Advertisement

ಮಾ. 29: ಗಡಿನಾಡ ದಾನಿ ಸಾಯಿರಾಂ ಭಟ್ಟರಿಗೆ ಹುಟ್ಟೂರ ಗೌರವಾರ್ಪಣೆ 

05:18 PM Mar 28, 2018 | |

ಬದಿಯಡ್ಕ: ಆತ್ಮತೃಪ್ತಿಗಾಗಿ ಮಾಡುವ ಸಮಾಜ ಸೇವೆ, ಸರಳತೆಯ ಪ್ರತಿರೂಪ, ಕಾರುಣ್ಯ ಮೂರ್ತಿ ಯೊಬ್ಬರು
ನಮ್ಮ ನಡುವೆ ಮೌನವಾಗಿದ್ದು ಬಡವರ, ನಿರಾಶ್ರಿತರ ಬದುಕಿನಲ್ಲಿ ಬೆಳಕುಹರಿಸಿ ಇತರರಿಗಾಗಿ ಬದುಕುವ ಪರಂಪರೆಯ ಕೊಂಡಿ ಯಾಗಿ ಉಳಿದಿರು ವುದು ನಂಬಲೇ ಬೇಕಾದ ಸತ್ಯ. ಪ್ರಚಾರಪ್ರಿಯರಲ್ಲದ ಈ ದಿವ್ಯ ವ್ಯಕ್ತಿತ್ವವನ್ನು ತಿಳಿಯದವರು ಬಹಳ ವಿರಳ. ಅವರ ತ್ಯಾಗವನ್ನು, ಬಡಜನರ ಕಣ್ಣೀರೊರೆಸುವ ಸೇವೆಯನ್ನು, ಯುವಕ ಯವತಿಯರಿಗೆ ಬದುಕು ಕಟ್ಟಿಕೊಟ್ಟ ಅವರ ದಾನವನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ. ಅವರು ಎಲ್ಲರಿಗೂ ಚಿರಪರಿಚಿತರಾಗಿರುವ ಮೇರು ವ್ಯಕ್ತಿತ್ವದ ವ್ಯಕ್ತಿ ಸಾಯಿರಾಂ ಭಟ್‌ ಕಿಳಿಂಗಾರ್‌.

Advertisement

ಸಾಯಿರಾಂ ಭಟ್‌ ಎಂಬ ಕೊಡುಗೈ ದಾನಿ ತನ್ನ ಬದುಕನ್ನೇ ದಾನಧರ್ಮಗಳಿಗಾಗಿ ಮೀಸಲಿಟ್ಟವರು. ಸಾಯಿ ಭಕ್ತರಾ
ಗಿದ್ದು ಎಲ್ಲರನ್ನೂ ಬಹಳ ಪ್ರೀತಿಯಿಂದ ಮಾತನಾಡಿಸುವ ಇವರ ಜೀವನರೀತಿ ಅನುಕರಣೀಯವಾದುದು. ಬಡವರ
ನೋವನ್ನು ದೂರಮಾಡಿ, ನಿರ್ಗತಿಕರ ಪಾಲಿನ ದೇವರಾಗಿ, ನಿರುದ್ಯೋಗಿಗಳ ಬದುಕಿನ ಆಶಾಕಿರಣವಾಗಿರುವ ಭಟ್‌
ಅವರು ಸಮಾಜಕ್ಕೆ ನೀಡಿದ, ನೀಡುತ್ತಿರುವ ಕೊಡುಗೆಗೆ ಸಾಟಿಯಿಲ್ಲ.

