ಹುಣಸೂರು: ದೇಶಾದ್ಯಂತ ತಂತ್ರಜ್ಞಾನ ಬಳಸಿ ವ್ಯವಹಾರ ನಡೆಸುತ್ತಿರುವ ಸಂದರ್ಭದಲ್ಲೇ ಹುಣಸೂರು ಪ್ರಾದೇಶಿಕ ಅರಣ್ಯ ವಿಭಾಗವು ಸಹ ಇ-ಟೆಂಡರ್ ಮೂಲಕ ಮರಗಳ ನಾಟಾ ಹರಾಜು ಮಾಡಲಾರಂಭಿಸಿದೆ.ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಕಲ್ಲಬೆಟ್ಟ ಅರಣ್ಯ ನಾಟಾ ಸಂಗ್ರಹಾಲಯದಲ್ಲಿ ಮರಗಳನ್ನು ಇ-ಟೆಂಡರ್ ಮೂಲಕ ಹರಾಜು ಹಾಕಲಾಯಿತು.
ಹುಣಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲ ಚಂದ್ರ ನೇತೃತ್ವದಲ್ಲಿ ನಡೆದ ಹರಾಜು ಪ್ರಕ್ರಿಯೆ ಯಲ್ಲಿ ತೇಗ, ಅಕೇಶಿಯಾ, ನೀಲಗಿರಿ ಸೇರಿ ವಿವಿಧ ಜಾತಿಯ 1393 ಲಾಟ್‌ಗಳ ಪೈಕಿ 277 ಲಾಟ್ ಮರಗಳು ಹರಾಜಾಗಿದ್ದು, 39.61 ಲಕ್ಷ ರೂ. ಸಂಗ್ರಹ ವಾಗಿದೆ.ಆರಂಭದಲ್ಲಿ ಖರೀದಿದಾರರಿಗೆ ಇ-ಟೆಂಡರ್ ಪದ್ಧತಿ ಹೊಸ ವ್ಯವಸ್ಥೆಯಾಗಿದ್ದರಿಂದ ತಾಂತ್ರಿಕ ಸಮಸ್ಯೆ ಎದುರಾದರೂ ಬಳಿಕ ಸುಗಮವಾಗಿ ನಡೆಯಿತು.
ಸರ್ಕಾರ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ನಮೂದಿಸಿದ್ದರಿಂದ 1,116 ಲಾಟ್‌ನ ಮರಗಳು ಹರಾಜಾಗಲಿಲ್ಲ, ಈ ಮರಗಳ ಲಾಟನ್ನು ಬರುವ ಮಾರ್ಚ್‌ನಲ್ಲಿ ಮತ್ತೆ ಇ-ಟೆಂಡರ್ ಮೂಲಕ ಹರಾಜು ಹಾಕಲಾಗುತ್ತದೆ. ಹರಾಜು ಪ್ರಕ್ರಿಯೆಯಲ್ಲಿ ಸಹಕರಿಸಿದ ರಾಷ್ಟ್ರೀಯ ಇ-ಮಾರುಕಟ್ಟೆಯ ನೋಡೆಲ್ ಅಧಿಕಾರಿ ವಿನಾಯಕ ಕೋಟಿಕರ್ ಮಾತನಾಡಿ, ಹಿಂದೆ ಪ್ರಾಯೋಗಿಕವಾಗಿ ಮರ ಹರಾಜನ್ನು ಬೆಳಗಾವಿ, ದಾಂಡೇಲಿ, ಕುಶಾಲನಗರದಲ್ಲಿ ಇ-ಮಾರುಕಟ್ಟೆ ಮೂಲಕ ನಡೆಸಲಾಗಿತ್ತು.
ಇನ್ನು ಮುಂದೆ ಇ-ಟೆಂಡರ್ ಮೂಲಕವೇ ನಡೆಸಲು ಇಲಾಖೆ ಉದ್ದೇಶಿಸಿದ್ದು, ಪ್ರಥಮ ಬಾರಿಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂದು ಮಾಹಿತಿ ನೀಡಿದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೋಮಪ್ಪ, ಕಲ್ಲಬೆಟ್ಟ ಸರಕಾರಿ ನಾಟಾ ಸಂಗ್ರಹಾಲಯದ ವಲಯ ಅರಣ್ಯಾಧಿಕಾರಿ ಧನಲಕ್ಷ್ಮೀ, ರೆವ್ಸ್‌ನ ಎಲ್ಲಪ್ಪ ಕಾಡಗೋಳ, ರೈತರು, ಮರದ ವ್ಯಾಪಾರಿಗಳು ಹಾಜರಿದ್ದರು.
* ಸಂಪತ್‌ಕುಮಾರ್