ವಿಜಯಪುರ: ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರ ವಿರುದ್ಧ ಟೀಕೆ ಮಾಡಿರುವ ಎಂ.ಬಿ. ಪಾಟೀಲ ಅವರ ನಿವಾಸಕ್ಕೆ ಸಚಿವ ಕಾರಜೋಳ ಬೆಂಬಲಿಗರು ಮನೆಗೆ ಮುತ್ತಿಗೆ ಹಾಕುತ್ತಿದ್ದಾರೆ. ಶಾಸಕ ಎಂ.ಬಿ. ಪಾಟೀಲ ಅವರ ನಿವಾಸ ಹಾಗೂ ಕುಟುಂಬ ಸದಸ್ಯರಿಗೆ ಭದ್ರತೆ ನೀಡುವಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪೊಲೀಸರಿಗೆ ಮನವಿ ಸಲ್ಲಿಸಲಾಗಿದೆ.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಬರೆದ ಮನವಿಯನ್ನು ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಸಲ್ಲಿಸಿರುವ ಸಂಘಟನೆಗಳ ಮುಖಂಡರು, ಮಾಜಿ ಸಚಿವರಾಗಿರುವ ಎಂ.ಬಿ. ಪಾಟೀಲ ಸಮಸ್ತ ಲಿಂಗಾಯತ ಸಮಾಜದ ರಾಷ್ಟ್ರೀಯ ನಾಯಕರು. ಅವರ ಜನಪ್ರಿಯತೆ ಸಹಿಸದೇ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕುಮ್ಮಕ್ಕಿನಿಂದ ಅವರ ಬೆಂಬಲಿಗರು ನಗರದಲ್ಲಿರುವ ಎಂ.ಬಿ. ಪಾಟೀಲ ಅವರ ಮನೆ ಎದುರು ಧರಣಿ ನಡೆಸಿರುವುದು, ಮುತ್ತಿಗೆ ಹಾಕಲು ಯತ್ನಿಸುವಂಥ ಕೃತ್ಯಗಳನ್ನು ಮಾಡುತ್ತಿದ್ದಾರೆ. ಕಾರಣ ಕೂಡಲೇ ಪೊಲೀಸರು ಎಂ.ಬಿ. ಪಾಟೀಲ ಅವರ ಕುಟುಂಬಕ್ಕೆ ಭದ್ರತೆ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಎಂ.ಬಿ. ಪಾಟೀಲ ಅವರ ವಿರುದ್ಧ ಸಚಿವ ಕಾರಜೋಳ ಅವರು ಸುಳ್ಳು ಆರೋಪ ಮಾಡುತ್ತ, ಬೆಂಬಲಿಗರ ಮೂಲಕ ಬಹಿರಂಗವಾಗಿ ಅಸಂವಿಧಾನಿಕ ಶಬ್ದಗಳಿಂದ ನಿಂದನೆ ಮಾಡಿಸುತ್ತಿದ್ದಾರೆ. ಪಾಟೀಲ ಅವರ ಪ್ರತಿಕೃತಿ ದಹಿಸಿ ಪ್ರಚೋದನಕಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೂಡಲೇ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಪೊಲೀಸ್ ಬಿಗಿ ಭದ್ರತೆ ನೀಡಿದ್ದರೂ, ನಿರಂತರ ಬೆದರಿಕೆ ಹಾಕುತ್ತಿರುವ ಕಾರಜೋಳ ಬೆಂಬಲಿಗರು ಆತಂಕಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಪಾಟೀಲ ಅವರ ಕುಟುಂಬ ಸದಸ್ಯರಿಗೂ ಭದ್ರತೆ ಕಲ್ಪಿಸುವಂತೆ ಎಎಸ್ಪಿ ರಾಮ ಅರಸಿದ್ಧಿ ಅವರಿಗೆ ಮನವಿ ಸಲ್ಲಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಬಿ. ಸಾಲಕ್ಕಿ, ಜಿಲ್ಲಾ ಸಣ್ಣ ಕೈಗಾರಿಕೆ ಉದ್ದಿಮೆದಾರರ ಸಂಘದ ಅಧ್ಯಕ್ಷ ಡಾ| ಗಂಗಾಧರ ಸಂಬಣ್ಣಿ, ವಿಜಯಪುರ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರವೀಂದ್ರ ಬಿಜ್ಜರಗಿ, ರಾಷ್ಟ್ರೀಯ ಬಸವ ಸೇನೆಯ ಅಧ್ಯಕ್ಷ ಡಾ| ರವಿ ಬಿರಾದಾರ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಸಂತ ಹೊನಮೋಡೆ, ಪ್ರಮುಖರಾದ ಸಂತೋಷ ಬಾಲಗಾಂವಿ, ಸಿದ್ದಪ್ಪ ಬಿ. ಸಜ್ಜನ, ಎಸ್.ಡಿ. ಗುಡ್ಡೋಡಗಿ, ಜಯಣ್ಣ ಎಸ್. ತಾಳಿಕೋಟಿ ಇದ್ದರು.