ಮಧ್ಯಮ ವರ್ಗದ ಕೃಷಿಕನಾಗಿದ್ದ ಸಾಯಿರಾಂ ಭಟ್ಟರಿಗೆ ಕಾಶಿಯಾತ್ರೆ ಒಂದು ಕನಸಾಗಿತ್ತು. ಆದರೆ 1995ರಲ್ಲಿ
ಕಾಶಿ ಯಾತ್ರೆಗೆ ಕೋಡಿಟ್ಟ ಹಣವನ್ನು ಕುಂಟಿಯಾನನೆಂಬ ದಿಕ್ಕೆಟ್ಟ ನಿರ್ಗತಿಕನ ಕಣ್ಣೀರೊರೆಸಲು ಉಪಯೋಗಿಸುವ
ಕಲ್ಪನೆಯೇ ಇರಲಿಲ್ಲ ಅವರಿಗೆ. ಮಳೆಗಾಲದ ಬಿಡದೆ ಸುರಿವ ಮಳೆ, ಗಾಳಿಯ ರಭಸಕ್ಕೆ ಹಾರಿಹೋದ ಸೂರು, ಅಳುತ್ತಾ ನಿಂತಿರುವ ಪುಟ್ಟ ಮಕ್ಕಳು, ಕೇವಲ ಮಡಲು ಕೇಳಲು ಬಂದ ಕುಂಟಿಯಾನನಿಗೆ ಮನೆ ನಿರ್ಮಿಸಿಕೊಡಲು ಕಾರಣವಾಯಿತು. ಇದು ಮೊದಲ ವಸತಿದಾನ. ಇಂದೀಗ ಸುಮಾರು 280 ದಾಟಿದೆ ಎಂದರೆ ನಂಬಲೇಬೇಕು. ಕಾಶಿ ಯಾತ್ರೆಯ ಕನಸು ಕೈಬಿಟ್ಟ ಭಟ್ಟರು ಈಗ ಸಾವಿರಾರು ಕಾಶಿ ಯಾತ್ರೆ ಮುಗಿಸಿದ ಸಂತೃಪ್ತಿಯಲ್ಲಿದ್ದಾರೆ.

ಮನೆ, ನೀರು, ಉದ್ಯೋಗ, ಚಿಕಿತ್ಸೆ ಎಲ್ಲವನ್ನೂ ಒಂದೇ ಸೂರಿನಡಿಯಲ್ಲಿ ಒದಗಿಸುವ ಸಾಯಿರಾಂ ಭಟ್‌ ಸಾಯಿಭಕ್ತರು. ಅಂತೆಯೇ ಹನುಮಂತನ ಭಕ್ತರೂ ಹೌದು. ಆ ಕಾಲದಲ್ಲಿ 8ನೇ ಕ್ಲಾಸು ಓದಿರುವ ಭಟ್ಟರಿಗೆ ಪೌರೋಹಿತ್ಯ, ನಾಟಿವೈದ್ಯದಲ್ಲಿ ದೀರ್ಘ‌ಕಾಲದ ಅನುಭವವಿದೆ. ತಾಲೀಮು ಅಭ್ಯಸಿಸಿ ಸಹಸ್ರಾರು ಶಿಷ್ಯರನ್ನೂ ರೂಪಿಸಿದ್ದಾರೆ. ಸರ್ಕಸ್‌ ಕಂಪೆನಿಯಲ್ಲಿ ಶ್ರೇಷ್ಠ ಅಭ್ಯಾಸಿ ಎನ್ನುವ ಗೌರವವನ್ನೂ ಪಡೆದಿದ್ದು ದಿನದ ಒಂದು ಭಾಗವನ್ನು ಯೋಗ, ಧ್ಯಾನಕ್ಕೆ ಮೀಸಲಿಡುತ್ತಿದ್ದರು. 

