Advertisement
ಈ ಕಾಯಿಲೆಯು ಮೂತ್ರಪಿಂಡಗಳನ್ನು ಗಮನಾರ್ಹವಾಗಿ ಬಾಧಿಸುತ್ತದೆ ಮತ್ತು ಸರಿಯಾದ ಸಮಯದಲ್ಲಿ ಸೂಕ್ತವಾದ ಚಿಕಿತ್ಸೆ ನೀಡದೆ ಇದ್ದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಲ್ಲುದಾಗಿದೆ. ಲೂಪಸ್ ನೆಫ್ರೈಟಿಸ್, ಅದರ ಕಾರಣಗಳು, ಲಕ್ಷಣಗಳು, ರೋಗಪತ್ತೆ, ಚಿಕಿತ್ಸೆ ಮತ್ತು ರೋಗಿಗಳು ಈ ಬಗ್ಗೆ ತಿಳಿವಳಿಕೆ ಹೊಂದಿರುವುದರ ಪ್ರಾಮುಖ್ಯದ ಬಗ್ಗೆ ಈ ಲೇಖನದಲ್ಲಿ ಚರ್ಚಿಸಲಾಗಿದೆ.
Related Articles
Advertisement
ಲೂಪಸ್ ಮೂತ್ರಪಿಂಡಗಳಲ್ಲಿ ಉರಿಯೂತ ವನ್ನು ಉಂಟಾಗುವುದಕ್ಕೆ ಕಾರಣವಾದಾಗ ಲೂಪಸ್ ನೆಫ್ರೈಟಿಸ್ ತಲೆದೋರುತ್ತದೆ. ಲೂಪಸ್ ನೆಫ್ರೈಟಿಸ್ ಉಂಟಾದಾಗ ಮೂತ್ರಪಿಂಡಗಳು ಹಾನಿಗೀಡಾಗುತ್ತವೆ, ಇದರಿಂದ ಅವುಗಳು ಸರಿಯಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗುವುದಿಲ್ಲ.
ಲೂಪಸ್ ನೆಫ್ರೈಟಿಸ್‌ಗೆ ಕಾರಣಗಳು
ಲೂಪಸ್ ಅಥವಾ ಲೂಪಸ್ ನೆಫ್ರೈಟಿಸ್ ಉಂಟಾಗುವುದಕ್ಕೆ ನಿರ್ದಿಷ್ಟ ಕಾರಣಗಳಿಲ್ಲ. ಆದರೆ ಲೂಪಸ್ ನೆಫ್ರೈಟಿಸ್ ತಲೆದೋರುವ ಅಪಾಯವನ್ನು ಹೆಚ್ಚಿಸುವ ಕೆಲವು ಅಂಶಗಳಿದ್ದು, ಅವು ಹೀಗಿವೆ:
ವಂಶವಾಹಿಗಳು: ಕುಟುಂಬದಲ್ಲಿ ಲೂಪಸ್ ನೆಫ್ರೈಟಿಸ್ ಹೊಂದಿದವರು ಇದ್ದರೆ ಮಕ್ಕಳು ಕೂಡ ಲೂಪಸ್‌ಗೆ ತುತ್ತಾಗುವ ಅಪಾಯ ಹೆಚ್ಚಿರುತ್ತದೆ.
ಹಾರ್ಮೋನ್ ಅಂಶಗಳು: ಹಾರ್ಮೋನ್ ಬದಲಾವಣೆಗಳು ಈ ಕಾಯಿಲೆಯ ಮೇಲೆ ಪ್ರಭಾವ ಬೀರಬಹುದಾಗಿದ್ದು, ಇದೇ ಕಾರಣದಿಂದ ಲೂಪಸ್ ಮಹಿಳೆಯರಲ್ಲಿ ಹೆಚ್ಚು ಉಂಟಾಗುತ್ತದೆ.
ಪಾರಿಸರಿಕ ಪ್ರಚೋದಕಗಳು: ಸೂರ್ಯನ ಕಿರಣಗಳು, ಸೋಂಕುಗಳು ಮತ್ತು ಕೆಲವು ಔಷಧಗಳು ಲೂಪಸ್ ಉಲ್ಬಣಗೊಳ್ಳಲು ಕಾರಣವಾಗಬಹುದು.
ರೋಗ ನಿರೋಧಕ ವ್ಯವಸ್ಥೆಯ ತಪ್ಪು ಕಾರ್ಯಾಚರಣೆ: ರೋಗ ನಿರೋಧಕ ವ್ಯವಸ್ಥೆಯ ಅತೀ ಕ್ರಿಯಾತ್ಮಕ ಮತ್ತು ತಪ್ಪು ಕಾರ್ಯಾಚರಣೆಯಿಂದ ಮೂತ್ರಪಿಂಡಗಳ ಸಹಿತ ದೇಹದ ವಿವಿಧ ಅಂಗಗಳಲ್ಲಿ ಉರಿಯೂತ ಹಾನಿ ಉಂಟಾಗಬಹುದು.
ಲೂಪಸ್ ನೆಫ್ರೈಟಿಸ್ ಲಕ್ಷಣಗಳು
ಕಾಲುಗಳಲ್ಲಿ ಊತ: ದೇಹದಲ್ಲಿ ದ್ರವಾಂಶ ಉಳಿದುಕೊಳ್ಳುವುದರಿಂದ ಕಾಲುಗಳು, ಪಾದಗಳು ಮತ್ತು ಮುಖದಲ್ಲಿ ಊತ ಕಂಡುಬರಬಹುದು.
