ನವದೆಹಲಿ: ಖಗೋಳಾಸಕ್ತರಿಗೆ ವಿಶೇಷಸುದ್ದಿಯೊಂದಿದೆ., ಎರಡು ತಿಂಗಳ ಅವಧಿಯಲ್ಲಿ ಮತ್ತೂಂದು ಖಗೋಳ ವಿಸ್ಮಯಕ್ಕೆ ಬಾನಂಗಳವು ಸಾಕ್ಷಿಯಾಗಲಿದೆ. ಕಳೆದ ವಾರವಷ್ಟೇ ಉಂಟಾದ ಸೂರ್ಯಗ್ರಹಣವು ಆಸ್ಟ್ರೇಲಿಯದ ಕೆಲವು ಭಾಗಗಳಲ್ಲಿ ಗೋಚರಿಸಿತ್ತು.
ಇದರ ಬೆನ್ನಲ್ಲೇ ಮುಂದಿನ ತಿಂಗಳು ವಿಶೇಷವಾದ ಚಂದ್ರಗ್ರಹಣ ಉಂಟಾಗಲಿದೆ. ಮೇ 5ರ ರಾತ್ರಿ 8.44ಕ್ಕೆ ಸೂರ್ಯ, ಚಂದ್ರ ಮತ್ತು ಭೂಮಿಯು ಸಮಾನಾಂತರ ರೇಖೆಗೆ ಬರಲಿದ್ದು, ಈ ಗ್ರಹಣವು ಅತ್ಯಂತ ವಿಶಿಷ್ಟವಾಗಿರಲಿದೆ. ಏಕೆಂದರೆ, ಮೇ ತಿಂಗಳ ಚಂದ್ರಗ್ರಹಣದ ಬಳಿಕ 19 ವರ್ಷಗಳ ಕಾಲ ಈ ಖಗೋಳ ವಿಸ್ಮಯ ನೋಡಲು ಸಿಗುವುದಿಲ್ಲ. ಅಂದರೆ, ಮುಂದಿನ ಅರೆ ನೆರಳು ಚಂದ್ರಗ್ರಹಣ ಗೋಚರಿಸುವುದು 2042ರ ಸೆಪ್ಟೆಂಬರ್‌ನಲ್ಲಿ!
ಭೂಮಿಯು ಸೂರ್ಯ ಮತ್ತು ಚಂದ್ರರ ನಡುವೆ ಬಂದಾಗ, ಚಂದ್ರನ ಮೇಲ್ಮೈ ಮೇಲೆ ಭೂಮಿಯ ನೆರಳು ಮೂಡುತ್ತದೆ. ಸೂರ್ಯ, ಭೂಮಿ ಮತ್ತು ಚಂದ್ರರ ನಡುವಿನ ಈ ಸಾಲುಗೂಡುವಿಕೆಯನ್ನು ಅರೆನೆರಳು ಚಂದ್ರಗ್ರಹಣ ಎಂದು ಕರೆಯಲಾಗುತ್ತದೆ. ಈ ದೃಶ್ಯವು ಅತ್ಯಂತ ಅಪರೂಪದ ಮತ್ತು ಅಭೂತಪೂರ್ವ ನೆರಳು-ಬೆಳಕಿನಾಟದಂತೆ ಗೋಚರಿಸುತ್ತದೆ.