ಶ್ರೇಷ್ಠ ಕೃಷಿಕರೂ ಆಗಿರುವ ಇವರ ಪರಿಸರ ಪ್ರೇಮ ಅವರ ಮನೆಯ ಸುತ್ತಮುತ್ತ ಹಚ್ಚಹಸಿರಾಗಿ ನಳನಳಿಸುವ ಗಿಡಮರಬಳ್ಳಿಗಳೇ ಸಾರಿ ಹೇಳುತ್ತವೆ. ಆ ಹಿತ್ತಿಲಲ್ಲಿ ಏನಿದೆ ಏನಿಲ್ಲ ಎಂಬುವಂತಿಲ್ಲ. ಹತ್ತು ಹಲವು ಬಗೆಯ ಹಣ್ಣಿನ ಮರಗಳು, ತರಕಾರಿ ತೋಟ, ಉತ್ತಮೋತ್ತಮ ಗುಣಮಟ್ಟದ ಮರಗಳು, ವಿವಿಧ ರಂಗುರಂಗಿನ ಹೂಗಳ ನೀಡುವ ಗಿಡಗಳು ಅವರ ಕಾಳಜಿಗೆ, ಪರಿಸರ ಪ್ರೇಮಕ್ಕೆ ತಲೆಬಾಗುತ್ತಿವೆ. ಸಾಯಿನಿಲಯಕ್ಕೆ ಬರುವ ಎಲ್ಲರಿಗೂ ಮಾವು ಹಾಗೂ ಹಲಸಿನ ಎರಡು ಗಿಡಗಳನ್ನು ನೀಡುತ್ತಾರೆ. 

Advertisement

ಹೀಗೆ ಸಹಸ್ರಾರು ಗಿಡಮರಗಳನ್ನು ವಿತರಿಸಿದ್ದಾರೆ. ಪ್ರಕೃತಿಯೊಂದಿಗೆ ಬೆರೆತಾಗ ಹಾಗೂ ನಿರಾಶ್ರಿತರಿಗೆ ನೆರವಾದಾಗ ಮನಸ್ಸಿಗೆ ದೊರೆಯುವ ವಿಶೇಷವಾದ ಮುದವನ್ನು ಅನುಭವಿಸುವ 80 ದಾಟಿದ ಸಾಯಿರಾಂ ಭಟ್ಟರ ಮುಖದಲ್ಲಿ ಸದಾ ನಗು ಕಂಗೊಳಿಸುತ್ತಿರುತ್ತದೆ.

ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿದರೂ 10 ನಿಮಿಷ ಮೊದಲೇ ಬಂದುತಲುಪುವ ಭಟ್ಟರಿಗೆ ಸಂಘಟಕರು ಕಳುಹುವ ಐಷಾರಾಮಿ ಕಾರಿಗಿಂತ ಅವರೇ ದಾನವಾಗಿ ನೀಡಿರುವ ಬಾಲಕೃಷ್ಣ ಅವರ ಭಾಗ್ಯಲಕ್ಷ್ಮೀ ಎಂಬ ಆಟೋವೇ ಇಷ್ಟ. ಇವರ ನಿತ್ಯ ಪ್ರಯಾಣ ಇದರಲ್ಲೆ. ಬದುಕಿನುದ್ದಕ್ಕೂ ಸರಳತೆ ಉಳಿಸಿಕೊಂಡಿರುವ ಭಟ್ಟರು ಸಜ್ಜನಿಕೆಯ ಪ್ರತಿರೂಪ.

ಸಾಯಿರಾಂ ಭಟ್ಟರಂತೆ ಅವರ ಕುಟುಂಬವೂ ಸಮಾಜದ ನೋವುನಲಿವಿಗೆ ಮನಸ್ಸುಳ್ಳವರು. ಪತ್ನಿ ಶಾರದಮ್ಮಾ ಸದಾ
ಹಸನ್ಮುಖೀಯಾಗಿದ್ದು ಇವರ ಪ್ರತಿಯೊಂದು ಚಟುವಟಿಕೆಗಳಲ್ಲೂ ಕೈಜೋಡಿಸುತ್ತಿದ್ದಾರೆ. ಓರ್ವ ಮಗ ಹಾಗೂ ಇಬ್ಬರು ಹೆಣ್ಣುಮಕ್ಕಳ ಸಂತೃಪ್ತ ಕುಟುಂಬ. ಮಕ್ಕಳು ಮೊಮ್ಮಕ್ಕಳು ಸೊಸೆ ಹಾಗೂ ಅಳಿಯಂದಿರೂ ತಾವು ಸಂಪತ್ತನ್ನು ಪೋಲಾಗಿಸಿ ಐಷಾರಾಮಿ ಬದುಕು ಸಾಗಿಸದೆ ಸರಳತೆ ಯನ್ನು ಅಳವಡಿಸುವುದರ ಮೂಲಕ ಮಾದರಿ ಯಾಗಿರುವುದು ಇನ್ನೊಂದು ವಿಶೇಷ. ಅಪ್ಪನಿಗೆ ತಕ್ಕಮಗನಾಗಿ ರುವ ಕೃಷ್ಣ ಭಟ್‌ ಸಾಯಿರಾಂ ಭಟ್‌ರವರು ಕೈಗೊಂಡಿದ್ದ ಸಮಾಜ ಸೇವಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ. ಬದಿಯಡ್ಕ ಪಂಚಾಯತ್‌ ಅಧ್ಯಕ್ಷರಾಗಿರುವ ಇವರು ಸಾಯಿ ಕೊಕ್ಕೋ ಟ್ರೇಡರ್ಸ್‌ನ ಡೀಲರ್‌. ಜತೆಗೆ ಶ್ರಮಜೀವಿ ಕೃಷಿಕ.

ಸಾಯಿರಾಂ ಭಟ್ಟರ ಬದುಕೇ ಒಂದು ಪುಸ್ತಕ. ಆ ಮೇರು ವ್ಯಕ್ತಿತ್ವವನ್ನು ಕರ್ನಾಟಕ ಸರಕಾರದ ಪಠ್ಯ ಕ್ರಮದಲ್ಲಿ ಭಟ್ಟರ
ಬದುಕು ಕಲಿಕೆ ವಿಷಯವಾಗಿರುವುದು ಹೆಮ್ಮೆಯ ವಿಷಯ. ಕಾರುಣ್ಯ ಸೇವೆಯ ಜಾತ್ಯತೀತ ರಾಯಭಾರಿ ಭಟ್ಟರ ಬದುಕನ್ನು ದಾನಗಂಗೆ ಎಂಬ ಪುಸ್ತಕದಲ್ಲಿ ಪತ್ರಕರ್ತ, ಬರಹಗಾರ ರವಿ ನಾಯ್ಕಪು ಕೈರಳಿ ಪ್ರಕಾಶನ ಸುಬ್ಬಯ್ಯಕಟ್ಟೆ ಮೂಲಕ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಮಾರ್ಚ್‌ 29ರಂದು ಬದಿಯಡ್ಕದ ಸರಕಾರಿ ಪ್ರೌಢಶಾಲೆಯಲ್ಲಿ ಅಪರಾಹ್ನ 2.00 ಗಂಟೆಗೆ ಈ ಮಹಾದಾನಿಗೆ ಹುಟ್ಟೂರ ಪೌರ ಸಮ್ಮಾನ ನಡೆಯಲಿದೆ. 

ನಿರುದ್ಯೋಗಿಗಳ ಆಶಾಕಿರಣ
ಈ ಊರಿನ ಯುವಕ ಯುವತಿಯರಿಗೆ ಜೀವನಮಾರ್ಗವನ್ನು ತೋರಿಸಿ ಕೊಟ್ಟವರು ಸಾಯಿರಾಂಭಟ್ಟರು. ಈಗಾಗಲೇ ನೂರಾರು ಯುವಕರಿಗೆ ಅಟೋ ರಿಕ್ಷಾ ವನ್ನು ದಾನಮಾಡಿದ್ದಾರೆ. ರಿಕ್ಷಾ ಓಡಿಸಿ ದೊರೆತ ಹಣದಿಂದ ಅವರು ಬದುಕು ಸಾಗಿಸುತ್ತಿದ್ದು ಯುವತಿಯರು ತಮಗೆ ದಾನವಾಗಿ ದೊರೆತ ಹೊಲಿಗೆಯಂತ್ರದಿಂದ ಜೀವನಮಾರ್ಗವನ್ನು ಕಂಡುಕೊಂಡಿರುವುದು ಈ ಪರಮದಾನಿಯ ಮಾನವೀಯತೆಗೆ ಕನ್ನಡಿ ಹಿಡಿದಂತಿದೆ.

