Advertisement

ಚಾ.ನಗರ ಜಿ.ಪಂ.ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎಂ.ಅಶ್ವಿನಿ ಅವಿರೋಧ ಆಯ್ಕೆ

07:21 PM May 30, 2020 | Sriram |

ಚಾಮರಾಜನಗರ: ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಎಂ.ಅಶ್ವಿನಿ ಶನಿವಾರ ಅವಿರೋಧವಾಗಿ ಆಯ್ಕೆಯಾದರು.

Advertisement

ನಗರದ ಜಿ.ಪಂ. ಸಭಾಂಗಣದಲ್ಲಿ ನಡೆದ ವಿಶೇಷ ಚುನಾವಣಾ ಸಭೆಯಲ್ಲಿ ಚುನಾವಣಾಧಿಕಾರಿಯಾದ ಪ್ರಾದೇಶಿಕ ಆಯುಕ್ತ ಎನ್. ಜಯರಾಂ ಅವರು ಅಶ್ವಿನಿ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು.

ಶಿವಮ್ಮ ಅವರ ರಾಜೀನಾಮೆಯಿಂದ ತೆರವಾಗಿದ್ದ ಜಿ.ಪಂ.ಅಧ್ಯಕ್ಷರ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು. ತೆರಕಣಾಂಬಿ ಜಿ.ಪಂ. ಕ್ಷೇತ್ರದ ಸದಸ್ಯೆ ಎಂ.ಅಶ್ವಿನಿ ಅವರೊಬ್ಬರೇ ನಾಮಪತ್ರ ಸಲ್ಲಿಸಿದ್ದರು.

ಚಾಮರಾಜನಗರ ಜಿಲ್ಲಾ ಪಂಚಾಯಿತಿಯಲ್ಲಿ ಒಟ್ಟು 23 ಸದಸ್ಯ ಬಲವಿದೆ. 2016ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 14 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿತ್ತು. ಬಿಜೆಪಿ 9 ಸ್ಥಾನಗಳನ್ನು ಹೊಂದಿದೆ.

ಸರ್ಕಾರದ ಹೊಸ ನಿಯಮದಂತೆ ಐದು ವರ್ಷದ ಅವಧಿಗೂ ಜಿ.ಪಂ. ಆಡಳಿತದ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ. ಮೊದಲು ಹರದನಹಳ್ಳಿ ಕ್ಷೇತ್ರದ ಎಂ. ರಾಮಚಂದ್ರ ಅಧ್ಯಕ್ಷರಾಗಿದ್ದರು. ರಾಮಚಂದ್ರ ಬಿಜೆಪಿಗೆ ಸೇರ್ಪಡೆಯಾಗಿ ರಾಜೀನಾಮೆ ನೀಡಿದ ನಂತರ, ಪಾಳ್ಯ ಕ್ಷೇತ್ರದ ಶಿವಮ್ಮ ಅಧ್ಯಕ್ಷರಾಗಿದ್ದರು. 36 ತಿಂಗಳ ಅವಧಿಯಲ್ಲಿ 18 ತಿಂಗಳು ಶಿವಮ್ಮ, ಇನ್ನು 18 ತಿಂಗಳು ಅಶ್ವಿನಿ ಅವರಿಗೆ ಅಧ್ಯಕ್ಷ ಸ್ಥಾನ ನೀಡಲು ಪಕ್ಷದೊಳಗೆ ಒಪ್ಪಂದ ಆಗಿತ್ತು. ಶಿವಮ್ಮ ರಾಜೀನಾಮೆ ನೀಡಲು ವಿಳಂಬ ಮಾಡಿ, ನಂತರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡಿದ್ದರು.
ನೂತನ ಜಿ.ಪಂ.ಅಧ್ಯಕ್ಷೆ ಎಂ.ಅಶ್ವಿನಿ ಮಾತನಾಡಿ, ಎಲ್ಲ ಸದಸ್ಯರ ವಿಶ್ವಾಸ ಪಡೆದು ಜಿಲ್ಲೆಯಲ್ಲಿ ಕುಡಿಯುವ ನೀರು, ಸ್ವಚ್ಚತೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಜಿಲ್ಲೆಯ ಅಭಿವೃದ್ದಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.

