Advertisement

ಗಂಗಾಧರ ಹತ್ಯೆ ಪತ್ತೆಗೆ ಲುಮಿನೌಲ್‌ ಪರೀಕ್ಷೆ

11:49 AM Jul 04, 2018 | Team Udayavani |

ವಿಜಯಪುರ: ಭೀಮಾ ತೀರದ ಗಂಗಾಧರ ಚಡಚಣ ಹತ್ಯೆ ಪ್ರಕರಣದಲ್ಲಿ ಶವ ಪತ್ತೆಯಾಗದ ಕಾರಣ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಲುಮಿನೌಲ್‌ ಪರೀಕ್ಷೆಗೆ ಮುಂದಾಗಿದ್ದಾರೆ. ಹತ್ಯೆ ಪ್ರಕರಣದಲ್ಲಿ ಮೃತ ದೇಹ ಪತ್ತೆಯಾಗದ ಸಂದರ್ಭದಲ್ಲಿ ವಿಧಿ ವಿಜ್ಞಾನ ಪರೀಕ್ಷೆಯ ಪ್ರಮುಖ ಅಂಶವಾದ ಲುಮಿನೌಲ್‌ ಪರೀಕ್ಷೆ ನಡೆಸಲಾಗುತ್ತದೆ.

Advertisement

ಇದರಲ್ಲಿ ಎರಡು ವಿಧಗಳಿದ್ದು, ಘಟನಾ ಸ್ಥಳದಲ್ಲಿ ನಡೆಸುವ ಪರೀಕ್ಷೆ ಹಾಗೂ ಘಟನಾ ಸ್ಥಳದ ಮಣ್ಣಿನ ಮಾದರಿ ಪರೀಕ್ಷೆ. ಈ ಎರಡೂ ವಿಧಿ ವಿಜ್ಞಾನ ಪರೀಕ್ಷಾ ವಿಧಾನಗಳಿಂದ ಹತ್ಯೆಯ ಖಚಿತತೆಗೆ ವೈದ್ಯಕೀಯ ಪರೀಕ್ಷೆಯ ನೆರವು ಪಡೆಯಲಾಗುತ್ತದೆ. ಇದನ್ನೇ ಲುಮಿನೌಲ್‌ ಪರೀಕ್ಷೆ ಎನ್ನುತ್ತಾರೆ.

ಹತ್ಯೆ ನಡೆದ ಶಂಕಿತ ಸ್ಥಳದಲ್ಲಿ ಕೆಮಿ ಲುಮಿಸೆನ್ಸ್‌ ಟೈಪ್‌ ಆಫ್‌ ಬ್ಲಿಡ್‌ ಮಾದರಿಯಲ್ಲಿ ಕೆಮಿ ಲುವಿನೌಲ್‌ ರಾಸಾಯನಿಕ ಸಿಂಪಡಿಸಿದಾಗ ಮಿಂಚಿನಂತೆ ಬೆಳಕು ಮೂಡುತ್ತದೆ. ಮನುಷ್ಯರ ರಕ್ತದ ಕಣಗಳು ಚೆಲ್ಲಿದ್ದರೆ ಮಾತ್ರ ಇಂತ ಬೆಳಕು ಹೊರಹೊಮ್ಮಲಿದೆ. ಮನುಷ್ಯನ ಹೊರತಾಗಿ ಇತರೆ ಪ್ರಾಣಿಗಳ ರಕ್ತ ಚೆಲ್ಲಿದ್ದರೆ ಈ ರೀತಿ ಬೆಳಕು ಬರುವುದಿಲ್ಲ.