ಮೂತ್ರದಲ್ಲಿ ಬದಲಾವಣೆ: ಲೂಪಸ್ ನೆಫ್ರೈಟಿಸ್‌ಗೆ ತುತ್ತಾಗಿರುವ ರೋಗಿಗಳ ಮೂತ್ರವು ಗಾಢ ಬಣ್ಣದ್ದಾಗಿರಬಹುದು, ನೊರೆ ನೊರೆಯಾಗಿರಬಹುದು ಮತ್ತು ರಕ್ತ ಕಂಡುಬರಬಹುದು.
ಅಧಿಕ ರಕ್ತದೊತ್ತಡ: ಮೂತ್ರಪಿಂಡಕ್ಕಾಗುವ ಹಾನಿಯಿಂದಾಗಿ ಅಧಿಕ ರಕ್ತದೊತ್ತಡ ಕಂಡುಬರಬಹುದು.
ದಣಿವು; ಲೂಪಸ್ ರೋಗಿಗಳಲ್ಲಿ ಸತತ ದಣಿವು ಅಥವಾ ದೌರ್ಬಲ್ಯ ಸಾಮಾನ್ಯ ಲಕ್ಷಣವಾಗಿರುತ್ತದೆ.
ಜ್ವರ: ವಿವರಿಸಲಾಗದ ಜ್ವರ ಕೂಡ ಕಂಡುಬರಬಹುದು.
ಲೂಪಸ್‌ನ ಇತರ ಲಕ್ಷಣಗಳು: ರೋಗಿಗಳು ಸಂಧಿಗಳಲ್ಲಿ ನೋವು, ಚರ್ಮದಲ್ಲಿ ದದ್ದುಗಳು, ಕೂದಲು ಉದುರುವಿಕೆ ಮತ್ತು ಬಾಯಿ ಹುಣ್ಣುಗಳನ್ನು ಅನುಭವಿಸಬಹುದು.
ಲೂಪಸ್ ನೆಫ್ರೈಟಿಸ್ ರೋಗಪತ್ತೆ ಪ್ರಯೋಗಾಲಯ ಪರೀಕ್ಷೆಗಳು
ಮೂತ್ರ ಪರೀಕ್ಷೆ: ಮೂತ್ರದಲ್ಲಿ ಪ್ರೊಟೀನ್, ರಕ್ತ ಮತ್ತು ಇತರ ಅಸಹಜ ಸ್ರಾವಗಳನ್ನು ಪತ್ತೆ ಹಚ್ಚಲು ಮೂತ್ರ ಪರೀಕ್ಷೆ ನಡೆಸಲಾಗುತ್ತದೆ.
ರಕ್ತ ಪರೀಕ್ಷೆಗಳು: ಮೂತ್ರಪಿಂಡದ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು ಮತ್ತು ಲೂಪಸ್‌ನ ಸಂಕೇತಗಳಾಗಿರುವ ಆ್ಯಂಟಿನ್ಯೂಕ್ಲಿಯರ್ ಆ್ಯಂಟಿಬಾಡಿಗಳು (ಎಎನ್‌ಎಗಳು) ಮತ್ತು ಆ್ಯಂಟಿ ಡಬಲ್ ಸ್ಟ್ರಾಂಡೆಡ್ ಡಿಎನ್‌ಎ ಆ್ಯಂಟಿಬಾಡಿಗಳನ್ನು ಪತ್ತೆಹಚ್ಚಲು ರಕ್ತ ಪರೀಕ್ಷೆಗಳನ್ನು ಉಪಯೋಗಿಸಲಾಗುತ್ತದೆ.
ಮೂತ್ರಪಿಂಡದ ಬಯಾಪ್ಸಿ: ಉರಿಯೂತ ಅಥವಾ ಮೂತ್ರಪಿಂಡಕ್ಕೆ ಹಾನಿ ಉಂಟಾಗಿರು ವುದನ್ನು ತಿಳಿಯುವುದಕ್ಕಾಗಿ ಮೂತ್ರಪಿಂಡದ ಕಿರು ಮಾದರಿಯೊಂದನ್ನು ಪಡೆದು ಪರೀಕ್ಷೆಗೆ ಒಳಪಡಿಸಿ ರೋಗಪತ್ತೆ ಮಾಡಲಾಗುತ್ತದೆ, ಇದು ಚಿಕಿತ್ಸೆಗೆ ಮಾರ್ಗದರ್ಶಿಯೂ ಆಗುತ್ತದೆ.
-ಡಾ| ಶಿವರಾಜ್ ಪಡಿಯಾರ್
ಅಸೋಸಿಯೇಟ್ ಪ್ರೊಫೆಸರ್
-ಡಾ| ಪ್ರತ್ಯೂಷಾ ಮಣಿಕುಪ್ಪಮ್
ಅಸಿಸ್ಟೆಂಟ್ ಪ್ರೊಫೆಸರ್
ಕ್ಲಿನಿಕಲ್ ಇಮ್ಯುನಾಲಜಿ ಮತ್ತು ರುಮಟಾಲಜಿ ವಿಭಾಗ
ಕೆಎಂಸಿ ಅತ್ತಾವರ, ಮಾಹೆ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರುಮಟಾಲಜಿ ವಿಭಾಗ, ಕೆಎಂಸಿ, ಮಂಗಳೂರು)