Advertisement

ಇಂದು ಸಂಭವಿಸಲಿದೆ “ಅರೆನೆರಳಿನ ಚಂದ್ರ ಗ್ರಹಣ’

10:52 PM May 04, 2023 | Team Udayavani |

ಉಡುಪಿ: ಹುಣ್ಣಿಮೆಯ ಚಂದ್ರನು ಮೇ ತಿಂಗಳಲ್ಲಿ ಭೂಮಿಯ ಅರೆನೆರಳಲ್ಲಿ ಹಾದು ಹೋಗುವುದರಿಂದ ಮೇ 5ರಂದು ಅರೆನೆರಳಿನ ಚಂದ್ರ ಗ್ರಹಣ ಗೋಚರಿಸುತ್ತದೆ. ಈ ಗ್ರಹಣವು ಭಾರತದ ಎಲ್ಲ ಪ್ರದೇಶಗಳಲ್ಲಿ ರಾತ್ರಿ 8.44ರಿಂದ ಮರುದಿನ (ಮಧ್ಯರಾತ್ರಿ) 1.01 ಗಂಟೆಯ ವರೆಗೆ ನಡೆಯಲಿದೆ. ಗರಿಷ್ಠ ಗ್ರಹಣವು ರಾತ್ರಿ 10.52ಕ್ಕೆ ಗೋಚರಿಸಲಿದೆ.

Advertisement

ಈ ಗ್ರಹಣವು ಭೂಮಿಯ ಅರೆನೆರಳಿನಲ್ಲಿ ಚಂದ್ರನು ಬಂದಾಗ ಸಂಭವಿಸುತ್ತದೆ. ಯಾವುದೇ ವಸ್ತುವಿನ ನೆರಳಿನಲ್ಲಿ ಗರಿಷ್ಠ ಕತ್ತಲಿನ ಭಾಗವನ್ನು ನೆರಳು ಮತ್ತು ಆ ನೆರಳಿನ ಹೊರ ತುದಿಯಲ್ಲಿರುವ ಮಸುಕಾದ ನೆರಳನ್ನು “ಅರೆನೆರಳು’ ಎಂದು ಗುರುತಿಸುತ್ತಾರೆ. ಚಂದ್ರನು ಭೂಮಿಯ ಅರೆನೆರಳಿನಲ್ಲಿ ಹಾದು ಹೋಗುವಾಗ “ಅರೆನೆರಳಿನ ಚಂದ್ರ ಗ್ರಹಣ’ ಎನ್ನುತ್ತಾರೆ. ಇದೇ ರೀತಿ ಚಂದ್ರನು ಭೂಮಿಯ ನೆರಳಿನಿಂದ ಹಾದು ಹೋಗುವಾಗ ಅದು ಪಾರ್ಶ್ವ ಗ್ರಹಣ ಅಥವಾ ಖಗ್ರಾಸ ಚಂದ್ರ ಗ್ರಹಣವಾಗಿರುತ್ತದೆ.

ಅರೆನೆರಳಿನ ಚಂದ್ರ ಗ್ರಹಣವನ್ನು ವೀಕ್ಷಿಸುವುದು ಕಷ್ಟ. ಭೂಮಿಯ ಅರೆನೆರಳು ಮಸುಕಾಗಿರುವುದರಿಂದ ಚಂದ್ರನ ಮೇಲೆ ಈ ನೆರಳನ್ನು ಗಮನಿಸುವುದು ಸುಲಭವಲ್ಲ. ಬರಿಗಣ್ಣಿನಲ್ಲಿ ನೋಡುವಾಗ ಗರಿಷ್ಠ ಗ್ರಹಣದ ಸಮಯ ಚಂದ್ರ, ಸಾಮಾನ್ಯ ಹುಣ್ಣಿಮೆ ಚಂದ್ರನಿಗಿಂತ ಸ್ವಲ್ಪ ಕಡಿಮೆ ಪ್ರಕಾಶಮಾನದಿಂದ ಗೋಚರಿಸುತ್ತದೆ.

ಭಾರತದ ಎಲ್ಲ ಪ್ರದೇಶಗಳಿಂದ ಈ ಗ್ರಹಣವನ್ನು ನೋಡಬಹುದು. ಭಾರತ ಸೇರಿದಂತೆ ದಕ್ಷಿಣ ಏಶ್ಯಾದ ಎಲ್ಲ ದೇಶಗಳಲ್ಲಿ, ರಶ್ಯಾ, ಆಸ್ಟ್ರೇಲಿಯಾದಲ್ಲಿ ಈ ಗ್ರಹಣ ಗೋಚರಿಸುತ್ತದೆ. ಈ ಗ್ರಹಣವನ್ನು ಬರಿಗಣ್ಣಿನಿಂದ ಸುರಕ್ಷಿತವಾಗಿ ವೀಕ್ಷಿಸಬಹುದು ಎಂದು ಪಿಪಿಸಿ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅತುಲ್‌ ಭಟ್‌ ತಿಳಿಸಿದ್ದಾರೆ.

ಧಾರ್ಮಿಕ ಆಚರಣೆ ಇಲ್ಲ
ಇಂತಹ ಗ್ರಹಣವನ್ನು ಜ್ಯೋತಿಷ ಶಾಸ್ತ್ರದ ಪ್ರಕಾರ “ಮಾಂದ್ಯಗ್ರಹಣ’ ಎಂದು ಕರೆಯುತ್ತಾರೆ. ಈ ಸಮಯ ಚಂದ್ರನು ತುಸು ಮಸುಕಾಗಿ ಕಾಣುತ್ತಾನೆ. ಇದಕ್ಕೆ ಯಾವುದೇ ಧಾರ್ಮಿಕ ಆಚರಣೆ ಇಲ್ಲ. ಇದೇ ರೀತಿ 2024ರ ಮಾ. 25ರಂದು ಹಗಲಿನಲ್ಲಿ ಮಾಂದ್ಯ ಚಂದ್ರಗ್ರಹಣ ಸಂಭವಿಸಲಿದ್ದು ಭಾರತದಲ್ಲಿ ಗೋಚರಿಸುವುದಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next