“ನಾನು ಒಂದೇ ಒಂದು ದಿನಕ್ಕೂ ಡಬ್ಬಲ್ ಮೀನಿಂಗ್ ಮಾತಾಡಿದವನಲ್ಲ, ಆ ಬಗ್ಗೆ ಯೋಚನೆ ಸಹ ಮಾಡಿದವನಲ್ಲ …’ ಇಂಥದ್ದೊಂದು ಮಾತು “ಗಾಲಿ’ ಖ್ಯಾತಿಯ ಲಕ್ಕಿಯಿಂದ ಬಂದರೆ ಆಶ್ಚರ್ಯವಾಗುತ್ತದೋ ಇಲ್ಲವೋ ನೀವೇ ಹೇಳಿ? ಲಕ್ಕಿ ಹಾಗೆ ಹೇಳಿದಾಗ ಪತ್ರಕರ್ತರಿಗೂ ಅದೇ ರೀತಿ ಆಶ್ಚರ್ಯವಾಯಿತು. ನಾಳೆ ಅವರ ನಿರ್ದೇಶನದ “ಏನ್ ನಿನ್ ಪ್ರಾಬ್ಲಿಮ್ಮು’ ಎಂಬ ಚಿತ್ರ ಬಿಡುಗಡೆಯಾಗುತ್ತಿದೆ. ಈ ಟ್ರೇಲರ್‌ನಲ್ಲೂ ಹೆಚ್ಚು ಸುದ್ದಿಯಾಗುತ್ತಿರುವುದು ಡಬ್ಬಲ್ ಮೀನಿಂಗ್ ಸಂಭಾಷಣೆಗಳೇ. ಹಾಗಿರುವಾಗ ಲಕ್ಕಿ ಬಾಯಿಂದ ಈ ಮಾತು ಕೇಳಿ, ಎಲ್ಲರಿಗೂ ಆಶ್ಚರ್ಯವಾಯಿತು.
ಆದರೆ, ಇಲ್ಲಿ ಆಶ್ಚರ್ಯಪಡುವಂತದ್ದೇನೂ ಇಲ್ಲ, ತಮ್ಮ ಮಾತು ನಿಜ ಎನ್ನುತ್ತಾರೆ ಲಕ್ಕಿ. “ನಾನು ಒಂದೇ ಒಂದು ದಿನಕ್ಕೂ ಡಬ್ಬಲ್ ಮೀನಿಂಗ್ ಮಾತಾಡಿದವನಲ್ಲ, ಆ ಬಗ್ಗೆ ಯೋಚನೆ ಸಹ ಮಾಡಿದವನಲ್ಲ. ಆದರೂ ನಾನು ಈ ಡಬ್ಬಲ್ ಮೀನಿಂಗ್ ಸಂಭಾಷಣೆಗಳನ್ನು ಬರೆಯಬೇಕೆಂದರೆ ಅದಕ್ಕೆ ಕಾರಣ ಅನಿವಾರ್ಯತೆ. ಅನಿವಾರ್ಯತೆಗೆ ಸಿಕ್ಕಿ ಬರೆಯಬೇಕಾಗಿ ಬಂದಿದೆ. ಇಲ್ಲಿ ಒಂದೋ ಸ್ಟಾರ್ ಇರಬೇಕು. ಇಲ್ಲ ಇಂಥದ್ದೇನಾದರೂ ಇರಬೇಕು. ಏನೂ ಇಲ್ಲ ಅಂದರೆ ಕಷ್ಟ.
“ಗಾಲಿ’ಯಲ್ಲಿ ಡಬ್ಬಲ್ ಮೀನಿಂಗ್ ಇತ್ತು, ಅದು ನನ್ನನ್ನ ಚಿತ್ರರಂಗಕ್ಕೆ ಪರಿಚಯಿಸಿತು. ಆ ಚಿತ್ರವನ್ನ ನಾನು ಮಾಡಿದ್ದು 28 ಲಕ್ಷಕ್ಕೆ. ಬಿಝಿನೆಸ್ ಆಗಿದ್ದು ಒಂದು ಕೋಟಿ ಮೂರು ಲಕ್ಷಕ್ಕೆ. ಆಮೇಲೆ “ರೇನ್ ಕೋಟ್’ ಅಂತ ಚಿತ್ರ ಮಾಡಿದೆ. ಇದರಲ್ಲಿ ದ್ವಂದ್ವಾರ್ಥ ಸಂಭಾಷಣೆ ಕಡಿಮೆ ಇತ್ತು. ಚಿತ್ರ ರೀಚ್ ಆಗಲೇ ಇಲ್ಲ. ನಂತರ “ಮಾತು-ಕಥೆ’ ಎಂಬ ಸಿನಿಮಾ ಮಾಡಿದೆ. ಇದಲ್ಲಿ ಡಬ್ಬಲ್ ಮೀನಿಂಗ್ ಸಂಭಾಷಣೆ ತುಂಬಾ ಕಡಿಮೆ ಇತ್ತು. ಮೊದಲ ದಿನವೇ 12 ಚಿತ್ರಮಂದಿರಗಳು ಕ್ಯಾನ್ಸಲ್ ಆಯಿತು.
