Advertisement

ಎಂ. ಬಿ. ಪಾಟೀಲ್‌ಗೆ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ?

11:13 PM Nov 03, 2021 | Team Udayavani |

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಒಂದೂವರೆ ವರ್ಷ ಇರುವಾಗಲೇ ಕಾಂಗ್ರೆಸ್‌ನಲ್ಲಿ ತೆರೆಮರೆಯಲ್ಲಿ ಚಟುವಟಿಕೆ ಜೋರಾಗಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆಯಿಂದಾಗಿ ಲಿಂಗಾಯತರಲ್ಲಿ ಮೂಡಿರುವ ಗೊಂದಲ ಹಾಗೂ ಅಸಮಾಧಾನವನ್ನು ತನ್ನ ಕಡೆಗೆ ಮತವಾಗಿ ಪರಿವರ್ತಿಸಲು ಕಾಂಗ್ರೆಸ್‌ ಶ್ರಮಿಸುತ್ತಿದ್ದು, ಅದಕ್ಕಾಗಿಯೇ ಎಂ.ಬಿ. ಪಾಟೀಲರನ್ನು ಮುಂದಿಡಲು ಕಾಂಗ್ರೆಸ್‌ ಚಿಂತನೆ ನಡೆಸಿದೆ.

Advertisement

ಯಡಿಯೂರಪ್ಪ ಅವರ ಕಾರಣಕ್ಕಾಗಿ ಲಿಂಗಾಯತ ಸಮುದಾಯ ಬಿಜೆಪಿ ಪರವಾಗಿದೆ ಎಂಬ ಅಭಿಪ್ರಾಯ ರಾಜ್ಯ ರಾಜಕಾರಣದಲ್ಲಿದೆ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಮೇಲೆ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರು ಯಾರಾಗುತ್ತಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.

ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ ಬಸವರಾಜ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿದ್ದರೂ, ಯಡಿಯೂಪ್ಪರನ್ನು ಅವಧಿ ಪೂರ್ವದಲ್ಲಿಯೇ ಸಿಎಂ ಸ್ಥಾನದಿಂದ ಕೆಳಗಿಳಿಸಿರುವ ಬಗ್ಗೆ ವೀರಶೈವ ಲಿಂಗಾಯತ ಸಮುದಾಯದಲ್ಲಿ ಬೇಸರವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಮುಂದಿನ ಚುನಾವಣೆ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಒಲವು ಯಾವ ಕಡೆ ವಾಲುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಚಿತ್ರಣ ದೊರೆತಿಲ್ಲ ಎನ್ನಲಾಗುತ್ತಿದೆ.

ಈಗ ಉಂಟಾಗಿರುವ ಲಿಂಗಾಯತ ಸಮುದಾಯದ ನಾಯಕತ್ವದ ಕೊರತೆಯನ್ನು ನೀಗಿಸುವ ಮೂಲಕ ಕಾಂಗ್ರೆಸ್‌ ವೀರೇಂದ್ರ ಪಾಟೀಲರ ಬಳಿಕ ತನ್ನಿಂದ ದೂರ ಸರಿದಿರುವ ವೀರಶೈವ ಲಿಂಗಾಯತ ಸಮುದಾಯವನ್ನು ತನ್ನತ್ತ ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:3 ವರ್ಷಗಳಲ್ಲಿ 10000 ಇವಿ ಚಾರ್ಜಿಂಗ್‌ ಕೇಂದ್ರ ಸ್ಥಾಪನೆ

Advertisement

2023ರ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷ ಒಕ್ಕಲಿಗ ಸಮುದಾಯದ ಡಿ.ಕೆ.ಶಿವಕುಮಾರ್‌, ವಿಪಕ್ಷದ ನಾಯಕ ಕುರುಬ ಸಮುದಾಯ ತಾವು (ಸಿದ್ದರಾಮಯ್ಯ) ಹಾಗೂ ಲಿಂಗಾಯತ ಸಮುದಾಯದ ಎಂ.ಬಿ.ಪಾಟೀಲರಿಗೆ ಚುನಾವಣ ಪ್ರಚಾರ ಸಮಿತಿ ಜವಾಬ್ದಾರಿ ವಹಿಸಿದರೆ ರಾಜ್ಯದ ಪ್ರಮುಖ ಸಮುದಾಯಗಳ ಮತಗಳನ್ನು ಸೆಳೆಯಲು ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರವನ್ನು ಸೋನಿಯಾ ಗಾಂಧಿಗೆ ವಿವರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಸೋನಿಯಾ ಗಾಂಧಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸೋನಿಯಾ ಜತೆ ಸಿದ್ದರಾಮಯ್ಯ ಚರ್ಚೆ
ಇತ್ತೀಚೆಗೆ ದಿಲ್ಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆಗೆ ರಾಜ್ಯ ರಾಜಕಾರಣದ ಸದ್ಯದ ಸ್ಥಿತಿ ಹಾಗೂ ಮುಂಬರುವ ವಿಧಾನಸಭೆ ಚುನಾವಣೆ ಕುರಿತಂತೆ ಸುದೀರ್ಘ‌ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಲಿಂಗಾಯತ ಸಮುದಾಯದ ಪ್ರಬಲ ನಾಯಕ ಎಂ.ಬಿ. ಪಾಟೀಲರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನ ನೀಡಬೇಕೆಂಬ ಕುರಿತು ಚರ್ಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

-ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next