ಇದೇ ಪರೀಕ್ಷೆಯ ಇನ್ನೊಂದು ವಿಧಾನದಲ್ಲಿ ಶಂಕಿತ ಸ್ಥಳದ ಮಣ್ಣಿನ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿದಾಗ ರಕ್ತ ಚೆಲ್ಲಿದ ಮಣ್ಣಿದ್ದರೆ ಬೆಳಕು ಹೊರ ಹೊಮ್ಮುತ್ತದೆ. ಇದರಿಂದ ಹತ್ಯೆಯ ಅಪರಾಧ ಕೃತ್ಯ ನಡೆಸಿರುವುದು ಖಚಿತವಾಗುತ್ತದೆ. ಹೀಗಾಗಿ ಗಂಗಾಧರ ಶವ ದೊರೆಯದ ಕಾರಣ ಹತ್ಯೆ ನಡೆದ ಸ್ಥಳದಲ್ಲಿ ಲುಮಿನೌಲ್‌ ಪರೀಕ್ಷೆ ನಡೆಸಲಾಗಿದೆ. ರಾಜ್ಯದ ತನಿಖಾ ಪ್ರಕರಣದಲ್ಲಿ ಇಂಥ ಪರೀಕ್ಷೆ ಇದೇ ಮೊದಲು ಎನ್ನಲಾಗಿದೆ.

ಏನಿದು ಪ್ರಕರಣ?: 2017, ಅ.30ರಂದು ಎಸೈ ಗೋಪಾಲ ಹಳ್ಳೂರ ಕೊಂಕಣಗಾಂವ್‌ ಗ್ರಾಮದ ತೋಟದ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಆರೋಪದಲ್ಲಿ ಧರ್ಮರಾಜ ಚಡಚಣನನ್ನು ಎನ್‌ಕೌಂಟರ್‌ ಮಾಡಿದ್ದರು. ಅದೇ ದಿನ ಧರ್ಮರಾಜನ ತಮ್ಮ ಗಂಗಾಧರ ಕಾಣೆಯಾಗಿದ್ದ. ಗಂಗಾಧರನ ತಾಯಿ ತನ್ನ ಮಗ ಕಾಣೆಯಾಗಿದ್ದು, ಮಹಾದೇವ ಭೈರಗೊಂಡ ಹತ್ಯೆ ಮಾಡಿದ್ದಾನೆಂದು ದೂರು ನೀಡಿದ್ದರು.

Advertisement

ತನಿಖೆ ನಡೆಸಿದ ಪೊಲೀಸರು ಧರ್ಮರಾಜನ ಹತ್ಯೆಯಾದ ದಿನವೇ ಗಂಗಾಧರನನ್ನು ವಶಕ್ಕೆ ಪಡೆದಿದ್ದ ಎಸೈ ಗೋಪಾಲ ಹಳ್ಳೂರ ನಂತರ ಚಡಚಣ ಕುಟುಂಬದ ವೈರಿ ಮಹಾದೇವ ಭೈರಗೊಂಡ ಬಂಟರಿಗೆ ಗಂಗಾಧರನನ್ನು ಹಸ್ತಾಂತರಿಸಿದ್ದ. ಆಗ ನಾವೇ ಗಂಗಾಧರನನ್ನು ಕೊಚ್ಚಿ ಹತ್ಯೆ ಮಾಡಿದ್ದಾಗಿ ಭೈರಗೊಂಡ ಬಂಟ ಹನುಮಂತ ಪೂಜಾರಿ ಪೊಲೀಸರಿಗೆ ಸೆರೆ ಸಿಕ್ಕ ವೇಳೆ ಬಾಯಿ ಬಿಟ್ಟಿದ್ದ.