Advertisement

ಇಂದು ನಾನು ಜಿ.ಪಂ.ಸದಸ್ಯೆಯಾಗಿ ಅಧ್ಯಕ್ಷಳಾಗಲು ಮಾಜಿ ಸಚಿವ ದಿ. ಹೆಚ್.ಎಸ್.ಮಹದೇವಪ್ರಸಾದ್ ಅವರು ಕಾರಣಕರ್ತರು. ಈ ಅವರನ್ನು ಸ್ಮರಿಸಿಕೊಳ್ಳುತ್ತೇನೆ ಎಂದರು.

ಪ್ರಾದೇಶಿಕ ಆಯುಕ್ತರ ವಿರುದ್ದ ಸದಸ್ಯರ ಆಕೊ್ರೀಶ : ನೂತನ ಅಧ್ಯಕ್ಷೆ ಅಶ್ವಿನಿ ಅವರನ್ನು ವೇದಿಕೆಗೆ ಕರೆದು ಹೂಗುಚ್ಚ ನೀಡಿ ಸ್ವಾಗತಿಸಿಲ್ಲ ಎಂದು ಆರೋಪಿಸಿ ಪ್ರಾದೇಶಿಕ ಆಯುಕ್ತ ಜಯರಾಮ್ ವಿರುದ್ದ ಸದಸ್ಯರು ಪ್ರತಿಭಟಿಸಿದರು.

ಜಿ.ಪಂ.ಸಿಇಒ ಭೋಯರ್‌ಹರ್ಷಲ್ ಅವರು ಸದಸ್ಯರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದ ಮೇಲೆ ಪ್ರತಿಭಟನೆ ಕೈ ಬಿಟ್ಟು ಅಧ್ಯಕ್ಷರು ವೇದಿಕೆ ಹತ್ತಿ ಇಓ, ಪ್ರಭಾರ ಅಧ್ಯಕ್ಷರು, ಸದಸ್ಯರಿಂದ ಅಭಿನಂದನೆ ಸ್ವೀಕರಿಸಿದರು.

ಚುನಾವಣಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ, ಜಿ.ಪಂ.ಸಿಇಒ ಭೋಯರ್‌ಹರ್ಷಲ್ ನಾರಾಯಣ್‌ರಾವ್, ಹೆಚ್ಚುವರಿ ಆಯುಕ್ತೆ ಕೆ.ಎಂ.ಗಾಯತ್ರಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರು ಹಾಜರಿದ್ದರು. ಕಾಂಗ್ರೆಸ್ ಸದಸ್ಯೆ ಶಿವಮ್ಮ, ಬಿಜೆಪಿ ಸದಸ್ಯರಾದ ಬಾಲರಾಜ್, ಇಷ್ರತ್‌ಬಾನು ಗೈರಾಗಿದ್ದರು.

ಸನ್ಮಾನ : ನೂತನ ಅಧ್ಯಕ್ಷರನ್ನು ಪ್ರಭಾರ ಅಧ್ಯಕ್ಷ ಕೆ.ಎಸ್.ಮಹೇಶ್, ಸದಸ್ಯರಾದ ಕೆರೆಹಳ್ಳಿನವೀನ್, ಬೊಮ್ಮಯ್ಯ ಬಸವರಾಜು, ಶಶಿಕಲಾಸೋಮಲಿಂಗಪ್ಪ, ಕೆ.ಪಿ.ಸದಾಶಿವಮೂರ್ತಿ, ಯೋಗೇಶ್ ಇತರರು ಅಭಿನಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next