ರಾಜ್ಯದ ತರುಣ್ ಭಾರತ ಸಂಘದಿಂದ ಪ್ರತಿ ವರ್ಷ ನೀಡುವ ಪರ್ಯಾವರಣ ರಕ್ಷಕ ಸಮ್ಮಾನ-2019 ಪ್ರಶಸ್ತಿ ಈ ಬಾರಿ ಜಲಸಂಪನ್ಮೂಲ ಮಾಜಿ ಸಚಿವ ಎಂ. ಬಿ.ಪಾಟೀಲ್ ಅವರಿಗೆ ನೀಡಲಾಗಿದೆ.
ಎಂ.ಬಿ.ಪಾಟೀಲ ಅವರು ಪರಿಸರ ರಕ್ಷಣೆಯಲ್ಲಿ ಕೈಗೊಂಡಿರುವ ವಿವಿಧ ಕಾರ್ಯಗಳನ್ನು ಗುರುತಿಸಿ, ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಜಲಗಾಂಧಿ ಎಂದೆ ಖ್ಯಾತರಾದ ವರ್ಡ್ ವಾಟರ್ ಪ್ರೈಸ್ ವಿಜೇತ ಡಾ.ರಾಜೇಂದ್ರ ಸಿಂಗ್ ಸ್ಥಾಪಿಸಿದ ತರುಣ್ ಭಾರತ ಸಂಘ ಈ ಪ್ರಶಸ್ತಿ ನೀಡಿದೆ.
ರಾಜಸ್ಥಾನದ ಆಳ್ವಾರ್ ಜಿಲ್ಲೆಯ ಬಿಕಾಂಪುರ ಗ್ರಾಮದಲ್ಲಿ ಪ್ರತಿ ರಾಷ್ಟ್ರದಾದ್ಯಂತ ಪರಿಸರ ರಕ್ಷಣೆಯಲ್ಲಿ ತೊಡಗಿರುವ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.
ಜ.15 ರಂದು ನಡೆಯುವ ರಾಜಸ್ಥಾನದ ತರುಣ್ ಭಾರತ ಸಂಘದ ಸಮಾರಂಭದಲ್ಲಿ ಮಹಾತ್ಮಾ ಗಾಂಧಿಯವರ ಮೊಮ್ಮಗ ಅರುಣ ಗಾಂಧಿ ಅವರು ಎಂ.ಬಿ.ಪಾಟೀಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.
ಎಂ.ಬಿ.ಪಾಟೀಲ್ ಅವರು ಕರ್ನಾಟಕ ರಾಜ್ಯದ ಜಲಸಂಪನ್ಮೂಲ ಸಚಿವರಾಗಿದ್ದಾಗ ರಾಜ್ಯದಾದ್ಯಂತ ಕೈಗೊಂಡ ಕೆರೆ ತುಂಬುವ ಯೋಜನೆಗಳು ಹಾಗೂ ಕೋಟಿ ವೃಕ್ಷ ಅಭಿಯಾನ ಯೋಜನೆಗಳು ಪರಿಸರ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ.