ನವದೆಹಲಿ: ಎರಡು ಬೆಡ್‌ರೂಮ್, ಒಂದು ಲಾಂಜ್, ಪ್ರತ್ಯೇಕ ಅಡುಗೆ ಮನೆ ಹಾಗೂ ಪ್ರತ್ಯೇಕ ಶೌಚಾಲಯದಂತಹ ಪ್ರತ್ಯೇಕ ವ್ಯವಸ್ಥೆಯಿರುವ ರೈಲಿನಲ್ಲಿ ಪ್ರಯಾಣಿಸಲು ನೀವು ಬಯಸಿದ್ದೀರಾ? ಹಾಗಾದರೆ ಶೀಘ್ರದಲ್ಲೇ ನಿಮ್ಮ ಈ ಕನಸು ನನಸಾದೀತು. ವೆಚ್ಚ ವಿಪರೀತವಾದರೂ, ಇಂಥದ್ದೊಂದು ಸೌಲಭ್ಯವನ್ನು ಕಲ್ಪಿಸಲು ರೈಲ್ವೆ ಇಲಾಖೆ ಮುಂದಾಗಿದೆ.
ಈ ಸಂಬಂಧ ಮೊದಲ ಹಂತದ ಮಾತುಕತೆಯನ್ನು ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೋಹಾನಿ,ಪ್ರಯಾಣ ಹಾಗೂ ವ್ಯಾಪಾರ ಸಂಘಟನೆಯ ಮುಖ್ಯಸ್ಥರು ನಡೆಸಿದ್ದು, ಈ ವ್ಯವಸ್ಥೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿ ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಇಂತಹ ವ್ಯವಸ್ಥೆಯ ಬಗ್ಗೆ ಗ್ರಾಹಕರು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸದ್ಯಕ್ಕೆ ಕನಿಷ್ಠ ಎರಡು ಸೆಟಪ್‌ಗ್ಳನ್ನು ನಿರ್ಮಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಲೊಹಾನಿ ಸೂಚಿಸಿದ್ದಾರೆ. ಇದು ಯಾವ ಮಾರ್ಗಕ್ಕೆ ಸೂಕ್ತ ಎಂದು ಪರಿಶೀಲಿಸುವಂತೆ ಐಆರ್‌ಸಿಟಿಸಿಗೆ ಸೂಚಿಸಲಾಗಿದೆ. ಇವು ಸಾಮಾನ್ಯವಾಗಿ ಎರಡು ಕುಟುಂಬಗಳು ಐದು ದಿನಗಳವರೆಗೆ ಪ್ರಯಾಣಿಸಲು ಸೂಕ್ತವಾಗಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸದ್ಯ ರೈಲ್ವೆ ಬಳಿ 336 ಸಲೂನ್ ಕಾರ್‌ಗಳಿವೆ. ಇವುಗಳನ್ನು ರೈಲ್ವೆ ಅಧಿಕಾರಿಗಳು ತಪಾಸಣೆಗೆ ಹಾಗೂ ಅಪಘಾತ ಸ್ಥಳಗಳಿಗೆ ತ್ವರಿತವಾಗಿ ತಲುಪಲು ಬಳಸುತ್ತಾರೆ. ಈ ಪೈಕಿ ಕೇವಲ 62 ಕಾರ್‌ಗಳು ಹವಾನಿಯಂತ್ರಿತ ವ್ಯವಸ್ಥೆ ಹೊಂದಿವೆ. ಇದೇ ರೀತಿಯ ಕಾರ್‌ಗಳನ್ನು ನಿರ್ಮಿಸಿ, ಅತ್ಯಾಧುನಿಕ ಮಾದರಿಯಲ್ಲಿ ತಯಾರಿಸಲಾಗುತ್ತದೆ. ಈ ಕಾರ್‌ಗಳು ಸದ್ಯ ಒಂದು ರಾತ್ರಿಯ ಪ್ರಯಾಣಕ್ಕೆ ಸೂಕ್ತವಾಗಿರುವಂತೆ ನಿರ್ಮಿಸಲ್ಪಟ್ಟಿದೆ.