Advertisement

IND V/s ENG: ಹಾರ್ಟಿ ಶಾಕ್‌; ಭಾರತಕ್ಕೆ ಹಾರ್ಟ್‌ಬ್ರೇಕ್‌

10:42 PM Jan 28, 2024 | Team Udayavani |

ಹೈದರಾಬಾದ್‌: ತಾನೇ ತೋಡಿದ್ದ ಸ್ಪಿನ್‌ ಖೆಡ್ಡಕ್ಕೆ ಬಿದ್ದ ಭಾರತ, ಹೈದರಾಬಾದ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 28 ರನ್ನುಗಳಿಂದ ಸೋತು ತೀವ್ರ ಮುಖಭಂಗ ಅನುಭವಿಸಿದೆ. 5 ಪಂದ್ಯಗಳ ಸರಣಿಯಲ್ಲಿ ಬೆನ್‌ ಸ್ಟೋಕ್ಸ್‌ ಪಡೆ 1-0 ಮುನ್ನಡೆ ಸಾಧಿಸಿದೆ.

Advertisement

ಗೆಲುವಿಗೆ 231 ರನ್ನುಗಳ ಸಾಮಾನ್ಯ ಗುರಿ ಪಡೆದ ರೋಹಿತ್‌ ಪಡೆ, ಮೊದಲ ಟೆಸ್ಟ್‌ ಆಡು ತ್ತಿರುವ ಎಡಗೈ ಸ್ಪಿನ್ನರ್‌ ಟಾಮ್‌ ಹಾರ್ಟಿ ದಾಳಿಗೆ ತತ್ತರಿಸಿ 202ಕ್ಕೆ ಆಲೌಟ್‌ ಆಯಿತು. ಹಾರ್ಟಿ 62 ರನ್‌ ವೆಚ್ಚದಲ್ಲಿ 7 ವಿಕೆಟ್‌ ಕೆಡವಿ ಟೀಮ್‌ ಇಂಡಿಯಾಕ್ಕೆ ಏಳುಗತಿ ಇಲ್ಲದಂತೆ ಮಾಡಿದರು.

190 ರನ್ನುಗಳ ಬೃಹತ್‌ ಮುನ್ನಡೆಯ ಹೊರ ತಾಗಿಯೂ ಈ ಪಂದ್ಯವನ್ನು ಉಳಿಸಿಕೊಳ್ಳ ಲಾಗದಿದ್ದುದು ಭಾರತದ ಟೆಸ್ಟ್‌ ಕ್ರಿಕೆಟ್‌ಗೆ ಬಿದ್ದ ದೊಡ್ಡ ಹೊಡೆತ. ಯಾರೂ ನಿಂತು ಆಡದ, ದೊಡ್ಡ ಜತೆಯಾಟ ನಡೆಸದ ಪರಿಣಾಮ ಈ ಹೀನಾಯ ಸೋಲನ್ನು ಹೊತ್ತುಕೊಳ್ಳಬೇಕಾಯಿತು. ಜತೆಗೆ ಎರಡು ಸ್ಟಂಪ್ಡ್ ಔಟ್‌, ಒಂದು ರನೌಟ್‌ ಕೂಡ ಭಾರತಕ್ಕೆ ಮುಳುವಾಯಿತು.

ಇದು ಹೈದರಾಬಾದ್‌ನಲ್ಲಿ ಭಾರತಕ್ಕೆ ಎದು ರಾದ ಮೊದಲ ಆಘಾತ. 2013ರ ಬಳಿಕ ತವರಲ್ಲಿ ಅನುಭವಿಸಿದ 4ನೇ ಸೋಲು. ಇಂಗ್ಲೆಂಡ್‌ ವಿರುದ್ಧ ಎದುರಾದ ಕನಿಷ್ಠ ರನ್‌ ಅಂತರದ ಸೋಲು ಕೂಡ ಹೌದು. 2018ರ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯವನ್ನು 31 ರನ್ನುಗಳಿಂದ ಸೋತದ್ದು ಹಿಂದಿನ ದಾಖಲೆ ಆಗಿತ್ತು.