ಕೆಂಚಗಾಂವ ಗ್ರಾಮದ ಮಹಾದೇವ ಭೈರಗೊಂಡಗೆ ಸೇರಿದ ಜಮೀನಿನಲ್ಲಿ ಹತ್ಯೆ ಮಾಡಿದ್ದಾಗಿ ಹನುಮಂತ ಪೂಜಾರಿ ಹಾಗೂ ಇತರ ಆರೋಪಿಗಳು ಬಾಯಿ ಬಿಟ್ಟಿದ್ದಾರೆ. ಆದರೆ ಗಂಗಾಧರನ ಕೈ-ಕಾಲು ಕತ್ತರಿಸಿ ಹತ್ಯೆ ಮಾಡಿ, ಶವವನ್ನು ಭೀಮಾ ನದಿಗೆ ಎಸೆದಿದ್ದಾಗಿ ಹೇಳಿಕೆ ನೀಡಿದ್ದ. ಬಳಿಕ ಎಸೈ ಗೋಪಾಲ ಹಳ್ಳೂರ ಸೇರಿ ನಾಲ್ವರು ಪೊಲೀಸರು ಹಾಗೂ ಹತ್ಯೆ ಆರೋಪಿ ಹನುಮಂತ ಸೇರಿ ಇನ್ನಿಬ್ಬರನ್ನು ಬಂ ಧಿಸಿದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು.

ಘಟನೆಯಲ್ಲಿ ಪೊಲೀಸರು ಭಾಗಿಯಾಗಿದ್ದು, ಗಂಭೀರ ಪ್ರಕರಣ ಎಂಬ ಕಾರಣಕ್ಕೆ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ಈ ಹಂತದಲ್ಲಿ ಪ್ರಕರಣದ ಮತ್ತೆ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿದ್ದರು. ಹತ್ಯೆಯಾಗಿದ್ದಾನೆ ಎಂದು ಹಂತಕ ಆರೋಪಿಗಳೇ ಹೇಳಿಕೆ ನೀಡಿದ್ದರೂ ಶವ ಮಾತ್ರ ಪತ್ತೆಯಾಗಿಲ್ಲ. ಗಂಗಾಧರನ ಶವ ಅಥವಾ ಆತನ ದೈಹಿಕ ಅಂಗಾಂಶಗಳ ಕುರುಹುಗಳು ಪತ್ತೆಯಾಗದ ಹೊರತು ಪ್ರಕರಣ ತನಿಖೆ ಗಟ್ಟಿಯಾಗದು. ಹೀಗಾಗಿ ಪೊಲೀಸರು ವಿಧಿವಿಜ್ಞಾನ ಪರೀಕ್ಷೆಯ ವಿಶೇಷ ವಿಧಾನವಾದ ಲುಮಿನೌಲ್‌ ಮೂಲಕ ತನಿಖೆ ಮಾಡಲು ಮುಂದಾಗಿದ್ದಾರೆ.

ಹತ್ಯೆ ಕೃತ್ಯದಲ್ಲಿ ಶವ ಪತ್ತೆಯಾಗದ ಸಂದರ್ಭದಲ್ಲಿ ಲುಮಿನೌಲ್‌ ಎಂಬ ಪರೀಕ್ಷೆ ಮಾಡಲಾಗುತ್ತದೆ. ಇದರಲ್ಲಿ ಎರಡು ವಿಧಗಳಿದ್ದು, ಹತ್ಯೆ ಸಂದರ್ಭದಲ್ಲಿ ರಕ್ತ ಸೋರಿದ್ದರೆ ನೆಲಕ್ಕೆ ಲುಮಿನೌಲ್‌ ಕೆಮಿಕಲ್‌ ಸಿಂಪಡಿಸಿದಾಗ ಪ್ರಕಾಶಮಾನ ಬೆಳಕು ಹೊರಡುತ್ತದೆ. ಆಗ ಶವ ಸಿಗದಿದ್ದರೂ ಹತ್ಯೆ ಕೃತ್ಯ ನಡೆದುದನ್ನು ಖಚಿತವಾಗಿ ಹೇಳಲು ಸಾಧ್ಯ.
-ಡಾ| ಡಿ.ಜಿ. ಗಣ್ಣೂರು, ಮುಖ್ಯಸ್ಥರು, ಫೋರೆನ್ಸಿಕ್‌ ಮೆಡಿಸಿನ್‌, ಬಿಎಲ್‌ಡಿಇ ವೈದ್ಯಕೀಯ ಕಾಲೇಜು, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next