ಅದರ ಸಾಲ ಈಗಲೂ ಕಟ್ಟುತ್ತಲೇ ಇದ್ದೀನಿ …’ “ಯಾವುದೇ ವಿತರಕರ ಆಫೀಸಿಗೆ ಹೋದರೂ, ಹೀರೋ ಯಾರು ಅಂತ ಕೇಳ್ತಾರೆ, ಇಲ್ಲ ಟ್ರೇಲರ್ ಹಿಟ್ ಆಗಿದ್ಯಾ ಅಂತಾರೆ. ದೊಡ್ಡ ಹೀರೋ ಹಾಕಿಕೊಂಡು ಸಿನಿಮಾ ಮಾಡೋಕೆ ನಮಗಾಗಲಲ್ಲ. ಇನ್ನು ಟ್ರೇಲರ್ ಹಿಟ್ ಮಾಡಿಸಬೇಕು ಅಂದರೆ ಇವೆಲ್ಲಾ ಅನಿವಾರ್ಯ. ಅದರಿಂದ ಬಿಡುಗಡೆಗೂ ಸಹಾಯ ಆಗತ್ತೆ, ನಾವು ಚಿತ್ರ ಮಾಡಬಹುದು.
“ಮಾತು-ಕಥೆ’ ಅಂತ ಚಿತ್ರ ಮಾಡಿದಾಗ, ಎಷ್ಟೋ ವಿತರಕರ ಆಫೀಸ್‌ಗಳಲ್ಲಿ ನನಗೆ ಚೇರ್ ಸಹ ಸಿಗುತ್ತಿರಲಿಲ್ಲ. “ಏನ್ ನಿನ್ನ ಪ್ರಾಬ್ಲಿಮ್ಮು’ ಚಿತ್ರದ ಟ್ರೇಲರ್ ಹಿಟ್ ಆಗಿರುವುದರಿಂದ ರಾಜ ಮರ್ಯಾದೆ ಸಿಗುತ್ತಿದೆ. ಇನ್ನು ಡಬ್ಬಲ್ ಮೀನಿಂಗ್ ಸಂಭಾಷಣೆಯಿಂದ ನೆಗೆಟಿವ್ ಸಹ ಇದೆ. ಕೆಲವರು ಬಾಯಿಗೆ ಬಂದಹಾಗೆ ಬೈತಾರೆ. ಅಮ್ಮ ಅನ್ನೋ ಪದ ಬಳಸಿ ಏನೇನೋ ಕರೀತಾರೆ. ಎಷ್ಟೋ ಜನ ನನ್ನ ಜೊತೆಗೆ ಗುರುತಿಸಿಕೊಳ್ಳೋಕೆ ಹೆದರುತ್ತಾರೆ. ಸಮಾರಂಭಗಳಲ್ಲಿ ನನ್ನ ಪಕ್ಕ ಕೂರೋಕೆ ಸಂಕೋಚ ಪಡುತ್ತಾರೆ.
ಇವೆಲ್ಲಾ ಸಹಿಸಿಕೊಳ್ಳೋದು ಬಹಳ ಕಷ್ಟ. ಆದರೆ, ಅನಿವಾರ್ಯತೆಯಿಂದ ಏನೂ ಮಾಡುವ ಹಾಗಿಲ್ಲ. ಇಷ್ಟಲ್ಲಾ ಸಮಸ್ಯೆಗಳ ಮಧ್ಯೆ ಚಿತ್ರ ಮಾಡಬೇಕು, ಇಲ್ಲ ಬಿಡಬೇಕು’ ಎನ್ನುತ್ತಾರೆ ಲಕ್ಕಿ. “ಏನ್ ನಿನ್ ಪ್ರಾಬ್ಲಿಮ್ಮು’ ಚಿತ್ರಕ್ಕೆ ಲಕ್ಕಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. “ತಿಥಿ’ ಖ್ಯಾತಿಯ ಸೆಂಚ್ಯುರಿ ಗೌಡ, ಗಡ್ಡಪ್ಪ, ಅಭಿ ಮುಂತಾದವರು ಇಲ್ಲಿ ನಟಿಸಿದ್ದಾರೆ. ನವೀನ್ ಸಜ್ಜು ಸಂಗೀತ ನಿರ್ದೇಶಕರು.