ಬೆಂಗಳೂರು: ದೂರವಾಣಿ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ತಾವು ಯಾವುದೇ ಹೇಳಿಕೆ ನೀಡಿಲ್ಲ. ಮಾಜಿ ಗೃಹ ಸಚಿವ ಆರ್.ಅಶೋಕ್ ಹಾಗೂ ಬಿಜೆಪಿ ಸರ್ಕಾರದ ಬಗ್ಗೆ ಮಾಡಿದ್ದ ಆರೋಪವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತ ನಾಡಿದ ಅವರು, ದೂರವಾಣಿ ಕದ್ದಾಲಿಕೆ ವಿಚಾರದಲ್ಲಿ ಹಿಂದಿನ ಗೃಹ ಸಚಿವರು ರಾಜಕೀಯ ಮಾಡುತ್ತಿದ್ದಾರೆಂದು ಹೇಳಿದ್ದು, ಆರ್.ಅಶೋಕ್ ಅವರನ್ನು ಕುರಿತಾಗಿಯೇ ಹೊರತು ಎಂ.ಬಿ.ಪಾಟೀಲ್ ಅವರನ್ನು ಉದ್ದೇಶಿಸಿ ಅಲ್ಲ. ಮಾಧ್ಯಮಗಳಲ್ಲಿ ಇದು ತಪ್ಪಾಗಿ ಬಿಂಬಿತವಾಗಿದೆ ಎಂದರು.
ಹಿಂದಿನ ಮೈತ್ರಿ ಸರ್ಕಾರದ ಅವಧಿಯಲ್ಲಿ ದೂರವಾಣಿ ಕದ್ದಾಲಿಕೆ ನಡೆದಿಲ್ಲ. ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಯವರಾಗಲಿ, ಗೃಹ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಅವರಾಗಲಿ ಆ ಕೆಲಸ ಮಾಡಿಲ್ಲ. ಇದನ್ನೇ ನಾನು ಉತ್ತರ ಕರ್ನಾಟಕ ಭಾಗದ ನೆರೆಪೀಡಿತ ಭಾಗಗಳಿಗೆ ಭೇಟಿ ನೀಡಿದಾಗ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ್ದೆ. ಹೀಗಾಗಿ, ಈ ವಿಚಾರದಲ್ಲಿ ಎಂ.ಬಿ.ಪಾಟೀಲ್ ಅವರನ್ನು ಎಳೆದು ತರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.
ಎಂ.ಬಿ.ಪಾಟೀಲ್ ಹಾಗೂ ತಮ್ಮ ನಡುವೆ ತಂದಿಡುವ ಕೆಲಸ ವ್ಯವಸ್ಥಿತವಾಗಿ ನಡೆಯು ತ್ತಿದೆ. ಇದಕ್ಕೆ ಜಾತಿ ಲೇಪನವನ್ನೂ ಹಚ್ಚಲಾಗಿದೆ. ಇಂಥಹ ಪ್ರಯತ್ನ ಗಳು ಹಿಂದೆಯೂ ನಡೆದಿವೆ, ಈಗಲೂ ನಡೆಯುತ್ತಿವೆ. ಆದರೆ, ಇದರಿಂದ ತಮ್ಮಿಬ್ಬರ ಸಂಬಂಧ ಹಾಳು ಮಾಡಲು ಸಾಧ್ಯವಿಲ್ಲ. ಇದೆಲ್ಲವನ್ನೂ ದಾಟಿ ಮುನ್ನಡೆಯುವ ಮನೋಬಲ ಇಬ್ಬರಿಗೂ ಇದೆ ಎಂದು ಹೇಳಿದರು.
ಅಸ್ಸಾಂನ ಕಾಮಾಕ್ಯ ದೇವಾಲಯಕ್ಕೆ ಭೇಟಿ: ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸಮೇತ ಅಸ್ಸಾಂನ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಹೀಗಾಗಿ, ಶನಿವಾರ ರಾತ್ರಿಯೇ ಅಸ್ಸಾಂಗೆ ಶಿವಕುಮಾರ್ ಕುಟುಂಬ ತೆರಳಿದೆ. ಅಲ್ಲಿನ ಕಾಮಾಕ್ಯ ದೇವಸ್ಥಾನದಲ್ಲಿ ಶಕ್ತಿ ಪೀಠವಿದ್ದು, ಅಲ್ಲಿ ಪೂಜೆ ಮಾಡಿಸಿದರೆ ಒಳ್ಳೆಯದು ಎಂಬ ಜ್ಯೋತಿಷಿ ಸಲಹೆ ಮೇರೆಗೆ ಅವರು ಹೋಗಿದ್ದಾರೆಂದು ಮೂಲಗಳು ತಿಳಿಸಿವೆ.