ಕನ್ನಡದಲ್ಲಿ ಮಂಗಳೂರು ಭಾಷೆ, ಸೊಗಡು ಮತ್ತು ಸೊಬಗು ಹೊಂದಿರುವ ಚಿತ್ರಗಳು ಬಂದಿರುವುದು ತೀರಾ ವಿರಳ. ಆ ಸಾಲಿಗೆ ಈಗಾಗಲೇ “ಒಂದು ಮೊಟ್ಟೆಯ ಕಥೆ’ ಚಿತ್ರ ಪಕ್ಕಾ ಮಂಗಳೂರು ಭಾಷೆ ಹೊತ್ತು ಬಂದು ನೋಡುಗರಲ್ಲಿ ಮನರಂಜನೆ ಜೊತೆಗೆ ಹೊಸದೊಂದು ಫೀಲ್ ಕೊಟ್ಟಿದ್ದು ಗೊತ್ತೇ ಇದೆ. ಈಗ ಪುನಃ, ಇಡೀ ಚಿತ್ರದಲ್ಲಿ ಮಂಗಳೂರು ಭಾಷೆ, ಸೊಗಡು ಮತ್ತು ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರ ಇರುವಂತಹ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ.
ಆ ಚಿತ್ರದ ಹೆಸರು “ಲುಂಗಿ’. ಹೌದು, ಬಹುತೇಕ ಹೊಸಬರೇ ಸೇರಿ ಮಾಡಿರುವ “ಲುಂಗಿ’ ಎಲ್ಲವೂ ಅಂದುಕೊಂಡಂತೆ ನಡೆದರೆ ಸೆಪ್ಟೆಂಬರ್‌ನಲ್ಲಿ ತೆರೆಗೆ ಬರಲು ಅಣಿಯಾಗುತ್ತಿದೆ. ಈಗಾಗಲೇ ಚಿತ್ರ ವೀಕ್ಷಿಸಿರುವ ಸೆನ್ಸಾರ್ ಮಂಡಳಿ, ಚಿತ್ರಕ್ಕೆ ಯಾವುದೇ ಮ್ಯೂಟ್, ಕಟ್ ಇಲ್ಲದೆ “ಯು’ ಪ್ರಮಾಣ ಪತ್ರ ನೀಡಿದೆ. ಕಳೆದ ಎರಡು ವರ್ಷಗಳ ಹಿಂದೆ ಶುರುವಾದ “ಲುಂಗಿ’ ತಡವಾಗಿದೆ. ಅದಕ್ಕೆ ಕಾರಣ, ಚಿತ್ರದ ಪರ್ಫೆಕ್ಷನ್ ಎಂಬುದು ಚಿತ್ರತಂಡದ ಮಾತು.
ಅಂದಹಾಗೆ, ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಅರ್ಜುನ್ ಲೂವಿಸ್ ಮತ್ತು ಅಕ್ಷಿತ್ ಶೆಟ್ಟಿ ಸೇರಿ ನಿರ್ದೇಶನ ಮಾಡಿದ್ದಾರೆ. ಈ ಪೈಕಿ ಅರ್ಜುನ್ ಲೂವಿಸ್ ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆದಿದ್ದಾರೆ. ತಮ್ಮ “ಲುಂಗಿ’ ಕುರಿತು ಹೇಳುವ ಅರ್ಜುನ್ ಲೂವಿಸ್, “ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಇನ್ನೊಂದು ಮುಖ್ಯ ವಿಷಯವೆಂದರೆ, ಮೇಕ್ ಇನ್ ಇಂಡಿಯಾ ಎಂಬ ಕಾನ್ಸೆಪ್ಟ್ ಕೂಡ ಚಿತ್ರದ ಹೈಲೈಟ್‌ಗಳಲ್ಲೊಂದು.
ಚಿತ್ರದ ಬಗ್ಗೆ ಹೇಳುವುದಾದರೆ, ಈಗಿನ ಜನರೇಷನ್‌ನ ಪ್ರತಿಯೊಬ್ಬರೂ ಡಿಗ್ರಿ ಮೇಲೆ ಡಿಗ್ರಿ ಮಾಡಿಕೊಂಡಿದ್ದಾರೆ. ಅಂಥವರು ಸಾಕಷ್ಟು ಉದ್ಯಮಿಗಳ ಕೆಳಗೆ ದುಡಿಮೆ ಮಾಡುತ್ತಿದ್ದಾರೆ. ಇನ್ನು ಕೆಲವರು ಕೆಲಸ ಅರಸಿ ವಿದೇಶಕ್ಕೂ ಹೋಗಿದ್ದಾರೆ. ಕೆಲಸ ದೊಡ್ಡದೇ ಇರಲಿ, ಚಿಕ್ಕದಾಗಿರಲಿ, ನಿಮ್ಮೂರಲ್ಲೇ ಮಾಡಿ ಎಂಬ ಸಂದೇಶದ ಜೊತೆಗೆ ನಾಡು, ನುಡಿ ಸಂಸ್ಕೃತಿ ಕುರಿತಾಗಿಯೂ ಹೇಳಲಾಗಿದೆ’ ಎಂದು ವಿವರ ಕೊಡುತ್ತಾರೆ ಅರ್ಜುನ್ ಲೂವಿಸ್. ಚಿತ್ರದ ಶೀರ್ಷಿಕೆ ನೋಡಿ, ಇದು ಪ್ರಯೋಗಾತ್ಮಕ ಚಿತ್ರ ಅಂದುಕೊಳ್ಳುವಂತಿಲ್ಲ. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ.
ಪ್ರಣವ್ ಹೆಗ್ಡೆ ನಾಯಕರಾಗಿದ್ದಾರೆ. ಅವರಿಗೆ ಅಹಲ್ಯಾ ಸುರೇಶ್ ಮತ್ತು ರಾಧಿಕಾ ರಾವ್ ನಾಯಕಿಯರಾಗಿದ್ದಾರೆ. ಇನ್ನುಳಿದಂತೆ ಮಂಗಳೂರಿನ ಬಹುತೇಕ ಕಲಾವಿದರ ದಂಡೇ ಇಲ್ಲಿರಲಿದೆ. ಪ್ರಕಾಶ್, ರೂಪ, “ರಂಗಿತರಂಗ’ ಖ್ಯಾತಿಯ ಕಾರ್ತಿಕ್ ವರದರಾಜ್ ಇತರರು ನಟಿಸಿದ್ದಾರೆ. ಚಿತ್ರವನ್ನು ಮುಖೇಶ್ ಹೆಗ್ಡೆ ನಿರ್ಮಾಣ ಮಾಡಿದ್ದಾರೆ. ಸುಮಾರು 45 ದಿನಗಳ ಕಾಲ ಚಿತ್ರೀಕರಿಸಲಾಗಿದೆ. ಪ್ರಸಾದ್ ಕೆ.ಶೆಟ್ಟಿ ಸಂಗೀತವಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ. ರಿಜ್ಜೋ ಪಿ.ಜಾನ್ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ ಎಂಬುದು ಚಿತ್ರತಂಡದ ಮಾತು.