ಜೀವಜಲ
ಬೇಸಗೆ ಬಂತೆಂದರೆ ಹತ್ತಾರು ಮೈಲು ಕೊಡಪಾನಹಿಡಿದು ನಡೆಯುವ ಜನರು ಅಥವಾ ಯಾವಾಗಲಾದರೊಮ್ಮೆ ಬರುವ ಪಂಚಾಯತ್‌ನ ನೀರಿಗೆ ಕಾದುಕುಳಿತುಕೊಳ್ಳುವ ಜನರ ಪಾಡು ಹೇಳತೀರದು. ಇದನ್ನು ಅರ್ಥೈಸಿದ ಭಟ್ಟರು ಜನರಿಗೆ ಜೀವಜಲವನ್ನು ಒದಗಿಸುವ ತೀರ್ಮಾನವನ್ನು ಕೈಗೊಂಡರು. ತನ್ನ ಮಗನ ನೆರವಿನೊಂದಿಗೆ ಮೊದಲ ಯೋಜನೆಯನ್ನು ಹಾಕಿಕೊಂಡರು. ಆ ನಂತರ ಬ್ಯಾಂಕ್‌ ಹಾಗೂ ಬದಿಯಡ್ಕ ಪಂಚಾಯತ್‌ನ ನೆರವಿನೊಂದಿಗೆ ಸುಮಾರು 11 ಕುಡಿಯುವ ನೀರಿನ ಯೋಜನೆಯನ್ನು ಯಶಸ್ವಿಯಾಗಿ ಪೂರ್ತಿಗೊಳಿಸಲಾಯಿತು. ಆ ಮೂಲಕ ಈ ಊರಿನ ಬಹುದೊಡ್ಡ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಯಿತು.

ಮಾಂಗಲ್ಯ ಭಾಗ್ಯ
ಬಡ ಹೆಣ್ಣುಮಕ್ಕಳಿಗೆ ಕಂಕಣ ಭಾಗ್ಯವನ್ನು ನೀಡಿರುವ ಸಾಯಿರಾಂ ಭಟ್‌ ಅವರು ಈಗಾಗಲೇ 24 ತರುಣಿಯರಿಗೆ ವಿವಾಹದ ಕನಸನ್ನು ನನಸಾಗಿಸಿದ್ದಾರೆ. ಕಿಳಿಂಗಾರಿನಲ್ಲಿರುವ ಸಾಯಿಮಂದಿರದಲ್ಲಿ ನಡೆಯುವ ವಿವಾಹ ಸಮಾರಂಭಕ್ಕೆ ಚಿನ್ನ, ಬಟ್ಟೆ, ಊಟೋಪಚಾರ ಎಲ್ಲವೂ ಇವರದೇ ಕರುಣೆ.

