Advertisement
ನಗರದ ಎಲ್ಲಾ ಬಡಾವಣೆಯ ಎಲ್ಲಾ ರಸ್ತೆ ಬದಿಯಲ್ಲೂ ಸಮೃದ್ಧವಾಗಿ ಬೆಳೆದಿರುವ ಗುಲ್‌ಮೊಹಾರ್, ಹೊಂಗೆ, ಟ್ಯಬೂಬಿಯ, ಬೇವು ಸೇರಿದಂತೆ ಹಲವಾರು ಜಾತಿಯ ಮರಗಳು ಗಾಳಿ, ನೆರಳನ್ನು ನೀಡುವ ಮೂಲಕ ಮೈಸೂರು ನಗರವನ್ನು ಹಸಿರಾಗಿಸಿದ್ದವು.
Related Articles
Advertisement
ಕಿಡಿಗೇಡಿ ಕೃತ್ಯವೇ ಹೆಚ್ಚು: ನಗರದ ಬಹುಪಾಲು ಬಡಾವಣೆಗಳಲ್ಲಿ ಮನೆ, ಅಂಗಡಿ ಹಾಗೂ ವಾಣಿಜ್ಯ ಮಳಿಗೆಗಳ ಮುಂದಿರುವ ದೊಡ್ಡ ದೊಡ್ಡ ಮರಗಳು ಒಣಗುತ್ತಿವೆ. ಕಾರಣ ಹುಡುಕಿ ಹೋದರೆ, ಮರದ ಎಲೆ ಹಾಗೂ ಹೂಗಳು ಉದುರುವುದರಿಂದ ಪ್ರತಿದಿನ ಕಸ ತೆಗೆಯಲು ಸಾಧ್ಯವಾಗದಿರುವುದು,
ಅಂಗಡಿ ಮತ್ತು ವಾಣಿಜ್ಯ ಮಳಿಗೆಗಳ ಬಾಗಿಲು ಮುಂಭಾಗ ಮರಗಳು ಇದ್ದರೆ ಗ್ರಾಹಕರಿಗೆ ಕಾಣಿಸುವುದಿಲ್ಲ ಎಂಬ ಕಾರಣದಿಂದಾಗಿ ಮರಕ್ಕೆ ಮೊಳೆ ಹೊಡೆಯುವುದು, ಆ್ಯಸಿಡ್ ಹಾಕುವುದು ಹಾಗೂ ಮರದ ಬುಡದಲ್ಲಿ ಸಣ್ಣ ಗುಂಡಿ ತೆಗೆದು ಆ್ಯಸಿಡ್ ಸುರಿಯುವುದು ಅವ್ಯಾಹತವಾಗಿದೆ. ಇದರ ಜೊತೆಗೆ ಮರಗಳ್ಳರ ಕುತಂತ್ರದಿಂದಲೂ ಬೃಹತ್ ಮರಗಳು ನಾಶವಾಗುತ್ತಿರುವುದು ನಗರದಲ್ಲಿ ಸಾಮಾನ್ಯವಾಗಿದೆ.
ಪಾಲಿಕೆ ನಿರ್ಲಕ್ಷ್ಯ ಧೋರಣೆ: ನಗರದ ಎಲ್ಲಾ ಬಡಾವಣೆ ಹಾಗೂ ಮುಖ್ಯ ರಸ್ತೆಗಳ ಬದಿಯಲ್ಲಿರುವ ಬರಗಳ ಬುಡದಲ್ಲಿ ಒಂದಿಂಚು ಜಾಗವನ್ನು ಬಿಡದೇ ಡಾಂಬರು ಹಾಕುತ್ತಿರುವುದು ಒಂದೆಡೆಯಾದರೆ, ಫುಟ್‌ಪಾತ್ ನಿರ್ಮಾಣ ಮಾಡಿ ಮರದ ಬುಡ ಸೇರಿದಂತೆ ಟೈಲ್ಸ್ ಮತ್ತು ಗಾರೆ ಹಾಕಿ ಮುಚ್ಚಲಾಗಿದೆ. ಇದರಿಂದ ಮಳೆ ಸುರಿದ ವೇಳೆ ನೀರು ಇಂಗದೆ ಹರಿದು ಹೋಗುವುದರಿಂದ, ಅತಿ ಹೆಚ್ಚು ನೀರು ಬೇಡುವ ದೊಡ್ಡ ಮರಗಳು ನೀರಿಲ್ಲದೇ ಒಣಗುತ್ತಿವೆ.
ಜೊತೆಗೆ ಭೂಮಿಯಲ್ಲಿ ನೀರಿನ ಮಟ್ಟ ಕಡಿಮೆಯಾದ ಹಿನ್ನೆಲೆ ದೊಡ್ಡ ಮರ ಹೊರತು ಪಡಿಸಿ ಉಳಿದ ಸಣ್ಣ ಪ್ರಮಾಣದ ಮರಗಳು ನೀರಿನಾಂಶವಿಲ್ಲದೇ ನೆಲಕ್ಕುರುಳುವ ತವಕದಲ್ಲಿವೆ. ಇಷ್ಟಾದರೂ ಪಾಲಿಕೆ ಮರಗಳನ್ನು ಉಳಿಸುವ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಒಂದಿಷ್ಟೂ ಕೆಲಸ ಮಾಡದಿರುವುದು ಪರಿಸರವಾದಿಗಳ ಆಕ್ರೋಶಕ್ಕೆ ಗುರಿಯಾಗಿದೆ.
