ಮಾನ್ವಿ: ಪಟ್ಟಣದ ಬಸವ ವೃತ್ತದಲ್ಲಿರುವ ಹೋಟೆಲ್ ಮಾಲೀಕ ದುರ್ಗಾ ಪ್ರಸಾದ್ ಅವರು ಕಡಿಮೆ ದರದಲ್ಲಿ ಉಪಾಹಾರ ನೀಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ. ಕಳೆದ 4 ವರ್ಷಗಳಿಂದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಡಿಮೆ ದರದಲ್ಲಿ ಉಪಾಹಾರ ನೀಡುವ ಮೂಲಕ ತಾಲೂಕಿನ ಜನರ ಮೆಚ್ಚುಗೆ ಗಳಿಸಿದ್ದಾರೆ.
ನಿತ್ಯ 6 ಗಂಟೆಗೆ ಬಿಸಿ-ಬಿಸಿ ಇಡ್ಲಿ, 3ಕ್ಕೆ 10 ರೂ., ಉದ್ದಿನ ವಡ 3ಕ್ಕೆ 10 ರೂ., ಬೋಂಡಾ 3ಕ್ಕೆ 10 ರೂ., ಒಂದು ಪ್ಲೇಟ್ ಪಲಾವ್ 10 ರೂ., ಒಂದು ಪ್ಲೇಟ್ ಚಿತ್ರಾನ್ನ 10 ರೂ. ಜೊತೆಗೆ ಉರಿಗಡಲೆ ಚಟ್ನಿ, ಅಲ್ಲದಿಂದ ಮಾಡಿದ ಕೆಂಪು ಚಟ್ನಿ ನೀಡಲಾಗುತ್ತದೆ. ಇತರೆ ಉಪಾಹಾರವು ಕೂಡ ಇಲ್ಲಿ ಕೇವಲ 10 ರೂ.!
ದರ ಕಡಿಮೆ ಇದೆ ಎಂದು ರುಚಿ ಮತ್ತು ಶುಚಿಗೆ ಎಂದು ಇವರು ರಾಜಿ ಮಾಡಿಕೊಂಡಿಲ್ಲ. ಆಹಾರ ತಯಾರಿಕೆಗೆ ಗುಣಮಟ್ಟದ ಆಹಾರ ಧಾನ್ಯ, ವಿವಿಧ ತರಕಾರಿಗಳನ್ನು ಬಳಸಲಾಗುತ್ತದೆ. ನಿತ್ಯ 6 ಗಂಟೆಯಿಂದ 9 ಗಂಟೆಯವರಿಗೆ ವಿದ್ಯಾರ್ಥಿಗಳಿಗೆ ಆದ್ಯತೆ ನಂತರ ಬಡ ಜನರಿಗೆ ಕೂಡ ಕೇವಲ 10 ರೂ.ಗೆ ಉಪಾಹಾರದ ವ್ಯವಸ್ಥೆ ಇದೆ. ಕೆಲವೊಮ್ಮೆ ಹಣ ತರದೆ ಇರುವ ವಿದ್ಯಾರ್ಥಿನಿಯರಿಗೆ ಉಚಿತ ಉಪಾಹಾರ ನೀಡಿದ್ದು ಉಂಟು. ಆದ್ದರಿಂದ ನಿತ್ಯ ಬೆಳಗ್ಗೆ ನೂರಾರು ವಿದ್ಯಾರ್ಥಿಗಳ ದಂಡೆ ಉಪಾಹಾರ ಸೇವಿಸಲು ನೆರೆದಿರುತ್ತದೆ. ಇವರೆಲ್ಲರಿಗೂ ಹೋಟೆಲ್ ಮಾಲೀಕ ದುರ್ಗಾ ಪ್ರಸಾದ್ ಉಪಾಹಾರದ ಆತಿಥ್ಯ ನೀಡುವುದನ್ನು ಕಾಣಬಹುದು.
ಬರುವ ಲಾಭಾಂಶ ಕಡಿಮೆ ಮಾಡಿಕೊಂಡಲ್ಲಿ ಹಾಗೂ ಕುಟುಂಬದವರ ಸಹಕಾರ ಪಡೆದಲ್ಲಿ ಕೂಲಿ ಆಳುಗಳಿಗೆ ಮಾಡುವ ವೆಚ್ಚದಲ್ಲಿ ಕಡಿತವಾಗುವುದರಿಂದ ಕೇವಲ 10 ರೂ.ಗೆ ಉಪಾಹಾರ ನೀಡಿದರು ನಷ್ಟವಾಗುವುದಿಲ್ಲ ಹಾಗೂ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಿದ ತೃಪ್ತಿ ದೊರೆಯುತ್ತದೆ ಎನ್ನುತ್ತಾರೆ ಹೋಟೆಲ್ ಮಾಲೀಕ ದುರ್ಗಾ ಪ್ರಸಾದ್.