ವೈದ್ಯಕೀಯ ಶಿಬಿರ
ಕಿಳಿಂಗಾರಿನ ಅವರದ್ದೇ ಸಾಯಿಮಂದಿರದಲ್ಲಿ ಪ್ರತಿವಾರ ಮೆಗಾ ವೈದ್ಯಕೀಯ ಶಿಬಿರವು ನಡೆಯುತ್ತದೆ. ಅನೇಕ ವರ್ಷಗಳಿಂದ ಈ ಉಚಿತ ಶಿಬಿರವು ನಡೆಯುತ್ತಿದ್ದು ದಕ್ಷಿಣ ಕನ್ನಡ, ಉತ್ತರ ಕೇರಳದ ನುರಿತ ವೈದ್ಯರು ಪಾಲ್ಗೊಳ್ಳುತ್ತಾರೆ. ಬೆಲೆ ಬಾಳುವ, ಉತ್ಕೃಷ್ಟ ಗುಣಮಟ್ಟದ ಔಷಧಿಗಳು ಉಚಿತವಾಗಿ ವಿತರಿಸಲ್ಪಡುತ್ತವೆ. ಬಡಜನರಿಗೂ ಸೂಕ್ತ ಚಿಕಿತ್ಸೆ ನೀಡುವುದೇ ಇವರ ಉದ್ಧೇಶ. ಈ ಎಲ್ಲ ಕಾರ್ಯಗಳಿಗೂ, ದಾನಧರ್ಮಗಳಿಗೂ ಯಾವುದೇ ಜಾತಿ ಮತದ ಬಂಧನವಿಲ್ಲ. ಇಲ್ಲಿ ಮತವಲ್ಲ ಮಾನವೀಯತೆಗೆ ಮಣೆಹಾಕಲಾಗುತ್ತದೆ. ಸೀತಾಂಗೋಳಿಯಲ್ಲಿ ಕಾರ್ಯಾಚರಿಸುವ ಹರಿಪ್ರಸಾದ್‌ ಆಯುರ್ವೇದಿಕ್‌ ಮದ್ದಿನಂಗಡಿ ಸಂಜೀವ ರೈಯವರಿಗೆ ಸಾಯಿರಾಂ ಭಟ್ಟರ ಔದಾರ್ಯ. 

ವಸತಿ ದಾನಿ ಮನೆ ಮಾತ್ರ ಸಿಂಪಲ್‌
ಬಡವರಿಗೆ ಮನೆ ಕೊಡುವ ಸ್ವಾಮಿ ಎಂದೇ ಸಾಮಾನ್ಯ ಜನರು ಗುರುತಿಸುವ ಭಟ್ಟರು ಈಗಾಗಲೇ ಸುಮಾರು 249ರಷ್ಟು ಮನೆಗಳನ್ನು ದಾನ ಮಾಡಿದ್ದಾರೆ. ಅದೆಷ್ಟೋ ನಿರ್ಗತಿಕರಿಗೆ ಸೂರು ನೀಡಿ ಅದ್ಭುತ ಸೃಷ್ಟಿಸಿರುವ ಇವರೇನೂ ಭವ್ಯ ಬಂಗಲೆಯಲ್ಲಿ ವಾಸಿಸುವವರಲ್ಲ. ಸಿಮೆಂಟು ನೆಲದ ಸಾಮಾನ್ಯ ತಾರಸಿ ಮನೆಯಲ್ಲಿ ಮರದ ಕುರ್ಚಿ ಗಳು, ಹಾಳೆಯ ಬೀಸಣಿಕೆಗಳದೇ ಕಾರುಬಾರು. ಆಡಂಬರದ ಬದುಕನ್ನು ಅನುಸರಿಸಿದವರಲ್ಲ. ಮನೆ ಪರಿಸರವನ್ನು ಹಚ್ಚ ಹಸುರಾಗಿಸಿರುವ ಇವರ ಮನೆಯಲ್ಲಿ ಅದೇನೋ ಪ್ರಶಾಂತತೆ ಅನುಭವಕ್ಕೆ ಬರುತ್ತದೆ. ಮನೆಯೆಂದರೆ ಅಲಂಕಾರಕ್ಕಿರುವ, ನಮ್ಮ ಸಂಪತ್ತಿನ ಪ್ರಚಾರಕ್ಕಿರುವ ಮಾಧ್ಯಮವಲ್ಲ ಬದಲಾಗಿ ಅದೊಂದು ಅನಿವಾರ್ಯ ಘಟಕ ಎಂಬುದನ್ನು ಇವರು ಸಮಾಜಕ್ಕೆ ಬೋಧಿಸಿರುತ್ತಾರೆ. ಇದು ಅವರ ಹೃದಯ ವೈಶಾಲ್ಯಕ್ಕೆ ಸಾಕ್ಷಿ.

ಅಖಿಲೇಶ್  ನಗುಮುಖಂ 

Advertisement

Udayavani is now on Telegram. Click here to join our channel and stay updated with the latest news.

Next