ದ್ವಿಶತಕ ವಂಚಿತ ಪೋಪ್‌
ಓಲೀ ಪೋಪ್‌ ಅವರ ಮ್ಯಾರಥಾನ್‌ ಬ್ಯಾಟಿಂಗ್‌ ಸಾಹಸದಿಂದ ಇಂಗ್ಲೆಂಡ್‌ ಈ ಪಂದ್ಯಕ್ಕೆ ಮರಳುವಲ್ಲಿ ಯಶಸ್ವಿಯಾಗಿತ್ತು. ಪೋಪ್‌ ಕೇವಲ 4 ರನ್ನಿನಿಂದ 2ನೇ ದ್ವಿಶತಕದಿಂದ ವಂಚಿತರಾದರು. ಆದರೆ 190 ರನ್‌ “ಸಾಲ’ವನ್ನು ಅವರೊಬ್ಬರೇ ಚುಕ್ತಾ ಮಾಡುವ ಮೂಲಕ ಟೆಸ್ಟ್‌ ಪಂದ್ಯದಲ್ಲಿ ಹೇಗೆ ಬ್ಯಾಟಿಂಗ್‌ ನಡೆಸಬೇಕೆಂಬುದನ್ನು ತೋರಿಸಿ ಕೊಟ್ಟರು. ಆದರೆ ಭಾರತ ತಂಡದವರಿಗೆ ಮಾತ್ರ ಇದು ಪಾಠ ಆಗಲಿಲ್ಲ. ಬೇಜವಾಬ್ದಾರಿಯುತ ಆಟಕ್ಕೆ ತಕ್ಕ ಬೆಲೆ ತೆತ್ತರು.

Advertisement

ಇಂಗ್ಲೆಂಡ್‌ 6ಕ್ಕೆ 316 ರನ್‌ ಗಳಿಸಿದಲ್ಲಿಂದ 4ನೇ ದಿನದಾಟ ಮುಂದುವರಿಸಿತ್ತು. ಉಳಿದ 4 ವಿಕೆಟ್‌ಗಳಿಂದ ಮತ್ತೆ 104 ರನ್‌ ಸೇರಿಸಿತು. 148ರಲ್ಲಿದ್ದ ಪೋಪ್‌ 196ರ ತನಕ ಬೆಳೆದರು. ಇನ್ನೇನು ಒಂದೇ ಒಂದು ಬೌಂಡರಿ ಬಾರಿಸಿ ಡಬಲ್‌ ಸೆಂಚುರಿ ಪೂರೈಸಬೇಕೆನ್ನುವಾಗಲೇ ಬುಮ್ರಾ ಎಸೆತದಲ್ಲಿ ಬೌಲ್ಡ್‌ ಆದರು. 278 ಎಸೆತಗಳ ಈ ಆಪತ್ಕಾಲದ ಆಟದಲ್ಲಿ 21 ಬೌಂಡರಿ ಸೇರಿತ್ತು.

ಕಳಪೆ ಬ್ಯಾಟಿಂಗ್‌
ಚೇಸಿಂಗ್‌ ವೇಳೆ ಭಾರತ ಯಾವ ಹಂತದಲ್ಲೂ ಸಕಾರಾತ್ಮಕ ಆಟ ಆಡಲಿಲ್ಲ. 39 ರನ್‌ ಮಾಡಿದ ನಾಯಕ ರೋಹಿತ್‌ ಶರ್ಮ ಅವರದೇ ಹೆಚ್ಚಿನ ಗಳಿಕೆ. ಜೈಸ್ವಾಲ್‌ (15) ಮತ್ತು ಗಿಲ್‌ (0) ಅವರನ್ನು ಒಂದೇ ಓವರ್‌ನಲ್ಲಿ ಕೆಡವಿದ ಹಾರ್ಟಿ ಆತಿಥೇಯರ ಕುಸಿತಕ್ಕೆ ಚಾಲನೆ ನೀಡಿದರು. ಇದಕ್ಕೆ ನಮ್ಮವರೂ ಸಹಕರಿಸಿದರು!

ರಾಹುಲ್‌ (22), ಭಡ್ತಿ ಪಡೆದು ಬಂದ ಅಕ್ಷರ್‌ ಪಟೇಲ್‌ (17), ಅಯ್ಯರ್‌ (13), ಜಡೇಜ (2) ಅವರಿಂದ ಯಾವುದೇ ನೆರವು ಲಭಿಸಲಿಲ್ಲ. ಭರತ್‌ ಮತ್ತು ಅಶ್ವಿ‌ನ್‌ ಜತೆಗೂಡಿದಾಗ ಒಂದಿಷ್ಟು ಭರವಸೆ ಮೂಡಿತ್ತು. 8ನೇ ವಿಕೆಟಿಗೆ 57 ರನ್‌ ಒಟ್ಟುಗೂಡಿತು. ಈ ಜೋಡಿಯನ್ನು ಬೇರ್ಪಡಿಸಿದ ಹಾರ್ಟಿ ಮತ್ತೆ ಭಾರತಕ್ಕೆ ಕಂಟಕವಾದರು.

ದ್ವಿತೀಯ ಟೆಸ್ಟ್‌ ಫೆ. 2ರಂದು ವಿಶಾಖಪಟ್ಟಣ ದಲ್ಲಿ ಆರಂಭವಾಗಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next