ಬೆಂಗಳೂರು: ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ನೀಡುವಂತೆ ಪರಿಚಿತ ಐಎಎಸ್ ಅಧಿಕಾರಿಗಳಿಗೆ ಶಿಫಾರಸು ಮಾಡಿಸಿ ತಹಶೀಲ್ದಾರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಯುವತಿಗೆ 59 ಲಕ್ಷ ರೂ. ವಂಚಿಸಿದ್ದ ಆರೋಪಿಯನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಮೂಲದ ಸವಿತಾ ಶಾಂತಪ್ಪ ಯಳಸಂಗೀಕರ್ ಕೊಟ್ಟ ದೂರಿನ ಆಧಾರದ ಮೇಲೆ ವಿಜಯನಗರ ಠಾಣೆ ಪೊಲೀಸರು ಸಿದ್ದರಾಜ್ ಸುಭಾಷ್ ಚಂದ್ರ ಕಟ್ಟಿಮನಿ ಎಂಬಾತನನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಕೆಎಎಸ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾಗ ಯುವತಿಗೆ ಆರೋಪಿ ಪರಿಚಯವಾಗಿದ್ದ. ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಪರಿಚಿತರೆಂದು ಸಿದ್ದರಾಜು ನಂಬಿಸಿದ್ದ. ನಿಮಗೆ ಕೆಎಎಸ್ ಪರೀಕ್ಷೆಯಲ್ಲಿ ಅನುಕೂಲಕರ ಅಂಕಗಳನ್ನು ನೀಡುವಂತೆ ಶಿಫಾರಸು ಮಾಡಿಸಿ ತಹಶೀಲ್ದಾರ್ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದ. ಇದಕ್ಕೆ ಒಂದಿಷ್ಟು ಹಣ ಖರ್ಚಾಗುತ್ತದೆ ಎಂದು ಹೇಳಿ ಹಂತ-ಹಂತವಾಗಿ ಸವಿತಾ ಅವರಿಂದ 59 ಲಕ್ಷ ರೂ. ಅನ್ನು ಪಡೆದಿದ್ದ.
ಇದನ್ನೂ ಓದಿ: ಪದೇ ಪದೇ ಜಾಗ ಬದಲಾಯಿಸುತ್ತಿದ್ದ ಪ್ರವೀಣ್ ಹಂತಕರು : ಆರೋಪಿಗಳ ಮಾಹಿತಿ ಬಿಚ್ಚಿಟ್ಟ ಎಡಿಜಿಪಿ
ಮತ್ತೆ ಆರೋಪಿ ಹಣಕ್ಕೆ ಬೇಡಿಕೆಯಿಟ್ಟಾಗ ಹಣ ಹಿಂತಿರುಗಿಸುವಂತೆ ಸವಿತಾ ಕೇಳಿದ್ದರು. ಹಣ ಹಿಂತಿರುಗಿಸಲು ಒಪ್ಪದ ಸಿದ್ದರಾಜು, ಏನು ಮಾಡುತ್ತಿಯಾ ಮಾಡು, ಹಣ ವಾಪಸ್ ಕೊಡುವುದಿಲ್ಲ ಎಂದು ಬೆದರಿಸಿದ್ದ. ನೊಂದ ಯುವತಿ ಈ ಬಗ್ಗೆ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.