ಮರಗಳು ಉಳಿಯಲು ಏನು ಮಾಡಬೇಕು: ಇನ್ನಾದರು ಮೈಸೂರು ನಗರಪಾಲಿಕೆ ಹಾಗೂ ಅರಣ್ಯ ಇಲಾಖೆ ಜೊತೆಗೂಡಿ ಉಳಿದಿರುವ ಮರಗಳನ್ನು ಉಳಿಸು ಅಗತ್ಯ ಕ್ರಮತೆಗೆದುಕೊಳ್ಳಬೇಕು. ಈಗಾಗಲೇ ಮರದ ಬುಡಕ್ಕೆ ಹಾಕಿರುವ ಡಾಂಬರು ಮತ್ತು ಸಿಮೆಂಟನ್ನು ತೆರವು ಮಾಡಿ, ಮರದ ಸುತ್ತಾ ಎರಡು ಅಡಿಯಷ್ಟು ಜಾಗ ಬಿಡಬೇಕು.
ಪ್ರತಿ ಮರದ ಬುಡದಲ್ಲಿ ಮಳೆ ನೀರು ಇಂಗುವ ವ್ಯವಸ್ಥೆ ಮಾಡಬೇಕು. ಮರ ಕಡಿಯದಂತೆ ಎಚ್ಚರ ವಹಿಸುವ ಜೊತೆಗೆ ಜನರಲ್ಲಿ ಮರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು. ಒಣಗಿದ ಮರ ತೆರವುಗೊಳಿಸಿದ ಬಳಿಕ ಆ ಸ್ಥಳದಲ್ಲಿ ಹೊಸ ಗಿಡ ನೆಡುವ ಯೋಜನೆ ರೂಪಿಸಬೇಕು.
ಮರಗಳ ಬುಡಕ್ಕೆ ಡಾಂಬರು, ಸಿಮೆಂಟ್: ಮೈಸೂರು ನಗರಪಾಲಿಕೆ ರಸ್ತೆ ಮತ್ತು ಫುಟ್‌ಪಾತ್ ಅಭಿವೃದ್ಧಿ ಹೆಸರಿನಲ್ಲಿ ಮರಗಳ ಬುಡಕ್ಕೆ ಡಾಂಬರು ಮತ್ತು ಸಿಮೆಂಟ್ ಹಾಕಿ ಮರಗಳಿಗೆ ಜೀವಂತವಾಗಿ ಗೋರಿ ಕಟ್ಟುತ್ತಿದ್ದಾರೆ. ಜೊತೆಗೆ ಅನಗತ್ಯವಾಗಿ ಮರಗಳನ್ನು ತೆರವುಗೊಳಿಸಲಾಗುತ್ತಿದೆ.
ಈ ಪ್ರಕ್ರಿಯೇ ಸ್ಪಷ್ಟವಾಗಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ನನಗೂ ಇದಕ್ಕೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ. ಮರವನ್ನು ಕತ್ತರಿಸಿದ ನಂತರ ಆ ಸ್ಥಳದಲ್ಲಿ ಗಿಡಗಳನ್ನು ನೆಡುವ ಸಾಮಾನ್ಯ ಪರಿಜ್ಞಾನವೂ ನಮ್ಮ ಅಧಿಕಾರಿಗಳಿಗೆ ಇಲ್ಲವಾಗಿದೆ ಎಂದು ಅಧಿಕಾರಿಗಳ ನಿರ್ಲಕ್ಷ್ಯ ಕುರಿತು ಪರಿಸರವಾದಿ ಭಾನುಮೋಹನ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ವರ್ಷವೊಂದಕ್ಕೆ ಮೈಸೂರಿನಲ್ಲಿ 4 ಸಾವಿರದಿಂದ 5 ಸಾವಿರ ಮರಗಳು ನಾನಾ ಕಾರಣಗಳಿಂದ ಕಣ್ಮರೆಯಾಗುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ಹತ್ತು ವರ್ಷದಲ್ಲಿ ಮೈಸೂರು ಬರಡಾಗುವುದು ಖಚಿತ. ಶುದ್ಧ ಗಾಳಿ, ನೀರು ಹಾಗೂ ನೆರಳಿಗೆ ಇಲ್ಲಿನ ಪ್ರತಿ ನಾಗರಿಕನು ಪರಿತಪಿಸುವಂತಾಗುತ್ತದೆ ಎಂಬುದು ಪರಿಸರವಾದಿಗಳ ಆತಂಕವಾಗಿದೆ.
ನಗರಪಾಲಿಕೆ ಮುಂದಿನ ಮುಂಗಾರಿನಲ್ಲಿ 1 ಸಾವಿರ ಗಿಡ ನೆಡುವ ಯೋಜನೆಯನ್ನು ರೂಪಿಸಿದೆ. ಜೊತೆಗೆ ಮರದ ಬುಡಕ್ಕೆ ಹಾಕಿರುವ ಡಾಂಬರ್ ಮತ್ತು ಸಿಮೆಂಟಿನಿಂದ ಮರಗಳು ನೀರಿಲ್ಲದೇ ಒಣಗುತ್ತಿರುವುದರಿಂದ , ಡಾಂಬರು ಹಾಗೂ ಸಿಮೆಂಟನ್ನು ತೆಗೆದು, ಪಾತಿ ನಿರ್ಮಿಸಿ ನೀರು ಇಂಗುವಂತೆ ಮಾಡಲು ಎಲ್ಲಾ ವಲಯ ಕಚೇರಿಗಳಿಗೂ ಸೂಚನೆ ನೀಡಲಾಗುವುದು. -ಸದಾಶಿವ ಚಟ್ನಿ, ಪಾಲಿಕೆ ಅಸಿಸ್ಟೆಂಟ್ ಎಕ್ಸಿಕ್ಯುಟಿವ್ ಎಂಜಿನಿಯರ್ * ಸತೀಶ್ ದೇಪುರ